ಶಿರಾ
ದಾಳಿಂಬೆ ತೋಟಕ್ಕೆ ಆಕಸ್ಮಿಕ ಬೆಂಕಿ ಬಿದ್ದ ಪರಿಣಾಮ ದಾಳಿಂಬೆ ಗಿಡಗಳು ಸೇರಿದಂತೆ ಔಷಧಿ, ಹನಿ ನೀರಾವರಿ ಸಲಕರಣೆಗಳು ಸುಟ್ಟು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿರುವ ಘಟನೆ ತಾಲ್ಲೂಕಿನ ಕಾಮಗೊಂಡನಹಳ್ಳಿ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.
ಬಡರೈತ ಸುಂದರಯ್ಯ ಸರ್ವೆ ನಂ.41/7ರಲ್ಲಿ ಇದ್ದ 4 ಎಕರೆ ಜಮೀನಿನಲ್ಲಿ ಸರ್ಕಾರ ನೀಡಿದ ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊಳವೆ ಬಾವಿ ಕೊರೆಸಿ ನೀರು ಸಿಕ್ಕಿದ ಕಾರಣ 2 ಎಕರೆಯಷ್ಟು ಜಮೀನಿನಲ್ಲಿ ದಾಳಿಂಬೆ ಬೆಳೆ ಬೆಳೆದಿದ್ದು, ಮೊಗ್ಗು ಬಿಟ್ಟಿದ್ದ ದಾಳಿಂಬೆ ಇನ್ನು ಕೆಲವೆ ತಿಂಗಳಲ್ಲಿ ಫಸಲು ಕೈ ಸೇರ ಬೇಕಿತ್ತು.
ಮಂಗಳವಾರ ರಾತ್ರಿ ತೋಟದಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಬೆಂಕಿ ಬಿದ್ದು ನೂರಾರು ದಾಳಿಂಬೆ ಗಿಡ, ಗುಡಿಸಲಿನಲ್ಲಿ ಇಟ್ಟಿದ್ದ ಔಷಧಿಗಳು, ಯಂತ್ರ ಮತ್ತು ಹನಿ ನೀರಾವರಿಯ ಡ್ರಿಪ್ ಪೈಪ್‍ಗಳು ಬೆಂಕಿಗೆ ಆಹುತಿಯಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ತೋಟಗಾರಿಕೆ ಸಹಾಯಕಾಧಿಕಾರಿ ತ್ಯಾಗರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೆಂದೊರೆ ತಾಪಂ ಸದಸ್ಯ ಕೆ.ಎಂ.ಶ್ರೀನಿವಾಸ್, ರೈತ ಸಂಘದ ಪ್ರಧಾನ ಕಾರ್ಯದರ್ಶಿ ನಾದೂರು ಕೆಂಚಪ್ಪ, ಉಪಾಧ್ಯಕ್ಷ ವೀರಕ್ಯಾತಪ್ಪ, ಗೋವಿಂದಪ್ಪ, ಕಾಂತರಾಜು ಉಪಸ್ಥಿತರಿದ್ದರು. ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ