ಸಂವಿಧಾನಕ್ಕೆ ಸಾವಿಲ್ಲ, ಸವಾಲುಗಳಿವೆ

ದಾವಣಗೆರೆ:

        ಸಂವಿಧಾನಕ್ಕೆ ಸಾವಿಲ್ಲ ಆದರೆ, ಸವಾಲುಗಳಿವೆ ಎಂದು ಬಂಡಾಯ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಪ್ರತಿಪಾದಿಸಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಸಂವಿಧಾನ ಉಳಿಸಿ ಹೋರಾಟ ಸಮಿತಿಯಿಂದ “ಸಂವಿಧಾನ ಮತ್ತು ಸಮಕಾಲೀನ ಸಂದರ್ಭ” ವಿಷಯ ಕುರಿತು ಏರ್ಪಡಿಸಿದ್ದ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ದೇಶಕ್ಕೆ ಸಂವಿಧಾನ ಸ್ವೀಕಾರ ಮಾಡಿ, ಅದರ ಅಡಿಯಲ್ಲಿ ಆಡಳಿತ ನಡೆಯುತ್ತಿರುವ ಭಾರತದಲ್ಲಿ 70 ವರ್ಷಗಳ ನಂತರ ಸಂವಿಧಾನ ಉಳಿಸಿ ಎಂಬುದಾಗಿ ಹೇಳುವ ಪರಿಸ್ಥಿತಿ ನಿರ್ಮಾಣವಾಗಿರುವುದು ಅತ್ಯಂತ ವಿಪರ್ಯಾಸವಾಗಿದೆ. ಸಂವಿಧಾನವನ್ನು ನಾಶ ಮಾಡಲು ಈ ದೇಶದ ಜನ ಬಿಡುವುದಿಲ್ಲ. ಹೀಗಾಗಿ ಸಂಧಾನವನ್ನು ಪೂರ್ಣ ಪ್ರಮಾಣದಲ್ಲಿ ಬದಲಾಯಿಸಲು ಸಾಧ್ಯವಿಲ್ಲ. ಆದ್ದರಿಂದ ಸಂವಿಧಾನಕ್ಕೆ ಸಾವಿಲ್ಲ. ಆದರೆ, ಅದರ ಮುಂದೆ ಸವಾಲುಗಳಿವೆ ಎಂದು ಹೇಳಿದರು.

ಬಹುತ್ವದ ಭಾರತ ಸುಟ್ಟರು:

       20ನೇ ಶತಮಾನದಲ್ಲಿ ಸಂವಿಧಾನ ಅಳಿಸುವ ಮತ್ತು ಅದನ್ನು ಸುಡುವ ವಿಕಾರ ಮನಸನ್ನು ಊಹಿಸಲು ಸಾಧ್ಯವಿರಲಿಲ್ಲ. ಆದರೆ, 21ನೇ ಶತಮಾನದಲ್ಲಿ ಬದಲಾಗಿರುವ ಸಾಮಾಜಿಕ ಹಾಗೂ ಸಾಂಸ್ಕತಿಕ ವಿಕೃತ ಮನಸ್ಸುಗಳಿಂದ ಕೆಲ ತಿಂಗಳ ಹಿಂದೆ ದೆಹಲಿಯ ಜಂತರ್ ಮಂತರ್‍ನಲ್ಲಿ ಸಂವಿಧಾನ ಸುಡುವುದರ ಜತೆಗೆ ಅಂಬೇಡ್ಕರ್ ಅವರ ವಿರುದ್ಧ ಧಿಕ್ಕಾರ ಕೂಗುವ ಪ್ರಕ್ರಿಯೆ ಆರಂಭವಾಗಿರುವುದು ನಿಜಕ್ಕೂ ಸೋಜಿಗ. ಅವರು ಬರಿ ಸಂವಿಧಾನವನ್ನು ಸುಟ್ಟಿಲ್ಲ. ಬದಲಿಗೆ ಅದರಲ್ಲಿ ಅಡಕವಾಗಿರುವ ಜಾತ್ಯಾತೀತತೆ, ಸಮಾನತೆ ಹಾಗೂ ಬಹುತ್ವದ ಭಾರತವನ್ನು ಸುಟ್ಟು ಹಾಕಿದ್ದಾರೆ ಎಂದರು.

ಸಂವಿಧಾನದ ಆಶಯಕ್ಕೆ ವಿರುದ್ಧ:

       ಸಂವಿಧಾನ ಬದಲಿಸಲಿಕ್ಕಾಗಿಯೇ ಅಧಿಕಾರಕ್ಕೆ ಬಂದಿದ್ದೇವೆಂದು ಹೇಳುವ ಅನಂತಕುಮಾರ್‍ನಂತವರಿಗೆ ಪ್ರಾಮುಖ್ಯತೆ ಕೊಡುವುದು ತಪ್ಪು ಎಂದ ಅವರು, ಎಲ್ಲಾ ರಾಜಕೀಯ ಪಕ್ಷಗಳು ಸಂವಿಧಾನದ ಆಶಯಕ್ಕೆ ತಕ್ಕಂತೆ ನಡೆಯುತ್ತಿವೆಯೇ ಎಂಬ ತಾತ್ವಿಕ ಪ್ರಶ್ನೆ ಹಾಕಿಕೊಂಡು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಈ ವರೆಗೂ ಎಲ್ಲಾ ರಾಜಕೀಯ ಪಕ್ಷಗಳು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿಯೇ ನಡೆದುಕೊಂಡಿವೆ ಎಂದು ಆರೋಪಿಸಿದರು.

ರಾಜಕಾರಣಿಯೇ ಸಂಶೋಧಕ:

       ಸಾಮಾನ್ಯವಾಗಿ ಹಸಿವಿನ ಮೇಲೆ ಮಾಡಬೇಕಾದ ರಾಜಕಾರಣ ಇಂದು ಹಸುವಿನ ಮೇಲೆ ನಡೆಯುತ್ತಿದೆ. ಆ ಕಾರಣಕ್ಕಾಗಿ ಮೊನ್ನೆ ಪೊಲೀಸ್ ಅಧಿಕಾರಿಯೊಬ್ಬರನ್ನು, ಅದಕ್ಕೂ ಮುಂಚೆ ಅಲ್ಪಸಂಖ್ಯಾರ, ದಲಿತರ ಹತ್ಯೆ ಮಾಡಲಾಗಿದೆ ಎಂದ ಅವರು, ಪ್ರಸ್ತುತ ರಾಜಕೀಯ ಪಕ್ಷದವರು ಸಂಶೋಧಕರಾಗಿದ್ದು, ದೇವರ ಜಾತಿಯನ್ನು ಹುಟುಕುವಷ್ಟರ ಮಟ್ಟಿಗೆ ಬುದ್ಧಿವಂತರಾಗಿದ್ದಾರೆ ಎಂದು ಹೇಳಿದರು.

         ಇತ್ತೀಚೆಗೆ ರಾಜಕಾರಣಿಗಳು ದೇವರ ಜಾತಿ ಹುಡುಕಲು ಆರಂಭಿಸಿದ್ದು, ಆಂಜನಯೇ ಬ್ರಾಹ್ಮರವ, ಜಾಟರವ, ದಲಿತರವ, ಮುಸ್ಲಿಮರವ ಹೀಗೆ, ಒಬ್ಬೊಬ್ಬ ರಾಜಕಾರಣಿಗಳು ಒಂದುದೊಂದು ಜಾತಿ, ಧರ್ಮಕ್ಕೆ ಆಂಜನೇಯನನ್ನು ಥಳಕು ಹಾಕಲು ಪ್ರಯತ್ನಿಸುತ್ತಿದ್ದಾರೆ. ಕೊನೆಯ ಪಕ್ಷ ದೇವರನ್ನಾದರೂ ಜಾತ್ಯತೀತವಾಗಿ ಬಿಡಬಹುದಿತ್ತು. ಆದರೆ, ಇಂದು ದೇವರನ್ನು ಜಾತ್ಯಾತೀತವಾಗಿ ಬಿಡದಷ್ಟು ವಿಕೃತಿ ಸಮಾಜದಲ್ಲಿ ಬೆಳೆದಿದೆ ಎಂದು ಕಳವಳ ವ್ಯಕ್ತಪಡಿಸಿದರು.

        ಸಂವಿಧಾನ ನೀಡಿರುವ ಒಕ್ಕೂಟ ವ್ಯವಸ್ಥೆಯನ್ನೇ ಪರಿಪಾಲಿಸಿಲ್ಲ. ರಾಜ್ಯಕ್ಕೆ ಸಿಗಬೇಕಾದ ಸ್ವಾಯತ್ತತೆ ಸಿಗುತ್ತಿಲ್ಲ. ಆರ್ಥಿಕ ನೆರವು ದೊರೆಯುತ್ತಿಲ್ಲ. ಪೂರ್ಣ ಪ್ರಮಾಣದ ಸ್ವಾತಂತ್ರ್ಯವೂ ದೊರೆಯುತ್ತಿಲ್ಲ. ಹಾಗೂ ಇವುಗಳನ್ನು ಪಡೆಯಲು ಈ ವರೆಗೂ ಯಾವ ರಾಜ್ಯಗಳು ಸಹ ಸಶಕ್ತವಾಗಿ ದನಿ ಎತ್ತಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

        ಅತ್ಯಂತ ಆದರ್ಶಪ್ರಾಯವಾಗಿದ್ದ ಸಿಇಟಿಯನ್ನು ರದ್ದು ಮಾಡಿ ಕೇಂದ್ರ ಸರ್ಕಾರ ನೀಟ್ ಜಾರಿ ಮಾಡಿದೆ. ಹೀಗೆ ಸಾಮಾನ್ಯ ಪರೀಕ್ಷೆಗಳನ್ನು ಕೇಂದ್ರೀಕೃತಗೊಳಿಸಿದರೆ, ಬಡವರ ಮಕ್ಕಳಿಗೆ ಅನ್ಯಾಯವಾಗಲಿದೆ. ತೆರಿಗೆ ಸರಳೀಕರಣಗೊಳಿಸುವ ಉದ್ದೇಶದಿಂದ ಜಾರಿಯಾದ ಜಿಎಸ್‍ಟಿ ತೆರಿಗೆಯನ್ನು ಕೇಂದ್ರೀಕರಿಸುತ್ತಿದೆ. ಒಂದು ದೇಶ-ಒಂದು ತೆರಿಗೆ ಎಂದು ಇಂದು ಹೇಳಿದವರು, ಮುಂದೆ ಒಂದು-ದೇಶ ಒಂದು ಧರ್ಮ ಎಂಬುದಾಗಿ ಪ್ರತಿಪಾದಿಸುವ ಅಪಾಯವೂವಿದೆ ಎಂದರು.

         ದೇಶದಲ್ಲಿ ಏಕ ಧರ್ಮ ಸ್ಥಾಪನೆಯ ಹುನ್ನಾರ ನಡೆಯುತ್ತಿದೆ. ಒಂದು ಜಾತಿ, ಒಂದು ಧರ್ಮ, ಒಂದು ಸಂಸ್ಕತಿ ಶ್ರೇಷ್ಠ ಎಂಬುದನ್ನು ಸಂವಿಧಾನ ಒಪ್ಪುವುದಿಲ್ಲ. ಬದಲಿಗೆ ಬಹುತ್ವದ ಭಾರರ ಸಂವಿಧಾನದ ಆಶಯವಾಗಿದೆ. ಪ್ರಸ್ತುತ ದೇವರು-ಧರ್ಮವನ್ನು ಮಾರುಕಟ್ಟೆಯ ಸರಕನ್ನಾಗಿಸಲಾಗಿದೆ ಎಂದು ಹೇಳಿದರು.

         ವಿಚಾರವಾದಿ ಡಾ.ಸಿದ್ದನಗೌಡ ಪಾಟೀಲ್ ಮಾತನಾಡಿ, ಇತ್ತೀಚಿನ ಪಂಚರಾಜ್ಯಗಳ ಫಲಿತಾಂಶ ನೋಡಿದರೆ, ಜನತೆಯೇ ಸಂವಿಧಾನ ರಕ್ಷಿಸುತ್ತಾರೆಂಬ ಭರವಸೆ ಮೂಡಿದೆ. ಸಂವಿಧಾನದ ಕರಡನ್ನು ವಿರೋಧಿಸಿದ್ದ ಗೋಲವಾಲ್ಕರ್, ಒಕ್ಕೂಟ ವ್ಯವಸ್ಥೆಯೇ ಬೇಡ ಎಂದಿದ್ದರು. ಅಲ್ಲಿಂದ ಇಲ್ಲಿಯ ವರೆಗೂ ಸಂವಿಧಾನವನ್ನು ವಿರೋಧಿಸುವವರಿದ್ದಾರೆ. ಇತ್ತೀಚೆಗೆ ಸಂವಿಧಾನ ಸುಟ್ಟಿದಾಗಿನಿಂದ ಸಂವಿಧಾನ ನಾಶ ಮಾಡುವ ಪ್ರಕ್ರಿಯೆ ಆರಂಭವಾಗಿವೆ ಎಂಬುದು ಸಾಬೀತಾಗಿದ್ದು, ಸಂವಿಧಾನ ರಕ್ಷಣೆಗೆ ಎಲ್ಲರೂ ಮುಂದಾಗಬೇಕೆಂದು ಹೇಳಿದರು.
ಸಮಿತಿಯ ಅಧ್ಯಕ್ಷ ಹೆಚ್.ಕೆ.ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪತ್ರಕರ್ತ ಶಿವಸುಂದರ್, ನ್ಯಾಯವಾದಿ ಅನೀಸ್ ಪಾಷ ಹಾಜರಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಇಮ್ತಿಯಾಜ್ ಹುಸೇನ್ ಆಶಯ ನುಡಿಗಳನ್ನಾಡಿ ಸ್ವಾಗತಿಸಿದರು. ಆವರಗೆರೆ ಚಂದ್ರು ವಂದಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link