ಕಾನೂನನ್ನು ಗೌರವಿಸುವ ಪ್ರತಿಯೊಬ್ಬ ವ್ಯಕ್ತಿಗೆ ಸಮಾಜದ ಆಧಾರಸ್ತಂಭವಾಗುತ್ತಾನೆ.

ಚಳ್ಳಕೆರೆ

        ಸಂವಿಧಾನದಿಂದ ರೂಪಿತಗೊಂಡ ಕಾನೂನು ಇಂದು ಸರ್ವವ್ಯಾಪಿಯಾಗಿದೆ. ಎಲ್ಲಾ ವರ್ಗದ ಕುಟುಂಬಗಳಿಗೂ ಸಹ ಕಾನೂನಿನ ರಕ್ಷಣೆ ಇದೆ. ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಸಹ ಕಾನೂನಿನ ಸಹಾಯದಿಂದಲೇ ಉತ್ತಮ ಜೀವನ ನಡೆಸಲು ಸಾಧ್ಯ. ಕಾನೂನಿನ ಮೌಲ್ಯ ಮತ್ತು ಅದರ ಸದ್ವಿನಿಯೋಗ ಕುರಿತು ಇನ್ನೂ ಹೆಚ್ಚಿನ ಮಟ್ಟದಲ್ಲಿ ಜನಜಾಗೃತಿಯಾಗಬೇಕಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಚಿತ್ರದುರ್ಗದ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಎಸ್.ಆರ್.ದಿಂಡಲಕೊಪ್ಪ ತಿಳಿಸಿದರು.
ಅವರು, ಗುರುವಾರ ಇಲ್ಲಿನ ಸರ್ಕಾರ ನೌಕರರ ಭವನದಲ್ಲಿ ಆಶಾ, ಅಂಗನವಾಡಿ, ಕಟ್ಟಡ ಕಾರ್ಮಿಕ ಮತ್ತು ಬಾಲ್ಯವ್ಯವಸ್ಥೆ, ಕಿಶೋರ ವ್ಯವಸ್ಥೆ, ಕಾರ್ಮಿಕ ಕಾಯ್ದೆ-1986-2016ರ ತಿದ್ದುಪಡಿ ಮತ್ತು ಬಾಲ್ಯವಿವಾಹ ನಿಷೇದ ಕುರಿತು ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

         ಇಂದು ಪ್ರತಿಯೊಂದು ಕುಟುಂಬವೂ ಅದು ವಿಶೇಷವಾಗಿ ಸಾರ್ವಜನಿಕ ಸೇವೆಗಳ ಹಿನ್ನೆಲೆಯಲ್ಲಿ ಇರುವ ಪ್ರತಿಯೊಬ್ಬ ವ್ಯಕ್ತಿಯೂ ಕಾನೂನಿನ ಸಹಾಯ ಪಡೆಯಬೇಕಿದೆ. ರಾಜ್ಯದಲ್ಲಿ ಕಾರ್ಮಿಕ ಸಮೂಹದ ಅಭ್ಯುದಯಕ್ಕಾಗಿ ಸರ್ಕಾರ ಕೋಟ್ಯಾಂತರ ಹಣವನ್ನು ಮೀಸಲಿಟ್ಟಿದೆ. ಬಹುತೇಕ ಕಾರ್ಮಿಕರು ಸೂಕ್ತ ಮಾರ್ಗದರ್ಶನವಿಲ್ಲದೆ ದಾಖಲಾತಿ ಪತ್ರವನ್ನು ಹೊಂದಿರುವುದಿಲ್ಲ. ಕಾರ್ಮಿಕನೆಂಬ ಇಲಾಖೆಯಿಂದ ದೃಢೀಕರಿಸಿ ಪತ್ರ ಹೊಂದಿದ್ದಲ್ಲಿ ಕೆಲಸದ ಸಂದರ್ಭದಲ್ಲಿ ಯಾವುದೇ ರೀತಿಯ ಅಪಾಯಗಳು ಉಂಟಾದಲ್ಲಿ ಕಾರ್ಮಿಕ ನಿಧಿನಿಯಿಂದ ಹಣ ಪಡೆಯಬಹುದಾಗಿದೆ. ಪ್ರತಿಯೊಬ್ಬ ಕಾರ್ಮಿಕನು ಕಾರ್ಮಿಕ ಇಲಾಖೆಯಲ್ಲಿ ತಮ್ಮ ಹೆಸರು ಹಾಗೂ ವಿವರವನ್ನು ನೊಂದಾಯಿಸಿಕೊಳ್ಳುವಂತೆ ಸೂಚಿಸಿದರು.

         ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರದ ಹಲವಾರು ಸೌಲಭ್ಯಗಳು ಮತ್ತು ಅವುಗಳನ್ನು ಪಡೆಯುವ ಕುರಿತು ಮಹಿಳಾ ಸಮೂಹ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಸಹಾಯ ಪಡೆಯಬೇಕು. ಸರ್ಕಾರದ ಕಾನೂನುಗಳು ಮತ್ತು ಅವುಗಳ ಅನುಷ್ಠಾನದ ಬಗ್ಗೆ ಹೆಚ್ಚು ಮಾಹಿತಿಯನ್ನು ಹೊಂದಿರುವ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರದ ಸೇತುವೆಯಾಗಿ ಕಾರ್ಯನಿರ್ವಹಿಸಬೇಕು ಎಂದರು. ಪ್ರಸ್ತುತ ಜಾರಿಯಲ್ಲಿರುವ ಎಲ್ಲಾ ಕಾನೂನುಗಳು ಜನರ ಹಿತವನ್ನು ಬಯಸಿ ರೂಪಿತವಾಗಿವೆ. ವಿಶೇಷವಾಗಿ ಬಾಲಕಾರ್ಮಿಕ ಪದ್ದತಿಯನ್ನು ತಡೆಯಬೇಕಿದೆ. ಬಾಲ್ಯವಿವಾಹವು ಸಹ ಕಾನೂನು ಬಾಹಿರ ಅಪರಾಧವಾಗಿದ್ದು, ಬೇರು ಸಹಿತ ಇದನ್ನು ಸಮಾಜದಿಂದ ಕಿತ್ತು ಹಾಕಬೇಕು ಎಂದರು.

         ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಎಂ.ನಾಗರಾಜು ಮಾತನಾಡಿ, ಕಾನೂನಿನ ಬಗ್ಗೆ ಅತಿ ಹೆಚ್ಚು ಜಾಗೃತಿಯನ್ನು ಮೂಡಿಸುವ ಕಾರ್ಯ ನಿರಂತರವಾಗಿ ನಡೆಯುತ್ತಾ ಬಂದಿದೆ. ಯಾವ ವ್ಯಕ್ತಿ ಕಾನೂನಿನ ಪರಿಮಿತಿಯನ್ನು ಅರಿತು ಬದುಕುತ್ತಾನೋ ಅವನಿಗೆ ಯಾವುದೇ ತೊಂದರೆ ಎದುರಾಗದು. ದುರುದ್ದೇಶದಿಂದ ಕಾನೂನನ್ನು ಉಲ್ಲಂಘಿಸಿದರೆ ಮಾತ್ರ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲವೆಂದರು.

           ಜಿಲ್ಲಾಧಿಕಾರಿಗಳ ಪರವಾಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ ಮಾತನಾಡಿ, ಸರ್ಕಾರ ಮತ್ತು ಸಮಾಜದ ದೃಷ್ಠಿಯಲ್ಲಿ ಯಾರೂ ಅಶಕ್ತರಲ್ಲ. ಆದರೆ, ಸರ್ಕಾರದ ಸೌಲಭ್ಯಗಳನ್ನು ಪಡೆಯುವಲ್ಲಿ ವಿಫಲರಾದಾಗ ಮಾತ್ರ ಅವರಲ್ಲಿ ಸಮಸ್ಯೆಗಳು ಉದ್ಭವವಾಗುತ್ತವೆ. ಸರ್ಕಾರದ ಎಲ್ಲಾ ಕಾರ್ಯಕ್ರಮಗಳು ಅನುಷ್ಠಾನಗೊಳಿಸಲು ಕಾನೂನಿನ ಮೂಲಕವೇ ಸಾಧ್ಯ. ಈ ಕಾನೂನಿನ ಪರಿಮಿತಿಯನ್ನು ಅರಿತು ನಡೆದಾಗ ಪ್ರತಿಯೊಬ್ಬರೂ ಸಹ ಸುಖಿ ಕುಟುಂಬಗಳಾಗುತ್ತಾರೆ. ನಮ್ಮ ಸಮಾಜದಲ್ಲಿ ಇಂದಿಗೂ ಸಹ ಕಾನೂನಿನ ಜ್ಞಾನವಿಲ್ಲದೆ ಬಡತನ ಇನ್ನೂ ನಮ್ಮನ್ನು ಬಿಟ್ಟುಹೋಗಿಲ್ಲ. ನಮ್ಮಲ್ಲಿರುವ ಕಾನೂನು ಬಡತನ ಹಾಗೂ ವಿಫತುಗಳನ್ನು ದೂರಮಾಡಲು ಹೆಚ್ಚು ಸಹಕಾರಿಯಾಗಿದೆ. ಬಡ ಜನತೆಗೆ ಅದರಲ್ಲೂ ಗ್ರಾಮೀಣ ಜನತೆಗೆ ಸರ್ಕಾರ ಎಲ್ಲಾ ಸೌಲಭ್ಯಗಳ ಅನುಷ್ಠಾನಕುರಿತು ಮಾಹಿತಿಯನ್ನು ನೀಡುವ ಹೊಣೆಯನ್ನು ಸಹ ನಮ್ಮ ಕಾನೂನು ಅವಕಾಶ ಮಾಡಿಕೊಟ್ಟಿದೆ ಎಂದರು. ಸಮಾಜದ ಪ್ರತಿಯೊಬ್ಬರೂ ಕಾನೂನಿನ ರಕ್ಷಕರಾಗಬೇಕು ಎಂದರು.

           ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ದೇವೇಂದ್ರಪಂಡಿತ್, ಪ್ರಧಾನ ಸಿವಿಲ್ ನ್ಯಾಯಾಧೀಶ ಕೋಟೆಪ್ಪ ಕಾಂಭ್ಳೆ, ಬಿಇಒ ಸಿ.ಎಸ್.ವೆಂಕಟೇಶ್, ಸಿಡಿಪಿಒ ಸಿ.ಕೆ.ಗಿರಿಜಾಂಬ, ಕಾರ್ಮಿಕ ಇಲಾಖೆ ಇನ್ಸ್‍ಪೆಕ್ಟರ್ ಶಫೀವುಲ್ಲಾ, ಕ್ಷೇತ್ರ ಆರೋಗ್ಯ ಸಹಾಯಾಧಿಕಾರಿ ಎಸ್.ಬಿ.ತಿಪ್ಪೇಸ್ವಾಮಿ, ವಕೀಲರ ಸಂಘದ ಕಾರ್ಯದರ್ಶಿ ಕೆ.ಹನುಮಂತಪ್ಪ ಭಾಗವಹಿಸಿದ್ದರು. ವಕೀಲರಾದ ಮಧುಮತಿ ಸ್ವಾಗತಿಸಿ, ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap