ಹೊಳಲ್ಕೆರೆ:
ಇತ್ತೀಚಿನ ದಿನಗಳಲ್ಲಿ ನಾನಾ ಕಾರಣಗಳಿಂದ ಮಕ್ಕಳು ಹಾಗೂ ಗರ್ಭಿಣಿ ಮಹಿಳೆಯರಲ್ಲಿ ಪೋಷಕಾಂಶಗಳ ಕೊರತೆ ಹೆಚ್ಚು ಕಂಡು ಬರುತ್ತಿದ್ದು. ಇದಕ್ಕೆ ಪ್ರಮುಖ ಕಾರಣ ನಾವು ಬಳಸುವ ಆಹಾರದ ಬಗ್ಗೆ ಸಂಪೂರ್ಣ ಜ್ಞಾನ ಇಲ್ಲದಿರುವುದಾಗಿದೆ ಎಂದು ಇಓ ಮಹಾಂತೇಶ್ ತಿಳಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿಯಲ್ಲಿ ಹಿರಿಯ ತೋಟಗಾರಿಕೆ ಇಲಾಖೆಯಿಂದ ತಾಲ್ಲೂಕು ಪಂಚಾಯತ್ ಯೋಜನೆಯಲ್ಲಿ ರೈತ ಮಹಿಳೆಯರಿಗೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ತೋಡಟಗಾರಿಕೆ ಉತ್ಪನ್ನಗಳಾದ ನಾನಾ ಬಗೆಯ ಹಣ್ಣುಗಳು ಹಾಗೂ ಇತರ ತೋಟಗಾರಿಕೆ ಉತ್ಪನ್ನಗಳನ್ನು ಹೆಚ್ಚು ಹೆಚ್ಚು ಬಳಸುವುದು ಆರೋಗ್ಯಕ್ಕೆ ಒಳ್ಳೆಯದು ಹಾಗಾಗಿ ಇಂಥ ಉತ್ಪನ್ನಗಳ ತಾಜಾತನ ಹಾಳಾಗದಂತೆ ಅವುಗಳನ್ನು ಶೇಖರಣೆ ಮಾಡುವುದು ಹಾಗೂ ಅವುಗಳ ಬಳಕೆ ಬಗ್ಗೆ ಇಂತಹ ತರಬೇತಿಗಳಲ್ಲಿ ಅರಿಯಬೇಕು ಎಂದರು.
ಪೌಷ್ಟಿಕತೆಯ ಕೊರತೆ ಕಂಡು ಬರುವ ಮಕ್ಕಳು ಹಾಗೂ ಗರ್ಭಿಣಿ ಮಹಿಳೆಯರಿಗೆ ತೋಟಗಾರಿಕೆ ಉತ್ಪನ್ನಗಳನ್ನು ಕೊಡುವುದರಿಂದ ಅವರ ಆರೋಗ್ಯ ಸುಧಾರಿಸುತ್ತಿದೆ. ಇವುಗಳನ್ನು ಹೇಗೆ ಮತ್ತು ಯಾವ ರೀತಿ ಉಪಯೋಗಿಸಬೇಕು ಎನ್ನುವುದನ್ನು ನಮ್ಮ ಗ್ರಾಮೀಣ ರೈತ ಮಹಿಳೆಯರು ಅರಿಯಬೇಕು ಎಂದರು.
ತೋಟಗಾರಿಕೆ ಉತ್ಪನ್ನಗಳ ಶೇಖರಣೆ ಹಾಗೂ ಸಂಸ್ಕರಣೆಗಳ ಬಗ್ಗೆ ಮಧ್ಯವರ್ತಿಗಳು, ದಲ್ಲಾಳಿಗಳ ಪಾತ್ರವಿಲ್ಲದೆ ಉತ್ಪಾದಕರು ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕ ಕೊಂಡಿ ಬೆಸೆಯುವ ತೋಟಗಾರಿಕೆ ಇಲಾಖೆಯ ವೇದಿಕೆಯ ಉಚಿತ ನೆರವು ಒದಗಿಸಲಿದೆ ಎಂದರು.
ಈ ಸಂದರ್ಭದಲ್ಲಿ ತಾ.ಪಂ.ಅಧ್ಯಕ್ಷೆ ಸುಜಾತ ಧನಂಜಯ್ ನಾಯ್ಕ್, ತಾ.ಪಂ. ಸದಸ್ಯ ಶಿವಕುಮಾರ್, ಗ್ರಾಮ.ಪಂ ಅಧ್ಯಕ್ಷ ಡಿ.ಸಿ.ಮೋಹನ್, ತೋಟಗಾರಿಕ ಸಹಾಯಕ ನಿರ್ದೇಶಕಿ ಸುಮ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ