ದಾವಣಗೆರೆ:
ಪ್ರತಿಯೊಬ್ಬರೂ ಹಿಂಸೆ ತಡೆದು, ಅನ್ಯಾಯ, ಅನಾಚಾರ ವಿರೋಧಿಸುವ ಸಂಸ್ಕಾರ ಬೆಳೆಸಿಕೊಳ್ಳಬೇಕೆಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಕರೆ ನೀಡಿದರು.
ನಗರದ ಹದಡಿ ರಸ್ತೆಯ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಶನಿವಾರ ನಡೆದ ಭಾರತೀಯ ಜೈನ್ ಮಿಲನ್ ವಲಯ-8ರ 18ನೇ ವಲಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಜನ್ಮ ಪೂರ್ವವಾಹಿಯಲ್ಲಿಯೇ ಸಂಸ್ಕಾರ ಆರಂಭವಾಗುತ್ತದೆ. ಸತ್ತ ಮೇಲೆ ಸ್ವರ್ಗಕ್ಕೆ ಹೋಗುವುದಕ್ಕಿಂತ, ಸಂಸ್ಕಾರವನ್ನು ಬೆಳೆಸಿಕೊಳ್ಳುವ ಮೂಲಕ ಭೂಮಿಯನ್ನೇ ಸ್ವರ್ಗ ಸದೃಶವಾಗಿಸಬೇಕಾಗಿದೆ. ಜೈನ್ ಮಿಲನ್‍ನ ಉದ್ದೇಶವು ಇಹವನ್ನು ಸ್ವರ್ಗವಾಗಿ ಮಾಡುವುದೇ ಆಗಿದೆ ಎಂದರು.
ಒಂದೇ ವರ್ಣದ ರೆಕ್ಕೆಗಳಿರುವ ಪಕ್ಷಿಗಳು ಜತೆಯಾಗಿ ಹಾರುತ್ತಾವೆ. ಪಶು, ಪಕ್ಷಿ, ಪ್ರಾಣಿಗಳಲ್ಲಿರುವಂತೆ ಮನುಷ್ಯರಲ್ಲೂ ವ್ಯತ್ಯಾಸ ಗುರುತಿಸುತ್ತೇವೆ. ಹೀಗಾಗಿ ಒಂದೇ ಸಂಸ್ಕಾರವಿರುವ ಮಾನವರು ಜತೆಗೆ ಹೋಗಬೇಕಾದ ಅನಿವಾರ್ಯತೆ ಇದೆ ಎಂದ ಅವರು, ಗುರಿ ಸಾಧಿಸುವುದಕ್ಕಾಗಿ ಸಂಘಟಿತರಾಗಿ ಒಟ್ಟುಗೂಡಬೇಕೆಂದು ಸಲಹೆ ನೀಡಿದರು.
ತತ್ವ, ಆದರ್ಶಗಳನ್ನು ಚಾರಿತ್ರ್ಯದಲ್ಲೂ ಅಳವಡಿಸಿಕೊಳ್ಳಬೇಕು. ದೇಶದಲ್ಲಿ ಜೈನ್ ಮಿಲನ್ ಸಂಘಟನೆ ಉಳಿಯಬೇಕಾದರೆ ಸುರೇಂದ್ರ ಅವರ ಪಾತ್ರ ಮಹತ್ವದ್ದಾಗಿದೆ. ಅಧಿಕಾರದ ಲಾಲಸೆಯನ್ನು ತ್ಯಜಿಸಲು ಭರತ, ಬಾಹುಬಲಿಯವರ ಆದರ್ಶವನ್ನು ಮೈಗೂಡಿಸಿಕೊಳ್ಳಬೇಕು. ಸಮಾಜದಲ್ಲಿ ಯಾವುದೂ ಶ್ರೇಷ್ಠ, ಕನಿಷ್ಠ ಎಂಬುದಿಲ್ಲ. ಎಲ್ಲರೂ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕು ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
