ಚಿತ್ರದುರ್ಗ
ಮತ್ತಿ ತಿಮ್ಮಣ್ಣ ನಾಯಕರ ಕಾಲದಲ್ಲಿ ನಿರ್ಮಾಣವಾಗಿದ್ದ ಐತಿಹಾಸಿಕ ಕೆರೆಯ ಸ್ಥಿತಿಗತಿ ಕಂಡು ಮನಸ್ಸಿಗೆ ನೋವಾಯಿತು. ಜೀವಪರ ಕಾಳಜಿಯುಳ್ಳ ಯುವ ಸಮೂಹ ಕೆರೆ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಂಡಿದ್ದು ನಿಜಕ್ಕೂ ಶ್ಲಾಘನೀಯ ಎಂದು ಕಬೀರಾನಂದ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ ಹೇಳಿದರು.ಇಂದು ನಗರದ ಬಳಿಯ ತಿಮ್ಮಣ್ಣ ನಾಯಕ ಕೆರೆಗೆ ಭೇಟಿ ನೀಡಿದ ಅವರು ಅಭಿವೃದ್ಧಿ ಕಾಮಗಾರಿ ವೀಕ್ಷಿಸಿದರು.
ಈ ಹಿಂದೆ ನಗರಕ್ಕೆ ಜೀವಜಲ ಪೂರೈಸುತ್ತಿದ್ದ ಕೆರೆ ಸುಂದರ ಪರಿಸರವನ್ನೊಳಗೊಂಡಿತ್ತು. ಈ ಭಾಗದಲ್ಲಿ ವಾಯು ವಿಹಾರಕ್ಕೆ ಬಂದರೆ ಮಲೆನಾಡ ಸೊಬಗು ದರ್ಶನವಾಗುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಕೆರೆ ನಿರ್ಲಕ್ಷಕ್ಕೊಳಗಾಗಿ ಜಾಲಿ ಮತ್ತು ಊಳು ತುಂಬಿಕೊಂಡಿದೆ. ಮಾನವ ಬಂಧುತ್ವ ವೇದಿಕೆ ನೇತೃತ್ವದಲ್ಲಿ ಅಂಜಿನಪ್ಪ ಮತ್ತು ಗೆಳೆಯರ ಬಳಗ ಸತ್ಕಾರ್ಯದಲ್ಲಿ ತೊಡಗಿದ್ದು ಸಾರ್ವಜನಿಕರು ಮತ್ತು ಅಧಿಕಾರಿಗಳು ಕೈಜೋಡಿಸಿದರೆ ಇತಿಹಾಸ ಮರುಸೃಷ್ಟಿಯಾಗುವಲ್ಲಿ ಸಂದೇಹವಿಲ್ಲ ಎಂದರು.
ಪ್ರಾಣಕ್ಕೆ ನೀರೇ ಮೊದಲಾಗಿದ್ದು ಒಂದೊತ್ತು ಊಟವಿಲ್ಲದಿದ್ದರೂ ಬದುಕಬಹುದು. ನೀರಿಲ್ಲದಿದ್ದರೆ ಬದುಕುವುದು ಕಷ್ಟವಾಗುತ್ತದೆ. ನಗರದ ಜನ ಹಾಗೂ ಗಿರಿಧಾಮದ ಪ್ರಾಣಿ ಪಕ್ಷಿಗಳಿಗೆ ಜಲಪಾತ್ರೆಯಾಗಿದ್ದ ತಿಮ್ಮಣ್ಣ ನಾಯಕ ಕೆರೆ ಮರುಜೀವ ಪಡೆಯಬೇಕಿದೆ ಎಂದು ಅಭಿಪ್ರಾಯ ಪಟ್ಟರು. ಮಾನವ ಬಂಧುತ್ವ ವೇದಿಕೆಯ ಅಂಜಿನಪ್ಪ, ಮಾಜಿ ನಗರಾಭಿವೃದ್ಧಿ ಪ್ರಾಧಿಕಾರ ಅದ್ಯಕ್ಷ ಬಿ.ಟಿ.ಜಗದೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ