ಬೆಂಗಳೂರು
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಬರುವ ಜನವರಿಗೆ ಮೇಜರ್ ಸರ್ಜರಿ ನಡೆಯಲಿದ್ದು ಆಯಕಟ್ಟಿನ ಸ್ಥಾನ ಪಡೆಯಲು ಐಪಿಎಸ್ ಅಧಿಕಾರಿಗಳು ಜಾತಿ ಪ್ರಭಾವ ಬಳಸಿ ತೀವ್ರ ಲಾಬಿ ನಡೆಸಿದ್ದಾರೆ.
ಬಹುತೇಕ ಐಪಿಎಸ್ ಅಧಿಕಾರಿಗಳು ತಮ್ಮ ಹುದ್ದೆಗಳಲ್ಲಿ ಒಂದು ವರ್ಷ ಪೂರೈಸಿದ್ದಾರೆ. ಅವರು ವರ್ಗಾವಣೆಯಾಗಲಿದ್ದಾರೆ. ಇದರ ಜೊತೆಗೆ ಐಪಿಎಸ್ ಅಧಿಕಾರಿಗಳು ಮುಂಬಡ್ತಿ ಹೊಂದಲಿದ್ದು, ಸೂಕ್ತ ಸ್ಥಾನಕ್ಕಾಗಿ ಪೈಪೋಟಿ ಆರಂಭಗೊಂಡಿದೆ.
ಒಂದು ಹುದ್ದೆಯಲ್ಲಿ ಒಂದು ವರ್ಷ ಪೂರೈಸಿದ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಜೊತೆಗೆ ಕೆಲ ಅಧಿಕಾರಿಗಳಿಗೆ ಮುಂಬಡ್ತಿ ದೊರೆಯಲಿದ್ದು, ಆಯಕಟ್ಟಿನ ಸ್ಥಳದಲ್ಲಿ ನಿಯೋಜನೆಗೊಳ್ಳಲು ಐಪಿಎಸ್ ಅಧಿಕಾರಿಗಳು ತಮಗಿರುವ ಪ್ರಭಾವ ಬಳಸಿ ಲಾಬಿ ನಡೆಸುತ್ತಿದ್ದಾರೆ.
ಕಮೀಷನರ್ ಬದಲು
ನಗರ ಪೊಲೀಸ್ ಆಯುಕ್ತರಾಗಿ ಒಂದೂವರೆ ವರ್ಷ ಪೂರೈಸಿರುವ ಸುನೀಲ್ಕುಮಾರ್ ಅವರ ವರ್ಗಾವಣೆ ಸಾಧ್ಯತೆ ಹೆಚ್ಚಾಗಿದ್ದು, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ)ರುಗಳಲ್ಲಿ ನಗರ ಪೊಲೀಸ್ ಆಯುಕ್ತರ ಹುದ್ದೆ ಪಡೆಯಲು ತೀವ್ರ ಪೈಪೋಟಿ ಆರಂಭವಾಗಿದೆ.
ನಗರ ಪೊಲೀಸ್ ಆಯುಕ್ತರ ಹುದ್ದೆಗೆ ಎಡಿಜಿಪಿಗಳಾದ ಭಾಸ್ಕರ್ರಾವ್, ಅಲೋಕ್ ಮೋಹನ್, ಅಲೋಕ್ಕುಮಾರ್ ಲಾಬಿ ನಡೆಸಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕೃಪಾಕಟಾಕ್ಷವಿರುವ ಅಲೋಕ್ಕುಮಾರ್ ಹೆಸರು ಆಯುಕ್ತರ ಹುದ್ದೆಗೆ ಪ್ರಮುಖವಾಗಿ ಕೇಳಿಬರುತ್ತಿದೆ. ಎಡಿಜಿಪಿಗಳಲ್ಲಿ ಸೇವಾ ಹಿರಿತನದಲ್ಲಿ ಕೊನೆಯಿಂದ ಎರಡನೇಯವರಾಗಿರುವ ಅಲೋಕ್ಕುಮಾರ್ಗೆ ಆಯುಕ್ತರ ಹುದ್ದೆ ನೀಡಲು ಹಿರಿತನ ಹೊಂದಿರುವ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕೆಎಸ್ಆರ್ಪಿಯ ಎಡಿಜಿಪಿಯಾಗಿರುವ ಭಾಸ್ಕರರಾವ್ ಅವರು ಕನ್ನಡಿಗರಾಗಿದ್ದು ಇಲಾಖೆಯಲ್ಲಿ ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡು ಹೆಸರುಗಳಿಸಿದ್ದಾರೆ ಅಲ್ಲದೇ ನಗರದ ದಕ್ಷಿಣ ವಿಭಾಗದ ಡಿಸಿಪಿಯಾಗಿ ನಗರವನ್ನು ಬಲ್ಲವರಾಗಿದ್ದು ಅವರನ್ನೇ ಆಯುಕ್ತರನ್ನಾಗಿ ನೇಮಿಸಲು ಪ್ರಯತ್ನ ನಡೆದಿದೆ ಇದರ ಜೊತೆಗೆ ಆಯುಕ್ತರಾಗಿ ಕಾನೂನು ಸುವ್ಯವಸ್ಥೆಗೆ ಕಾಪಾಡಿ ಅಪರಾಧ ಪ್ರಕರಣ ಪ್ರಮಾಣವನ್ನು ಕಡಿಮೆ ಮಾಡಿ ಉತ್ತಮವಾಗಿ ಕೆಲಸ ಮಾಡಿದ್ದು ಇನ್ನು ಕೆಲವು ದಿನಗಳ ಕಾಲ ಸುನೀಲ್ಕುಮಾರ್ ಅವರನ್ನು ಮುಂದುವರೆಸುವ ಮಾತುಗಳು ಕೇಳಿಬರುತ್ತಿವೆ.
ಕೆಲವರಿಗೆ ಮುಂಬಡ್ತಿ
ಪೊಲೀಸ್ ಮಹಾನಿರೀಕ್ಷಕ(ಐಜಿ)ಗಳಾಗಿರುವ ಪ್ರಣವ್ ಮೊಹಂತಿ(ಕೇಂದ್ರಸೇವೆ) ಅಲೋಕ್ಕುಮಾರ್, ದಯಾನಂದ್ ಅವರು ಎಡಿಜಿಪಿಗೆ ಮುಂಬಡ್ತಿ ಪಡೆಯಲಿದ್ದಾರೆ. ಅವರ ಜತೆ ಡಿಐಜಿಯಾಗಿರುವ ಹೆಚ್.ಎಸ್. ರೇವಣ್ಣ ಐಜಿ ಹುದ್ದೆಗೆ ಮುಂಬಡ್ತಿ ಪಡೆಯಲಿದ್ದು, ಈಗಾಗಲೇ ಅವರನ್ನು ಬೆಳಗಾವಿ ಐಜಿ ಹುದ್ದೆಗೆ ನಿಯೋಜನೆ ಮಾಡಲಾಗಿದೆ.ರಾಮನಗರ ಮೂಲದ ರಾಜಸ್ಥಾನ ಕೇಡರ್ನ ಐಪಿಎಸ್ ಅಧಿಕಾರಿ ಐಜಿ ರಾಘವೇಂದ್ರ ಸುಹಾಸ್ ಅವರು ರಾಜ್ಯಕ್ಕೆ ಮರಳಿದ್ದು, 5 ವರ್ಷಗಳ ಕಾಲ ರಾಜ್ಯದಲ್ಲಿರುವ ಅವರು ನಗರದ ಹೆಚ್ಚುವರಿ ಆಯುಕ್ತರ ಜತೆಗೆ ಮೈಸೂರು ಪೊಲೀಸ್ ಆಯುಕ್ತರ ಹುದ್ದೆಗೆ ಪೈಪೋಟಿ ನಡೆಸಿದ್ದಾರೆ.
ದಯಾನಂದ್ ಅವರ ಬಡ್ತಿಯಿಂದ ಕೇಂದ್ರವಲಯದ ಐಜಿ ಹುದ್ದೆ ತೆರವಾದರೆ ,ದಾವಣಗೆರೆ.ಬಳ್ಳಾರಿ ಐಜಿ ಹುದ್ದೆಗಳು ಖಾಲಿಯಿವೆ ಲೋಕಸಭಾ ಚುನಾವಣೆ ಘೋಷಣೆಯಾದರೆ ಬೆಳಗಾವಿ ಪೊಲೀಸ್ ಆಯುಕ್ತ ರಾಜಪ್ಪ,ಐಜಿ ರೇವಣ್ಣ(ಜುಲೈಗೆ ನಿವೃತ್ತಿ)ಅವರನ್ನು ವರ್ಗಾವಣೆ ಮಾಡಬೇಕಾಗಿದ್ದು ಆ ಸ್ಥಾನಗಳಿಗೆ ನಿಯೋಜನೆ ಮಾಡಲು ಮುಖ್ಯಮಂತ್ರಿಗಳು ಕಸರತ್ತು ನಡೆಸಿದ್ದಾರೆ.
ಎಸ್ಪಿಗಳಾಗಿರುವ 10 ಮಂದಿ ಡಿಐಜಿ ಹುದ್ದೆಗೆ ಬಡ್ತಿ ಪಡೆಯಲಿದ್ದಾರೆ. ಅವರಲ್ಲಿ ರಮಣ್ಗುಪ್ತ, ಕೌಶಲೇಂದ್ರಕುಮಾರ್, ಅಭಿಷೇಕ್ ಗೋಯಲ್ ಕೇಂದ್ರ ಸೇವೆಯಲ್ಲಿದ್ದು, ಅಲ್ಲಿಯೇ ಡಿಐಜಿಗೆ ಹುದ್ದೆಗೆ ಮುಂಬಡ್ತಿ ಪಡೆದು ಮುಂದುವರೆಯಲ್ಲಿದ್ದಾರೆ. ಇವರ ಜತೆಗೆ ರವಿಕಾಂತೇಗೌಡ, ದಿಲೀಪ್, ಸಿದ್ದರಾಮಪ್ಪ, ಲೋಕೇಶ್ಕುಮಾರ್, ಬಾಲಕೃಷ್ಣೇಗೌಡ, ರಾಜೇಂದ್ರಪ್ರಸಾದ್, ಆರ್. ರಮೇಶ್ ಅವರು ಡಿಐಜಿ ಹುದ್ದೆಗೆ ಬಡ್ತಿ ಪಡೆಯಲಿದ್ದಾರೆ.
ಕೆಲ ಆಯುಕ್ತರ ಬದಲಾವಣೆ
ರವಿಕಾಂತೇಗೌಡ ಅವರು ನಗರದ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತರ ಹುದ್ದೆಗೆ, ಲೋಕೇಶ್ಕುಮಾರ್ ಅವರು ಹುಬ್ಬಳ್ಳಿ-ಧಾರವಾಡ ಕಮೀಷನರ್ ಹುದ್ದೆಗೆ, ರಾಜೇಂದ್ರಪ್ರಸಾದ್ ಅವರು ಮಂಗಳೂರು ಪೊಲೀಸ್ ಆಯುಕ್ತರ ಹುದ್ದೆಗೆ, ಬಾಲಕೃಷ್ಣೇಗೌಡ ಅವರು ಮೈಸೂರು ಪೊಲೀಸ್ ಕಮೀಷನರ್ ಹುದ್ದೆಗೆ ನಿಯೋಜನೆಗೊಳ್ಳುವ ಸಾಧ್ಯತೆ ಇದೆ.
ಡಿಐಜಿ ಹುದ್ದೆಯ ಬಡ್ತಿಯಿಂದ ಕೆಜಿಎಫ್,ದಕ್ಷಿಣಕನ್ನಡ ಸೇರಿ ಕೆಲವು ಜಿಲ್ಲೆಗಳಲ್ಲಿ ಎಸ್ಪಿಗಳು ತೆರವಾಗಲಿದ್ದು ಅದರ ಜೊತೆಗೊಂದು ವರ್ಷ ಜಿಲ್ಲೆಗಳಲ್ಲಿ ಎಸ್ಪಿಯಾಗಿ ಪೊರೈಸಿರುವ ತುಮಕೂರು,ರಾಮನಗರ,ಕೋಲಾರ ಗುಲ್ಬರ್ಗ ಸೇರಿ ಇತರ ಜಿಲ್ಲೆಗಳ ಎಸ್ಪಿ ಹುದ್ದೆಗಳಿಗಾಗಿ ಪೈಪೋಟಿ ಹೆಚ್ಚಾಗಿದೆ.ಕಳೆದ ಕೆಲವು ತಿಂಗಳ ಹಿಂದೆ ರಾಜ್ಯದ ಸುಮಾರು 28 ಮಂದಿ ಅಧಿಕಾರಿಗಳು ಐಪಿಎಸ್ಗೆ ಬಡ್ತಿ ಪಡೆದರೆ ನೇರವಾಗಿ ಬಂದಿರುವ ಐಪಿಎಸ್ ಆಗಿ ಬಂದಿರುವ ಅಧಿಕಾರಿಗಳಲ್ಲಿ ಜಿಲ್ಲೆಗಳನ್ನು ಪಡೆಯಲು ತಮ್ಮ ಪ್ರಭಾವ ಬಳಸಿ ಲಾಭಿ ನಡೆಸಿದ್ದಾರೆ.
ಇವರಲ್ಲದೆ ನಗರದ ಡಿಸಿಪಿಯಾಗಿರುವ ಡಾ. ಬೋರಲಿಂಗಯ್ಯ ಅವರು ಉತ್ತರ ವಿಭಾಗಕ್ಕೆ ನಿಯೋಜನೆಗೊಳ್ಳಲಿದ್ದು, ಈಶಾನ್ಯ ವಿಭಾಗದ ಡಿಸಿಪಿ ಹುದ್ದೆಗೆ ಲಾಬಿ ಜೋರಾಗಿದೆ. ಸಂಚಾರ ವಿಭಾಗದಲ್ಲಿ ಪಶ್ಚಿಮ ವಿಭಾಗಕ್ಕೆ ಸೌಮ್ಯಲತಾ ಅವರು ನಿಯೋಜನೆಗೊಂಡಿದ್ದು, ಸದ್ಯದಲ್ಲೇ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಜನವರಿ 1ಕ್ಕೆ ಪೊಲೀಸ್ ಇಲಾಖೆಯಲ್ಲಿ ಭಾರಿ ಮಟ್ಟದ ವರ್ಗಾವಣೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ