ದಾವಣಗೆರೆ:
ಕ್ರೈಸ್ತ ಧರ್ಮದ ಸಂಸ್ಥಾಪಕ ಯೇಸುಕ್ರಿಸ್ತ ಅವರ ಜಯಂತಿಯ ಪ್ರತೀಕವಾಗಿರುವ ಕ್ರಿಸ್ಮಸ್ ಹಬ್ಬವನ್ನು ಮಂಗಳವಾರ ನಗರದಲ್ಲಿ ಕ್ರೈಸ್ತ ಬಾಂಧವರು ಸಡಗರ, ಸಂಭ್ರಮದಿಂದ ಆಚರಿಸಿದರು.
ಕ್ರಿಸ್ಮಸ್ ಹಬ್ಬದ ಹಿನ್ನೆಲೆಯಲ್ಲಿ ದಾವಣಗೆರೆಯ 130 ವರ್ಷದ ಪಿಎಸ್ಐ ಚಿಯೋನ್ ಚರ್ಚ್, ಪಿ.ಜೆ. ಬಡಾವಣೆಯಲ್ಲಿನ ಸೇಂಟ್ ಥಾಮಸ್ ಚರ್ಚ್, ಜಾಲಿನಗರ ಚರ್ಚ್, ಜಯನಗರ ಚರ್ಚ್ ಸೇರಿದಂತೆ ಎಲ್ಲಾ ಚರ್ಚ್ಗಳು ವಿದ್ಯುತ್ ದೀಪಾಲಂಕಾರದಿಂದ ಅಲಂಕೃತವಾಗಿ ಸಾರ್ವಜನಿಕರನ್ನು ಕೈಬಿಸಿ ಕರೆಯುತ್ತಿದ್ದವು.
ಗೋದಲಿ ತಯಾರಿ, ಅಲಂಕಾರಿಕ ವಸ್ತುಗಳಿಂದ ಸಿಂಗರಿಸಲ್ಪಟ್ಟ ಚರ್ಚ್ಗಳು ವಿಶೇಷವಾಗಿ ಕಂಗೊಳಿಸುತ್ತಿದ್ದವು. ಕ್ರೈಸ್ತ ಬಾಂಧವರು ಕ್ಯಾಂಡೆಲ್ ಲೈಟ್ ಹೊತ್ತಿಸುವ ಮೂಲಕ ಯೇಸುಕ್ರಿಸ್ತನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ, ಕ್ರಿಸ್ಮಸ್ ಹಿನ್ನೆಲೆಯಲ್ಲಿ ತರಹೇವಾರಿ ಕೇಕ್ಗಳನ್ನು ಕತ್ತರಿಸುವ ಮೂಲಕ ಕ್ರಿಸ್ಮಸ್ ಆಚರಿಸಿ, ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.
ಹಬ್ಬದ ಹಿನ್ನೆಲೆಯಲ್ಲಿ ಹೊಸ ಬಟ್ಟೆ ಧರಿಸಿ ಮನೆಗಳಲ್ಲಿ, ಚರ್ಚ್ಗಳಲ್ಲಿ ಭಕ್ಷಭೋಜನಗಳನ್ನು ತಯಾರಿಸಿ, ಸಂಬಂಧಿಕರನ್ನು, ಸ್ನೇಹಿತರನ್ನು ಮನೆ, ಚರ್ಚ್ಗಳಿಗೆ ಆಹ್ವಾನಿಸಿ ಉಣಬಡಿಸಿದರು.
ಕ್ರಿಸ್ಮಸ್ ಹಿನ್ನಲೆಯಲ್ಲಿ ನಗರದ ರಾಂ ಅಂಡ್ ಕೋ ವೃತ್ತ, ಚರ್ಚ್ ರಸ್ತೆ ಸುತ್ತಮುತ್ತಲಿರುವ ಅಂಗಡಿಗಳಲ್ಲಿ ಕ್ರಿಸ್ಮಸ್ ಟ್ರೀ, ಕಲರ್ ಕಲರ್ ಮಿಂಚುಗಳು, ನಕ್ಷತ್ರಗಳು, ರಿಬ್ಬನ್ಗಳು ಹಾಗೂ ಅಲಂಕಾರಿಕ ಸಾಮಗ್ರಿಗಳನ್ನು ಮಾರಾಟ ಜೋರಾಗಿತ್ತು. ಕ್ರಿಸ್ತನ ಜನನ, ಬಾಲ್ಯ ಹಾಗೂ ಜೀವನ ಬಿಂಬಿಸುವ ಮಾದರಿ ನಿರ್ಮಿಸಿದ್ದು ವಿಶೇಷವಾಗಿತ್ತು. ಇದನ್ನು ಕ್ರಿಫ್ ಎನ್ನುವರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








