ದಾವಣಗೆರೆ :
ಮಕ್ಕಳ ದುಡಿಮೆ ಅಕ್ಷಮ್ಯ ಅಪರಾಧವಾಗಿದ್ದು, ಈ ಅನಿಷ್ಟ ಬಾಲಕಾರ್ಮಿಕ ಪದ್ಧತಿಯ ನಿರ್ಮೂಲನೆಗೆ ಸರ್ಕಾರ, ಸಾರ್ವಜನಿಕ ಸಂಘ-ಸಂಸ್ಥೆಗಳ ಜೊತೆಗೆ ಮಕ್ಕಳ ಪೋಷಕರು ಹಾಗೂ ಸಾರ್ವಜನಿಕರೂ ಕೈ ಜೋಡಿಸಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಅಂಬಾದಾಸ ಕುಲಕರ್ಣಿ ಕರೆ ನೀಡಿದರು.
ನಗರದ ರೋಟರಿ ಬಾಲಭವನದಲ್ಲಿ ಗುರುವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಕಾರ್ಮಿಕ ಇಲಾಖೆ ಹಾಗೂ ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸಂಸ್ಥೆ ಇವುಗಳ ಸಂಯುಕ್ತಾಶ್ರಯದಲ್ಲಿ ಸ್ವ-ಸಹಾಯ ಸಂಘದ ಸದಸ್ಯೆಯರಿಗಾಗಿ ಏರ್ಪಡಿಸಿದ್ದ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ(ನಿಷೇಧ ಹಾಗೂ ನಿಯಂತ್ರಣ) ಕಾಯ್ದೆ 1986 ಹಾಗೂ 2016ರ ತಿದ್ದುಪಡಿಯಡಿ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಹಲವು ಕಾನೂನುಗಳಿದ್ದರೂ, ಸಹ ಇಂದಿಗೂ ಹಲವೆಡೆ ಈ ಅನಿಷ್ಟ ಪದ್ಧತಿ ಜೀವಂತವಾಗಿರುವುದು ಕಂಡು ಬರುತ್ತಿದೆ. ಬಾಲ ಕಾರ್ಮಿಕ ಪದ್ಧತಿ ಅಕ್ಷಮ್ಯ ಅಪರಾಧವಾಗಿದ್ದು, ಇದರ ಮೂಲೋತ್ಪಾಟನೆಗೆ ಸರ್ಕಾರ ಹಾಗೂ ಹಲವು ಸಂಘ-ಸಂಸ್ಥೆಗಳು ಶ್ರಮಿಸುತ್ತಿದ್ದು, ಮಕ್ಕಳ ಪೋಷಕರು ಹಾಗೂ ಸಾರ್ವಜನಿಕರು ಕೈ ಜೋಡಿಸಬೇಕೆಂದು ಕಿವಿಮಾತು ಹೇಳಿದರು.
ಮನುಷ್ಯ ಜೀವನದಲ್ಲಿ ಬಾಲ್ಯ, ಯವ್ವನ, ವೃದ್ಧಾಪ್ಯ ಬಂದು ಹೋಗುತ್ತವೆ. ಬಾಲ್ಯಾವಸ್ಥೆಯಲ್ಲಿ ಮಕ್ಕಳು ಶಾಲೆಗೆ ಹೋಗುವುದು, ಆಟ ಆಡುವುದು ಮಕ್ಕಳ ಹಕ್ಕುಗಳಾಗಿವೆ. ಆದರೆ, ಕೆಲವರು ಮಕ್ಕಳನ್ನು ದುಡಿಮೆಗೆ ಬಳಸಿಕೊಳ್ಳುವುದರಿಂದ ಸ್ವಚ್ಛಂದವಾಗಿ ಆಟ ಆಡಬೇಕಾದ ಮಕ್ಕಳ ಬಾಲ್ಯದ ಹಕ್ಕುಗಳನ್ನು ಕಿತ್ತುಕೊಳ್ಳುವಂತಾಗಲಿದೆ. ಆದ್ದರಿಂದ ಪ್ರತಿಯೊಬ್ಬರು ಕರ್ತವ್ಯ ಪ್ರಜ್ಞೆಯನ್ನು ಬೆಳೆಸಿಕೊಳ್ಳುವುದರ ಜೊತೆಗೆ, ಕಾನೂನು ಅರಿವು ಪಡೆಯುವ ಮೂಲಕ ಮಕ್ಕಳು ಸೇರಿದಂತೆ ಯಾರ ಹಕ್ಕುಗಳಿಗೂ ಧಕ್ಕೆ ಬಾರದಂತೆ ಜೀವನ ನಡೆಸಬೇಕೆಂದು ಸಲಹೆ ನೀಡಿದರು.
ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಸಿವಿಲ್ ನ್ಯಾಯಾಧೀಶರಾದ ಕೆಂಗಬಾಲಯ್ಯ ಮಾತನಾಡಿ, ಅನಿಷ್ಟ ಪದ್ಧತಿಗಳ ಕುರಿತು ಜಾಗೃತಿ ಅಥವಾ ಅವುಗಳನ್ನು ತಡೆಗಟ್ಟುವ ಕೆಲಸ ಕೇವಲ ಪೊಲೀಸರಿಂದ ಮಾತ್ರ ಸಾಧ್ಯವಾಗದು. ಪ್ರತಿಯೊಬ್ಬರು ತಮ್ಮ ಪಾಲಿನ ಕರ್ತವ್ಯವನ್ನು ಮಾಡಿದಾಗ ಅಂತಹ ಪದ್ಧತಿಗಳ ನಿರ್ಮೂಲನೆ ಮಾಡಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯನಿರ್ವಹಿಸಬೇಕು ಎಂದರು.
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಎಲ್.ಎಚ್.ಅರುಣ್‍ಕುಮಾರ್ ಮಾತನಾಡಿ, ದೇಶಕ್ಕೆ ತಮ್ಮದೆಯಾದ ಸಂವಿಧಾನ ರೂಪಿಸಿಕೊಂಡು, ಗಡಿ ಗುರುತಿಸಿಕೊಂಡು ಕಾನೂನು ಚೌಕಟ್ಟನ್ನು ಒಳಗೊಂಡು 70 ವರ್ಷ ಪೂರೈಸಿದರೂ ಇನ್ನೂ ಬಾಲ ಕಾರ್ಮಿಕ ಪದ್ಧತಿ ಮುಕ್ತಗೊಳಿಸುವುದಕ್ಕೆ ಸಾಧ್ಯವಾಗದಿರುವುದು ಅತ್ಯಂತ ದುರಂತವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಟಿ.ಮಂಜುನಾಥ್ ಮಾತನಾಡಿ, ಬಾಲಕಾರ್ಮಿಕರೆಂದರೆ ವಿದ್ಯೆಯಿಂದ ವಂಚಿತರಾದವರು, ಆಟ, ಪಾಠದಿಂದ ದೂರ ಉಳಿದು ಕೆಲಸದಲ್ಲಿ ನಿರತರಾದವರನ್ನು ಬಾಲಕಾರ್ಮಿಕರೆಂದು ಕರೆಯುತ್ತಾರೆ. ಕಾರ್ಖಾನೆ, ಮಂಡಕ್ಕಿಭಟ್ಟಿ, ಇವುಗಳಲ್ಲಿ ಮಕ್ಕಳನ್ನು ದುಡಿಮೆಗೆ ಬಳಸಿಕೊಳ್ಳುತ್ತಿದೆ. ಯಾವುದೇ ಕಾರಣಕ್ಕೂ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಳ್ಳಬಾರದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಆರ್.ಎಲ್. ಕಾನೂನು ಕಾಲೇಜಿನ ಉಪನ್ಯಾಸಕಿ ಪಂಕಜ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ(ನಿಷೇಧ ಹಾಗೂ ನಿಯಂತ್ರಣ) ಕಾಯ್ದೆ 1986 ಹಾಗೂ 2016ರ ತಿದ್ದುಪಡಿ ಕಾಯ್ದೆ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಸಹಾಯಕ ಕಾರ್ಮಿಕ ಆಯುಕ್ತ ಮೊಹಮದ್ ಜಹೀರ್ ಬಾಷಾ, ಜಿಲ್ಲಾ ಕಾರ್ಮಿಕ ಅಧಿಕಾರಿ ಜಿ.ಇಬ್ರಾಹಿಂ ಸಾಬ್, ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸಂಸ್ಥೆಯ ಪ್ರಸನ್ನ ಕುಮಾರ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
