ಚಿತ್ರದುರ್ಗ:
ಚಳ್ಳಕೆರೆ ತಾಲೂಕು ವೀರದಿಮ್ಮನಹಳ್ಳಿ, ರಾಂಜಿಹಟ್ಟಿ ಲಂಬಾಣಿ ತಾಂಡಾಗಳಿಗೆ ಸ್ಮಶಾನ ಭೂಮಿ ಅಭಿವೃದ್ದಿಪಡಿಸಿಕೊಡಬೇಕೆಂದು ಆಗ್ರಹಿಸಿ ಕರ್ನಾಟಕ ಬಂಜಾರ ಜನಜಾಗೃತಿ ಅಭಿಯಾನ ಸಮಿತಿಯ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಸ್ಮಶಾನ ಭೂಮಿಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದ ಅಭಿಯಾನ ಸಮಿತಿಯ ಕಾರ್ಯಕರ್ತರು ಸ್ಮಶಾನ ಭೂಮಿ ಅಭಿವೃದ್ದಿಪಡಿಸಲೇಬೇಕೆಂದು ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಜನಪರ ಹೋರಾಟಗಾರ ನರೇನಹಳ್ಳಿ ಅರುಣ್‍ಕುಮಾರ್ ವೀರದಿಮ್ಮನಹಳ್ಳಿ, ರಾಂಜಿಹಟ್ಟಿ, ಲಂಬಾಣಿ ತಾಂಡಾಗಳಿಗೆ ಸ್ಮಶಾನಕ್ಕಾಗಿಯೇ ರಿ.ಸ.ನಂ.44 ರಲ್ಲಿ 3.20 ಗೋಮಾಳ ಭೂಮಿಯನ್ನು ಕಾಯ್ದಿರಿಸಲಾಗಿದ್ದು, ಅದೇ ಭೂಮಿಯಲ್ಲಿ ರುದ್ರಭೂಮಿಯನ್ನು ಅಭಿವೃದ್ದಿಪಡಿಸಿ ತಂತಿಬೇಲಿ, ನೀರು, ಗೇಟುಗಳನ್ನು ಅಳವಡಿಸಿ ಶಾಶ್ವತವಾದ ಪರಿಹಾರ ಕಲ್ಪಿಸುವ ಜವಾಬ್ದಾರಿ ಚಳ್ಳಕೆರೆ ತಾಲೂಕು ಆಡಳಿತದ ಮೇಲಿದ್ದು, ಈಗಾಗಲೆ ತಹಶೀಲ್ದಾರ್‍ರವರು ಸ್ಮಶಾನ ಭೂಮಿಯ ಅಭಿವೃದ್ದಿಗಾಗಿ ಕಾಮಗಾರಿಯನ್ನು ಆರಂಭಿಸಿದ್ದು, ಕೆಲವು ರಾಜಕೀಯ ಒತ್ತಡಗಳಿಂದಾಗಿ ಅಭಿವೃದ್ದಿ ಕಾಮಗಾರಿಯಲ್ಲಿ ವಿಳಂಭವಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲಾಡಳಿತ ನಿಂತು ಹೋಗಿರುವ ಕಾಮಗಾರಿಯನ್ನು ಪುನರಾರಂಭಿಸಿ ಸ್ಮಶಾನ ಅಭಿವೃದ್ದಿಗಾಗಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸ್ಮಶಾನ ಭೂಮಿಯ ಸುತ್ತಮುತ್ತ ಲ್ಯಾಂಡ್‍ಮಾಫಿಯಾಗಳು ನಿವೇಶನಗಳನ್ನು ಅಭಿವೃದ್ದಿಪಡಿಸಿದ್ದು, ಅವರಿಂದಾಗಿ ತಾಂಡಾದ ಜನರು ಆತಂಕಕ್ಕೊಳಗಾಗಿದ್ದು, ಸ್ಮಶಾನ ಭೂಮಿ ಬಂದೋಬಸ್ತಾದರೆ ರಾಂಜಿಹಟ್ಟಿ ಮತ್ತು ವೀರದಿಮ್ಮನಹಳ್ಳಿ ಗ್ರಾಮಗಳಿಗೆ ಸಾಕಾರ ಮಾಡಿದಂತಾಗುತ್ತದೆ ಎಂದರು.
ಇನ್ನು ಹತ್ತು ದಿನದೊಳಗಾಗಿ ಸ್ಮಶಾನ ಭೂಮಿಯ ಅಭಿವೃದ್ದಿ ಕಾರ್ಯವನ್ನು ಪೂರ್ಣಗೊಳಿಸುವುದಾಗಿ ಪ್ರತಿಭಟನಾಕಾರರಿಗೆ ಜಿಲ್ಲಾಧಿಕಾರಿ ಭರವಸೆ ನೀಡಿದರು ಎಂದು ನರೇನಹಳ್ಳಿ ಅರುಣ್‍ಕುಮಾರ್ ಹೇಳಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಬಂಜಾರ ಜನಜಾಗೃತಿ ಅಭಿಯಾನ ಸಮಿತಿಯ ಸಂಚಾಲಕ ಸಿ.ಗಣೇಶ್‍ನಾಯ್ಕ ವೀರದಿಮ್ಮನಹಳ್ಳಿ ಲಂಬಾಣಿ ತಾಂಡದ ಮುಖಂಡ ಎನ್.ಮಹಂತೇಶ್, ಸೇವಾಲಾಲ್ ಯುವ ಸಂಘದ ಅಧ್ಯಕ್ಷ ಶಂಕರ್‍ನಾಯ್ಕ ಎಲ್. ವೆಂಕಟೇಶ್‍ನಾಯ್ಕ, ಗೋಪಾಲನಾಯ್ಕ, ಚಂದ್ರನಾಯ್ಕ, ಗೋವಿಂದನಾಯ್ಕ ಹಾಗೂ ಕರ್ನಾಟಕ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಂಘಟನೆಯ ರಾಜ್ಯಾಧ್ಯಕ್ಷ ಅನಂತಮೂತಿನಾಯ್ಕ, ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ರಮೇಶ್‍ನಾಯ್ಕ, ಲಂಬಾಣಿ ಸಮಾಜದ ಮುಖಂಡ ಎಂ.ಆರ್.ನಗರ ತಿಪ್ಪೇಸ್ವಾಮಿ, ವಿಷ್ಣುನಾಯ್ಕ, ಬೇವಿನಹಳ್ಳಿ ಜಯನಾಯ್ಕ, ಭೀಮಸಮುದ್ರದ ಅನಿಲ್‍ಕುಮಾರ್‍ನಾಯ್ಕ, ಜಯರಾಂನಾಯ್ಕ ಇನ್ನು ಮುಂತಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ