ತಾಲೂಕು ಪಂಚಾಯ್ತಿಯ ಸಾಮಾನ್ಯ ಸಭೆ

ಹರಪನಹಳ್ಳಿ:

     ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಖಾಸಗಿ ಬೋರ್ ವೆಲ್ ಗಳ ಮಾಲಿಕರಿಂದ ಪಡೆದ ನೀರಿನ ಬಾಡಿಗೆ ಈವರೆಗೂ ಪಾವತಿ ಮಾಡಿಲ್ಲ , ಹೀಗಾದರೆ ಅವರೂ ಮುಂದೆ ನೀರು ಕೊಡುವುದಿಲ್ಲ ಎಂದು ಮತ್ತಿಹಳ್ಳಿ ಪ್ರಕಾಶ, ಕಂಚಿಕೇರಿ ಗ್ರಾ.ಪಂ ಅಧ್ಯಕ್ಷ ಬಸವರಾಜಪ್ಪ ಅಸಮಾದಾನ ವ್ಯಕ್ತ ಪಡಿಸಿದ ಘಟನೆ ತಾಲೂಕು ಪಂಚಾಯ್ತಿಯ ಸಾಮಾನ್ಯ ಸಭೆಯಲ್ಲಿ ಬುಧವಾರ ಜರುಗಿತು.

       ಬರ ದಿಂದ ತತ್ತರಿಸಿರುವ ತಾಲೂಕಿನ ವಿವಿಧೆಡೆ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಪಕ್ಷ ಬೇದ ಮರೆತು ಆಗ್ರಹಿಸಿದ ಸದಸ್ಯರು ಕಂಚಿಕೇರಿ, ಅರಸನಾಳು, ಮಾಚಿಹಳ್ಳಿ, ಮುಂತಾದ ಅನೇಕ ಹಳ್ಳಿಗಳಲ್ಲಿ ವಿವಿಧ ಕಾರಣಗಳಿಂದ ಕುಡಿಯುವ ನೀರಿನ ಸಮಸ್ಯೆ ತಲೆ ದೋರಿದೆ, ಜನರು ನಮಗೆ ಭೈಯುತ್ತಾರೆ, ಕುಡಿಯುವ ನೀರು ಕೊಡಿ ಎಂದು ಆಯಾ ಭಾಗದ ಸದಸ್ಯರುಗಳಾದ ಹುಣ್ಸಿಹಳ್ಳಿ ಪ್ರಕಾಶ, ಸುಮಿತ್ರ, ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟೇಶರೆಡ್ಡಿ, ಕಂಚಿಕೇರಿ ಈರಣ್ಣ, ಹುಲ್ಲಿಕಟ್ಟಿ ಚಂದ್ರಪ್ಪ, ಚಿಗಟೇರಿ ಬಸವನಗೌಡ, ಕಂಚಿಕೇರಿ ಗ್ರಾ.ಪಂ ಅಧ್ಯಕ್ಷ ಬಸವರಾಜಪ್ಪ ಮತ್ತಿತರರು ಆಗ್ರಹಿಸಿದರು.

         ಆಗ ಅಧ್ಯಕ್ಷೆ ಅನ್ನಪೂರ್ಣಮ್ಮ ಹಾಗೂ ಉಪಾದ್ಯಕ್ಷ ಮಂಜನಾಯ್ಕ ಅವರು ನೀರು ಕೊಟ್ಟ ಖಾಸಗಿ ಬೋರ್ ವೆಲ್ ಗ್ರಾಮಸ್ಥರಿಗೆ ಕೂಡಲೇ ಬಾಡಿಗೆ ಹಣ ಪಾವತಿಸಿ ಎಂದು ಸಂಬಂಧಪಟ್ಟವರಿಗೆ ಸೂಚಿಸಿದರು. ಕುಡಿಯುವ ನೀರು ನೈರ್ಮಲ್ಯ ಉಪವಿಭಾಗದ ಎಇಇ ಜಯಣ್ಣ ಅವರು ನೀರಿನ ಸಮಸ್ಯೆ ಪರಿಹರಿಸಲು 4.20 ಕೋಟಿ ರು. ಗಳಿಗೆ ಅನುಮೋದನೆ ಸಿಕ್ಕಿದೆ, ಬೇಗ ಸಮಸ್ಯೆ ನೀಗಿಸುತ್ತೇವೆ ಎಂದು ಹೇಳಿದರು.

         ಈ ಸಂದರ್ಭದಲ್ಲಿ ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಕಾರ್ಯನಿರ್ವಾಹಕ ಅಧಿಕಾರಿ ಮಮತಾ ಹೊಸಗೌಡರು ಅವರು ಕುಡಿಯುವ ನೀರಿನ ಸಮಸ್ಯೆ ಇರುವ ಕಡೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

        ವಲಯ ಪ್ರಾದೇಶಿಕ ಅರಣ್ಯಾಧಿಕಾರಿ ಶಂಕರ್‍ನಾಯ್ಕ್ ಸಭೆಗಳಿಗೆ ಹಾಜರಾಗುತ್ತಿಲ್ಲ ಯಾಕೆ ಎಂದು ಸದಸ್ಯ ಪ್ರಕಾಶ್ ಪ್ರಶ್ನಿಸಿದರು. ಅವರನ್ನು ಸಭೆಗೆ ಕರೆಸಿ ಎಂದು ಉಳಿದ ಸದಸ್ಯರು ದ್ವನಿಗೂಡಿಸಿದರು. ಕಾರ್ಯನಿರ್ವಾಹಕ ಅಧಿಕಾರಿ ಮಮತಾ ಹೊಸಗೌಡ ತಾಪಂ ಸಿಬ್ಬಂದಿ ವಿಜಯ್ ಕುಮಾರ್‍ರಿಗೆ ಅರಣ್ಯಾಧಿಕಾರಿ ಮೇಲೆ ಬಂದಿರುವ ಆರೋಪದ ಪ್ರತಿಯನ್ನು ಓದುವಂತೆ ಸೂಚಿಸಿದರು.

          ವಲಯ ಪ್ರಾದೇಶಿಕ ಅರಣ್ಯಾಧಿಕಾರಿ ಶಂಕರ್‍ನಾಯ್ಕ್ ಹಾಗು ಪ್ರಸ್ತುತ ಜಿಲ್ಲೆಯ ಹೊರಗುತ್ತಿಗೆ ತಾಂತ್ರಿಕ ಸಹಾಯಕ ಕುಮಾರನಾಯ್ಕ ರವರು 2018-19 ನೇ ಸಾಲಿನ ಉದ್ಯೋಗ ಖಾತ್ರಿ ಯೋಜನೆಯ ಹಣ ದುರುಪಯೋಗ ಮಾಡಿಕೊಂಡಿದ್ದರಿಂದ ಇವರ ಮೇಲೆ ಕ್ರಮಿನಲ್ ಮೊಕದ್ದಮ್ಮೆ ದಾಖಲಿಸುವಂತೆ ಸಿಇಓ ತಾಲೂಕು ಪಂಚಾಯಿತಿಗೆ ಸೂಚಿಸಿರುವುದಾಗಿ ತಿಳಿಸಿದರು. ಇದಕ್ಕೆ ಸದಸ್ಯರು ಮೊಕದ್ದಮ್ಮೆ ದಾಖಲಿಸುವಂತೆ ಪಟ್ಟು ಹಿಡಿದರು. ಇಓ ರವರು ಉತ್ತರಿಸಿ ಇನ್ನೂ ಮೂರು ನಾಲ್ಕು ದಿನಗಳಲ್ಲಿ ಪರಿಶೀಲನೆ ನೆಡೆಸಿ ಮೇಲಾಧಿಕಾರಿಗಳ ಆದೇಶದನ್ವಯ ಮೊಕದ್ದಮ್ಮೆ ದಾಖಲಿಸುವುದಗಿ ತಿಳಿಸಿದರು.

          ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶೀಲ ಅವರು ಹಗರಣ ಸಂಬಂಧ ಜಿ.ಪಂ ಸಿಇಓ, ಡಿಎಸ್ ಅವರ ವಿರುದ್ದ ತನಿಖೆಗೆ ಎಸಿಬಿಗೆ ದೂರು ಸಲ್ಲಿಸಿದ್ದಾರೆ, ತನಿಖೆ ನಡೆದು ಸತ್ಯ ಹೊರಬರಲಿ, ಆದರೆ ಗ್ರಾ.ಪಂ ಪಿಡಿಒಗಳು ಸಿಇಒ ಹಾಗೂ ಡಿಎಸ್ ಪರವಾಗಿ ಮೂರು ದಿನ ದಾವಣಗೆರೆಗೆ ಪ್ರತಿಭಟನೆಗೆ ತೆರಳಿದಿದ್ದಾರೆ, ಇದು ತಪ್ಪು, ಅಂತಹ ಪಿಡಿಒಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಾ.ಪಂ ಉಪಾದ್ಯಕ್ಷ ಮಂಜನಾಯ್ಕ ಒತ್ತಾಯಿಸಿದರು.

          ಆಗ ಕಾಂಗ್ರೆಸ್ ಸದಸ್ಯರಾದ ಹುಲ್ಲಿಕಟ್ಟಿ ಚಂದ್ರಪ್ಪ, ಬಸವನಗೌಡ, ಬಿಜೆಪಿ ಸದಸ್ಯರಾದ ಕಂಚನಗೌಡ, ಮತ್ತಿಹಳ್ಳಿ ಪ್ರಕಾಶ, ಈರಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟೇಶರೆಡ್ಡಿ ಬೆಂಬಲಿಸಿ ಪಿಡಿಒಗಳು ಜನರ ಸಮಸ್ಯೆ ಕೇಳುವುದು ಬಿಟ್ಟು ಅಧಿಕಾರಿಗಳ ಪರವಾಗಿ ಪ್ರತಿ ಭಟನೆಗೆ ಹೋಗಿದ್ದು ತಪ್ಪು ಎಂದು ಹೇಳಿದರು.ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರ ಧಾನ್ಯಗಳನ್ನು ಪಡಿತರ ಚೀಟಿಗೆ ನೀಡಲಾಗುತ್ತಿದ್ದು ಇದನ್ನು ತೂಕದಲ್ಲಿ ವ್ಯತ್ಯಾಸ ಮಾಡುತ್ತಿರುವುದು ಕಂಡು ಬಂದಿದ್ದು ಈ ರೀತಿ ವ್ಯತ್ಯಸವಾಗದಂತೆ ಕ್ರಮಕೈಗೊಳ್ಳಬೇಕು ಎಂದು ಆಹಾರ ನೀರಿಕ್ಷಕ ಪ್ರಕಾಶ್‍ರವರಿಗೆ ಸೂಚಿಸಿದರು.

        ಸಾಸ್ವಿಹಳ್ಳಿ ಎಎನ್‍ಎಂ ಕರ್ತವ್ಯ ಲೋಪ ವೆಸಗಿದ್ದಾರೆ, ಎಂದು ಹುಣ್ಸಿಹಳ್ಳಿ ಪ್ರಕಾಶ ದೂರಿದಾಗ ವೈದ್ಯಾಧಿಕಾರಿ ಅವರಿಗೆ ನೋಟೀಸ್ ನೀಡುವುದಾಗಿ ಭರವಸೆ ನೀಡಿದರು. ತೆಲಿಗಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಲು ಇಂಜಕ್ಷನ್ ನೀಡಲು 1500 ರು. ಹಣ ತೆಗೆದುಕೊಂಡಿದ್ದಾರೆ ಎಂದು ಸಮಿತ್ರಾ ಆರೋಪಿಸಿದಾಗ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ವೈದ್ಯಾಧಿಕಾರಿ ತಿಳಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link