ಆಧುನಿಕ ಕೃಷಿ ತಂತ್ರಜ್ಞಾನದ ಮೂಲಕ ಲಾಭದಾಯ ಬೆಳೆಯನ್ನು ಬೆಳೆಯಿರಿ: ಟಿ.ರಘುಮೂರ್ತಿ .

ಚಳ್ಳಕೆರೆ

         ರಾಜ್ಯ ಸರ್ಕಾರ ಕಳೆದ ಹಲವಾರು ವರ್ಷಗಳಿಂದ ರೈತ ಸಮುದಾಯದ ಅಭ್ಯುದಯಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ನಿರಂತರವಾಗಿ ಬರಗಾಲದ ದುಸ್ಥಿತಿಯನ್ನು ಎದುರಿಸುತ್ತಿರುವ ಇಲ್ಲಿನ ರೈತ ಸಮುದಾಯಕ್ಕೆ ಬೆಳೆ ನಷ್ಟ ಪರಿಹಾರ ಹಾಗೂ ವಿಮೆ ಮೂಲಕ ಸ್ವಲ್ಪಭಾಗದ ಹಣ ರೈತರಿಗೆ ತಲುಪಿದ್ದು ಇದು ನೆಮ್ಮದಿ ತರುವ ವಿಷಯವಾಗಿದೆ. ಕಳೆದ 2016-17ನೇ ಸಾಲಿನಲ್ಲಿ ಬೆಳೆ ವಿಮೆ ಹಾಗೂ ಬೆಳೆ ಪರಿಹಾರ ರೂಪದಲ್ಲಿ ಸುಮಾರು 50 ಕೋಟಿ ಹಣವನ್ನು ರೈತರಿಗೆ ನೀಡಲಾಗಿದೆ ಎಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ತಿಳಿಸಿದರು.

          ಅವರು, ಮಂಗಳವಾರ ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ಕೃಷಿ ಇಲಾಖೆ ಆವರಣದಲ್ಲಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ರೋಟರಿ ಕ್ಲಬ್, ತಾಲ್ಲೂಕು ಪಂಚಾಯಿತಿ ಸಹಯೋಗದಲ್ಲಿ ನಡೆದ ರೈತ ಮಹಿಳೆಯರಿಗೆ ಹಣ್ಣು ಸಂಸ್ಕರಣಾ ಹಾಗೂ ಆರೋಗ್ಯ ಭಾಗ್ಯ ಕುರಿತು ಹಮ್ಮಿಕೊಂಡಿದ್ದ ಒಂದು ದಿನದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಈ ಭಾಗದ ರೈತರ ಸಂಕಷ್ಟಗಳ ನಿವಾರಣೆಗಾಗಿ ಇತ್ತೀಚೆಗೆ ಸರ್ಕಾರ ಬೆಳೆ ನಷ್ಟ ಪರಿಹಾರ ಸಮೀಕ್ಷೆಗೆ ಮೊಬೈಲ್ ಆಫ್ ಮೂಲಕ ಪರಿಶೀಲನೆ ನಡೆಸಿದ್ದು, ಶೇ. 90ರಷ್ಟು ರೈತರು ಪರಿಹಾರವನ್ನು ಪಡೆಯಲಿದ್ದಾರೆಂದರು.

          ರೈತರೂ ಸಹ ಅತಿ ಕಡಿಮೆ ನೀರಿನಲ್ಲಿ ಉತ್ತಮ ಲಾಭದಾಯಕವಾಗುವಂತಹ ಬೆಳೆಗಳನ್ನು ಬೆಳೆಯಬೇಕು. ಆಧುನಿಕ ತಾಂತ್ರಿಕತೆಗಳನ್ನು ಮೈಗೂಡಿಸಿಕೊಳ್ಳಬೇಕು. ಪ್ರತಿಯೊಂದು ಹಂತದಲ್ಲೂ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಮನವಿ ಮಾಡಿದರು.

          ಬಬ್ಬೂರಿನ ಕೃಷಿ ಸಂಶೋಧನಾ ಕೇಂದ್ರದ ಕೃಷಿ ವಿಜ್ಞಾನ ಡಾ.ಓಂಕಾರಪ್ಪ ಮಾತನಾಡಿ, ಮನುಷ್ಯನ ಆರೋಗ್ಯಕ್ಕೂ ನಮ್ಮ ಸುತ್ತಮುತ್ತಲಿನ ಮರಗಳಿಗೂ ವಿಶೇಷವಾದ ಅನುಬಂಧವಿದೆ. ಕಾರಣ ನಮ್ಮ ಸುತ್ತಮುತ್ತ ಮರಗಳಿಂದ ಬರುವ ಶುದ್ದವಾದ ಗಾಳಿಯಲ್ಲಿರುವ ಆಮ್ಲಜನಕ ನಮಗೆ ಜೀವಿಸಲು ಅವಕಾಶ ಮಾಡಿಕೊಡುತ್ತದೆ. ರೈತರು ತಮ್ಮ ಜಮೀನಿನ ಮಣ್ಣಿನ ಅಂಶಗಳ ಬಗ್ಗೆ ಗಮನಹರಿಸದೆ ನಿರ್ಲಕ್ಷ್ಯೆ ತೋರುವುದರಿಂದ ಯಾವುದೇ ಗುಣಮಟ್ಟ, ಲಾಭದಾಯ ಬೆಳೆಯನ್ನು ಬೆಳೆಯಲು ಸಾಧ್ಯವಾಗುವುದಿಲ್ಲ.

            ಮಣ್ಣಿನ ಪರೀಕ್ಷೆಯ ನಂತರ ಮಣ್ಣಲ್ಲಿನ ಜೀವಾಂಶಗಳ ಬಗ್ಗೆ ತಜ್ಞರಿಂದ ಮಾಹಿತಿ ಪಡೆದು ಅವರ ಮಾರ್ಗದರ್ಶನದಲ್ಲಿ ಕೃಷಿಯಲ್ಲಿ ತೊಡಗುವಂತೆ ಮನವಿ ಮಾಡಿದರು.

            ಇದೇ ಸಂದರ್ಭದಲ್ಲಿ ಕ್ಷೇತ್ರದ ಪ್ರಗತಿಪರ ರೈತರಾದ ಕೋನಿಗರಹಳ್ಳಿ ರಂಗಸ್ವಾಮಿ, ಮೀರಾಸಬಿಹಳ್ಳಿ ಕೃಷ್ಣಮೂರ್ತಿ, ವಿರೂಪಾಕ್ಷಪ್ಪ ಮತ್ತು ವನಜಾಕ್ಷಮ್ಮರವರನ್ನು ಶಾಸಕರು ಸನ್ಮಾನಿಸಿದರು. ಕೃಷಿ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವಂತೆ ಸನ್ಮಾನಿತರನ್ನು ವಿನಂತಿಸಿದರು.

          ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕವಿತಾರಾಮಣ್ಣ, ಉಪಾಧ್ಯಕ್ಷೆ ತಿಪ್ಪಮ್ಮ, ಜಿಲ್ಲಾ ಪಂಚಾಯಿತಿ ಶಶಿರೇಖಾ, ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಗಿರಿಯಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಸಣ್ಣಸೂರಯ್ಯ, ಗದ್ದಿಗೆ ತಿಪ್ಪೇಸ್ವಾಮಿ, ಸಮರ್ಥರಾಯ, ರಂಜಿತಾ, ಅಖಂಡ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ, ಕರ್ನಾಟಕ ರಾಜ್ಯ ರೈತ ಸಂಘದ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಜಿಲ್ಲಾ ರೈತ ಸಂಘದ ಅಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ, ಪ್ರಗತಿಪರ ರೈತ ಆರ್.ಎ.ದಯಾನಂದಮೂರ್ತಿ, ನಗರಸಭಾ ಸದಸ್ಯೆ ಸುಮಾಭರಮಣ್ಣ, ಕೃಷಿಕ ಸಮಾಜದ ತಾಲ್ಲೂಕು ಅಧ್ಯಕ್ಷ ಜಿ.ಟಿ.ತಿಪ್ಪೇಶ್, ನಿರ್ದೇಶಕರಾದ ಕೆ.ಟಿ.ನಿಜಲಿಂಗಪ್ಪ, ಬೊಪ್ಪಣ್ಣ, ಎಂ.ಕರಿಯಪ್ಪ, ನಾಗೇಂದ್ರಪ್ಪ, ರೋಟರಾಟ್‍ಗಳಾದ ಡಾ.ಜೆ.ಎಂ.ಜಯಕುಮಾರ್, ಪ್ರಹ್ಲಾದ್, ತಿಪ್ಪೇಸ್ವಾಮಿ, ಜಯಪ್ರಕಾಶ್, ನಾಗೇಶ್ ಮುಂತಾದವರು ಭಾಗವಹಿಸಿದ್ದರು. ಪ್ರಾರಂಭದಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿ ವಿರೂಪಾಕ್ಷಪ್ಪ ಸ್ವಾಗತಿಸಿದರು, ಕೃಷಿ ಅಧಿಕಾರಿ ಎನ್.ಮಾರುತಿ ನಿರೂಪಿಸಿ ವಂದಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link