ಗುಬ್ಬಿ
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಗುಣಮಟ್ಟವನ್ನು ಉತ್ತಮ ಪಡಿಸಿಕೊಂಡು ಆದರ್ಶ ವಿದ್ಯಾರ್ಥಿಗಳಾಗಿ ರೂಪುಗೊಳ್ಳುವಂತೆ ಗ್ರೇಸ್ ಅಕಾಡೆಮಿ ಅಧ್ಯಕ್ಷ ಪ್ರೊ:ಕೆ.ಸುಬ್ರಹ್ಮಣ್ಯ ಕರೆನೀಡಿದರು.
ಪಟ್ಟಣದ ಶಿವರಾತ್ರಿ ಕಲ್ಯಾಣ ಮಂಟಪದಲ್ಲಿ ಗ್ರೇಸ್ ಅಕಾಡೆಮಿ, ಜಿ.ಹೆಚ್.ವಿ.ಎಸ್ ಟ್ರಸ್ಟ್ ಹಾಗೂ ಲಯನ್ಸ್ ಸಂಸ್ಥೆಯ ಸಹಯೋಗದಲ್ಲಿ ಏರ್ಪಡಿಸಿದ್ದ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹೇಗೆ ತಯಾರಿ ನಡೆಸಬೇಕು ಮತ್ತು ಪರೀಕ್ಷೆ ಎದುರಿಸುವ ಬಗ್ಗೆ ಮಾಹಿತಿ ಮತ್ತು ಮಾರ್ಗದರ್ಶನ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳನ್ನು ಸಮಗ್ರವಾಗಿ ಅಧ್ಯಯನ ನಡೆಸುವ ಮೂಲಕ ತಮ್ಮ ಶೈಕ್ಷಣಿಕ ಪ್ರಗತಿಯನ್ನು ಉತ್ತಮಪಡಿಸಿಕೊಂಡು ಪರೀಕ್ಷೆಗಳನ್ನು ಸುಲಭವಾಗಿ ಎದುರಿಸುವತ್ತ ಮುಂದಾಗುವಂತೆ ತಿಳಿಸಿದರು.
ಉತ್ತಮ ಶಿಕ್ಷಣ ಸಂಸ್ಕಾರಗಳನ್ನು ಕಲಿಯುವ ಮೂಲಕ ತಮ್ಮ ಬದುಕನ್ನು ಹಸನು ಮಾಡಿಕೊಳ್ಳುವತ್ತ ಮುಂದಾಗುವಂತೆ ಕರೆನೀಡಿದ ಅವರು, ವಿದ್ಯಾರ್ಥಿಗಳು ಆಳವಾದ ಅಧ್ಯಯನ ನಡೆಸುವ ಮೂಲಕ ಪರೀಕ್ಷೆ ಎಂಬ ಭಯವನ್ನು ಹೋಗಲಾಡಿಸುವಂತೆ ತಿಳಿಸಿದರು.
ಲಯನ್ಸ್ ಸಂಸ್ಥೆ ಅಧ್ಯಕ್ಷ ಉಂಡೆರಾಮಣ್ಣ ಮಾತನಾಡಿ ಶೈಕ್ಷಣಿಕ ಮೌಲ್ಯಗಳನ್ನು ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚಿನ ಗಮನಹರಿಸುವ ಮೂಲಕ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸುವಂತಹ ಧೈರ್ಯ ಬೆಳೆಸಿಕೊಳ್ಳುವಂತೆ ತಿಳಿಸಿದರು.
ಜಿ.ಹೆಚ್.ವಿ.ಎಸ್ ಟ್ರಸ್ಟ್ ಕಾರ್ಯದರ್ಶಿ ಶಂಕರ್‍ಪ್ರಸಾದ್ ಮಾತನಾಡಿ ಟ್ರಸ್ಟ್ ವತಿಯಿಂದ ಹಲವು ಹಂತದ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸುತ್ತಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಎರಡನೆ ಬಾರಿಗೆ ಇಂತಹ ವಿನೂತನ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಖ್ಯಾತ ಶಿಕ್ಷಣ ತಜ್ಞರನ್ನು ಕರೆಸಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾದ ಮಾರ್ಗದರ್ಶನಗಳನ್ನು ಕೊಡಿಸಲಾಗುತ್ತಿದೆ. ವಿದ್ಯಾರ್ಥಿಗಳು ಕಾರ್ಯಕ್ರಮದ ಸದುಪಯೋಗಪಡೆದುಕೊಂಡು ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಪ್ರಗತಿಪಥದತ್ತ ಸಾಗುವಂತೆ ತಿಳಿಸಿದರು.
ತಾಲ್ಲೂಕಿನ ವಿವಿಧ ಶಾಲಾ ಕಾಲೇಜುಗಳಿಂದ ಶಿಬಿರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಲಯನ್ಸ್ ಸಂಸ್ಥೆ ವತಿಯಿಂದ ಹಾಲು ಮತ್ತು ಬಿಸ್ಕೇಟ್ ವಿತರಿಸಲಾಯಿತು.
ಟ್ರಸ್ಟ್ ಅಧ್ಯಕ್ಷೆ ಉಮಾಕಾತ್ಯಾಯಿನಿ, ಟ್ರಸ್ಟ್ ಖಜಾಂಚಿ ರಮಾನಾಥ್, ಗ್ರ್ಯಾಂಡ್ ಏಟ್ರಿಯಾ ಪಿಯೂ ಕಾಲೇಜು ಅಧ್ಯಕ್ಷ ಪುನೀತ್, ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳಾದ ಜಿ.ಬಿ.ಮಲ್ಲಪ್ಪ, ಡಿ.ಆರ್.ಕೀರ್ತಿರಾಜ್, ಕೆ.ಎಲ್.ಗೋಪಾಲಕೃಷ್ಣಶೆಟ್ಟಿ ಸೇರಿದಂತೆ ತಾಲ್ಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ