ಅನಧಿಕೃತ ವಿದ್ಯುತ್ ಸಂಪರ್ಕ ಕಡಿತ: ಪ್ರತಿಭಟನೆ

ಹರಪನಹಳ್ಳಿ:

        ರೇಷ್ಮೆ ಬೆಳೆಗಾರರ ಶೆಡ್ಗಳಲ್ಲಿ ಹಾಕಿಕೊಂಡಿದ್ದ ಅನಧಿಕೃತ ವಿದ್ಯುತ್ ಸಂಪರ್ಕವನ್ನು ಬೆಸ್ಕಾಂ ಸಿಬ್ಬಂದಿ ಕಡಿತಗೊಳಿಸಿದ್ದರಿಂದ ತಾಲ್ಲೂಕಿನ ಅಡವಿಹಳ್ಳಿ ಗ್ರಾಮ ವ್ಯಾಪ್ತಿಯ ರೈತರು ಪಟ್ಟಣದ ಬೆಸ್ಕಾಂ ಇಲಾಖೆ ಕಚೇರಿಗೆ ಶುಕ್ರವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

         ಈ ವೇಳೆ ರೈತರು ಮಾತನಾಡಿ, `ಬರಗಾಲದ ಬವಣೆಯಲ್ಲಿ ಬೆಂದಿರುವ ರೈತರಿಗೆ ರೇಷ್ಮೆ ಬೆಳೆ ಆಸರೆಯಾಗಿದೆ. ವಿದ್ಯುತ್ ಇಲ್ಲದಿದ್ದರೆ ರೇಷ್ಮೆ ಹುಳ ಸಾಕುವುದು ಕಷ್ಟಕರ. ರಾತ್ರಿ ವೇಳೆ ಕ್ರೀಮಿಕಿಟಗಳ ನಿಯಂತ್ರಣಕ್ಕೆ ಬೆಳಕಿನ ವ್ಯವಸ್ಥೆ ಅಗತ್ಯವಾಗಿದೆ. ರೇಷ್ಮೆ ಶೆಡ್ಗಳಿಗೆ ಅಧಿಕೃತ ವಿದ್ಯುತ್ ಪಡೆಯಬೇಕು ಎಂದು ಬೆಸ್ಕಾಂ ಇಲಾಖೆ ಸಿಬ್ಬಂದಿ ನಿಯಮ ಹಾಕುತ್ತಿದ್ದಾರೆ. ಆದರೆ ಅಕ್ಕ ಪಕ್ಕದ ತಾಲ್ಲೂಕುಗಳಲ್ಲಿ ಹಾಗೂ ತಾಲ್ಲೂಕಿನ ಇತರೆ ಕಡೆಗಳಲ್ಲಿ ರೇಷ್ಮೆ ಬೆಳೆಗಾರರು ಕೊಳವೆ ಬಾವಿಯ ಸಂಪರ್ಕದಲ್ಲೇ ಲೈಟ್ ಅಳವಡಿಸಿಕೊಂಡಿದ್ದಾರೆ. ಈ ತಾರತ್ಯಮ್ಯ ನೀತಿ ಅನುಸರಿಸುವುದನ್ನು ಖಂಡಿಸುತ್ತೇವೆ’ ಎಂದರು.

         ಮೆಕ್ಕೆಜೋಳ, ಶೇಂಗಾ, ಭತ್ತ, ರಾಗಿ, ಸೇವಂತಿಗೆ, ಮಲ್ಲಿಗೆ ಹೂಗಳಿಗೆ ಉಚಿತ ವಿದ್ಯುತ್ ನೀಡುವ ಸರ್ಕಾರ ರೇಷ್ಮೆ ಬೆಳೆಗಾರರ ವಿಚಾರದಲ್ಲಿ ಏಕೆ ಅಧಿಕೃತ ವಿದ್ಯುತ್ ಪಡೆಯಬೇಕು ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು, ಪ್ರತಿ ದಿನ 3 ಗಂಟೆ ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿದರು.

           ಮನವಿ ಸ್ವೀಕರಿಸಿದ ಬೆಸ್ಕಾಂ ಇಲಾಖೆಯ ಅಭಿಯಂತರ ಭೀಮಪ್ಪ, ಇಲಾಖೆ ಹಾಗೂ ಸರ್ಕಾರದ ಆದೇಶದಂತೆ ಯಾವುದೇ ಅನಧಿಕೃತ ವಿದ್ಯುತ್ ಬಳಕೆ ಮಾಡಲು ಅವಕಾಶ ನೀಡುವುದಿಲ್ಲ. ರೈತರ ಪಂಪ್ ಸೆಟ್ಗಳಿಗೆ ಮಾತ್ರ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಅಲ್ಲಿಂದ ಯಾವುದೇ ಕಾರಣಕ್ಕೂ ರೇಷ್ಮೆ ಷಡ್ ಅಥವಾ ಮನೆಗಳಿಗೆ ವಿದ್ಯುತ್ ಬಳಸಿದರೆ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.

          ಗ್ರಾಮ ಪಂಚಾಯ್ತಿ ಸದಸ್ಯ ಬಸವನಗೌಡ, ರೈತ ಮುಖಂಡರಾದ ಡಾ.ಮಂಜುನಾಥ, ಮಲ್ಲಿಕಾರ್ಜುನಗೌಡ ಪಾಟೇಲ್, ಜಂಬಣ್ಣ, ಹಾಲಪ್ಪ, ಶೇಖರಪ್ಪ, ದಾನಪ್ಪ, ದಾದಪೀರ್, ಬಿ.ನಾಗರಾಜ, ಸಿದ್ಲಿಂಗಪ್ಪ, ಜಿ.ಕೊಟ್ರುಗೌಡ್ರ, ಕೃಷ್ಣ ಇವರೂ ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link