ಶಿರಾ
ನಗರದ ಕುಡಿಯುವ ನೀರಿನ ಜಲ ಸಂಗ್ರಹಾಗಾರವಾದ ದೊಡ್ಡ ಕೆರೆಯಲ್ಲಿ ಒಂದು ವರ್ಷಕ್ಕೆ ಸಾಕಾಗುವಷ್ಟು ಹೇಮಾವತಿಯ ನೀರು ಸಂಗ್ರಹಗೊಂಡಿದ್ದು, ಸದರಿ ಕೆರೆಯ ನೀರಿಗೆ ನಗರದ ಕಲುಷಿತ ನೀರು ಸೇರ್ಪಡೆಗೊಳ್ಳುತ್ತಿದೆ ಎಂಬ ಸಾರ್ವಜನಿಕರ ದೂರಿನ ಮೇರೆಗೆ ಮಂಗಳವಾರ ಶಾಸಕ ಬಿ.ಸತ್ಯನಾರಾಯಣ್ ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇಲ್ಲಿನ ನಗರಸಭೆಯ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಕಳೆದ ಹಲವು ದಿನಗಳಿಂದಲೂ ನಗರದ ಕೆರೆ ಹಿಂಭಾಗದ ಕಾಲನಿಯ ಕಲುಷಿತ ನೀರು ಕುಡಿಯುವ ನೀರಿನ ಕೆರೆಗೆ ಸೇರುತ್ತಿದ್ದು, ಈ ಬಗ್ಗೆ ಸಾರ್ವಜನಿಕರು ಸಾಕಷ್ಟು ದೂರು ನೀಡಿದ್ದರೂ ಇಲ್ಲಿನ ನಗರಸಭೆಯ ಅಧಿಕಾರಿಗಳು ಕ್ರಮ ಕೈಗೊಂಡಿರಲಿಲ್ಲ.
ಸಾರ್ವಜನಿಕರ ದೂರಿನ ಮೇರೆಗೆ ಶಾಸಕ ಸತ್ಯನಾರಾಯಣ್ ಸ್ಥಳಕ್ಕೆ ಭೇಟಿ ನೀಡಿ, ದೂರವಾಣಿ ಮೂಲಕ ನಗರಸಭೆಯ ಆಯುಕ್ತರಿಗೆ ಕ್ರಮ ಕೈಗೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಕಲುಷಿತ ನೀರು ಕುಡಿಯುವ ಜಲ ಸಂಗ್ರಹಾಗಾರಕ್ಕೆ ಹೋಗುತ್ತಿದ್ದು ಸಾರ್ವಜನಿಕರ ದೂರಿನ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಸದರಿ ಕಲುಷಿತ ನೀರು ಕುಡಿಯುವ ನೀರಿನ ದೊಡ್ಡಕೆರೆಗೆ ಸಾಗುವುದನ್ನು ನಿಲ್ಲಿಸಲು ಕ್ರಮ ಕೈಗೊಳ್ಳಲಾಗಿದ್ದು, ಸದರಿ ಕಲುಷಿತ ನೀರನ್ನು ಚಿಕ್ಕಕೆರೆಯತ್ತ ಸಾಗಿಸಲು ಚರಂಡಿ ನಿರ್ಮಾಣ ಕೈಗೊಳ್ಳಲಾಗುವುದು ಎಂದರು. ಜೆ.ಡಿ.ಎಸ್. ಪಕ್ಷದ ಮುಖಂಡರಾದ ಶಿರಾ ರವಿ, ಮಹಾದೇವ್, ಕೋಟೆ ರವಿ, ಕೆಂಚೆಗೌಡ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ