ಬೆಂಗಳೂರು:
ಹೈದರಾಬಾದ್ನಲ್ಲಿ ಅನಾರೋಗ್ಯದಿಂದ ಮೃತಪಟ್ಟ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರ ಅಂತ್ಯ ಸಂಸ್ಕಾರವು ಭಾನುವಾರ ಅವರ ಹುಟ್ಟೂರು ಮಂಗಳೂರು ಬಳಿಯ ವಡ್ಡರ್ಸೆಯಲ್ಲಿ ನಡೆಯಲಿದ್ದು ಅವರ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಮಧುಕರ್ ಶಟ್ಟಿ ಅವರ ಸಾವಿನ ಬಗ್ಗೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸಂಶಯ ವ್ಯಕ್ತಪಡಿಸಿದ್ದಾರೆ.ಶೆಟ್ಟಿ ಅವರ ನಿಧನ ಸ್ವಾಭಾವಿಕವಾಗಿ ನಡೆದಿದೆ ಎನ್ನುವ ಬಗ್ಗೆ ಅಂತ ತನಿಖೆ ಮಾಡಬೇಕಾಗಿದೆ. ಅವರೊಬ್ಬ ಗೌರವಾನ್ವಿತ ಅಧಿಕಾರಿಯಾಗಿದ್ದು ಅವರ ತಂದೆಯೂ ನನಗೆ ಪರಿಚಯವಿದ್ದರು. ಪೊಲೀಸ್ ಇಲಾಖೆಗೆ ಅವರೊಂದು ದೊಡ್ಡ ಆಸ್ತಿ ಆಗಿದ್ದ ಅವರ ಸಾವಿನ ಬಗ್ಗೆ ತನಿಖೆ ನಡೆಸಬೇಕಾಗುತ್ತದೆ ಎಂದಿದ್ದಾರೆ
ರಾಜ್ಯದ ಒಬ್ಬ ಅಧಿಕಾರಿ ಹೊರ ರಾಜ್ಯದಲ್ಲಿ ನಿಧನ ಹೊಂದಿದರೆ ಆ ಬಗ್ಗೆ ತನಿಖೆ ನಡೆಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದಿರುವ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಎಂಬಿ ಪಾಟೀಲ್ ಅವರು ಮಧುಕರ್ ಸಾವಿನಲ್ಲಿ ಸಂಶಯ ಕಂಡುಬಂದರೆ ತನಿಖೆ ನಡೆಸಲು ಸಿದ್ದ ಎಂದು ತಿಳಿಸಿದ್ದಾರೆ
ಈ ನಡುವೆ ಭಾನುವಾರ ವಡ್ಡರ್ಸೆಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಮಧುಕರ್ ಶೆಟ್ಟಿ ಅವರ ಅಂತ್ಯಕ್ರಿಯೆ ನಡೆಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ.ಶುಕ್ರವಾರ ರಾತ್ರಿ ಅಕಾಲಿಕ ನಿಧನರಾದ ಮದುಕರ್ ಅವರ ಪಾರ್ಥಿವ ಶರೀರವನ್ನು ಶನಿವಾರ ಮಧ್ಯಾಹ್ನ ಬೆಂಗಳೂರಿಗೆ ತರಲಾಯಿತು.
ಹೈದರಾಬಾದ್ನಿಂದ ವಿಶೇಷ ವಿಮಾನದ ಮೂಲಕ ಮೃತದೇಹವನ್ನು ಮಧ್ಯಾಹ್ನ 1,15ಕ್ಕೆ ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ತರಲಾಗಿದ್ದು ಅಲ್ಲಿಂದ ಯಲಹಂಕದ ಸಶಸ್ತ್ರ ಪೆÇಲೀಸ್ ತರತಬೇತಿ ಕೇಂದ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು.
ರಾಜ್ಯ ಪೊಲೀಸ್ ಮಹಾನಿರ್ದೇಶಕಿ(ಡಿಜಿ) ನೀಲಮಣಿರಾಜು ಡಿಜಿಪಿಗಳಾದ ಕಿಶೋರ್ ಚಂದ್ರ,ಎಂಎನ್ ರೆಡ್ಡಿ,ಎಎಂ ಪ್ರಸಾದ್ ನಗರ ಪೊಲೀಸ್ ಆಯುಕ್ತ ಸುನೀಲ್ಕುಮಾರ್ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಎಡಿಜಿಪಿ) ಕಮಲ್ಪಂತ್ ಸೇರಿ ಬಹುತೇಕ ಎಡಿಜಿಪಿಗಳು ಐಜಿಗಳು ಎಸ್ಪಿಗಳು ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳು ಮೃತರಿಗೆ ಅಂತಿಮ ನಮನ ಸಲ್ಲಿಸಿದರು.
ನಾಳೆ ಮಧ್ಯಾಹ್ನ ಅವರ ಸ್ವಗ್ರಾಮ ವಡ್ಡರ್ಸೆಯಲ್ಲಿ ಅಂತ್ಯಕ್ರಿಯೆ ನಡೆಸಲು ಸಿದ್ದತೆ ನಡೆಸಲಾಗಿದ್ದು ಗೃಹ ಸಚಿವ ಎಂಬಿ ಪಾಟೀಲ್ ಅವರು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲು ಸೂಚನೆ ನೀಡಿದ್ದಾರೆ.
ಕರ್ನಾಟಕ ಕೇಡರ್ 1999ರ ಸಾಲಿನ ಐಪಿಎಸ್ ಅಧಿಕಾರಿಯಾಗಿದ್ದ ಮಧುಕರಶೆಟ್ಟಿ ಕಳೆದ ವರ್ಷ ಐಜಿ ಹುದ್ದೆಗೆ ಬಡ್ತಿ ಹೊಂದಿದ್ದರು ಹೆಚ್ಚಿನ ವ್ಯಾಸಂಗಕ್ಕೆ ಅನುಮತಿ ಪಡೆದು ವಿದೇಶಕ್ಕೆ ಹೋಗಿದ್ದ ಅವರು ಹೈದರಾಬಾದ್ನ ಪೊಲೀಸ್ ತರಬೇತಿ ಅಕಾಡೆಮಿಯಲ್ಲಿ ಉಪನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಜ್ವರ ನಿರ್ಲಕ್ಷ್ಯ: ಅಕಾಡೆಮಿಯ ವಸತಿಗೃಹದಲ್ಲಿ ಪತ್ನಿ ಮಗಳೊಂದಿಗೆ ವಾಸಿಸುತ್ತಿದ್ದ ಮಧುಕರ್ ಶೆಟ್ಟಿ ಅವರಿಗೆ ಜ್ವರ ಕಾಣಿಸಿಕೊಂಡಾಗ ಮೊದಲು ನಿರ್ಲಕ್ಷ್ಯ ವಹಿಸಿದ್ದು ಅವರ ಜೀವಕ್ಕೆ ಮುಳುವಾಗಿ ಪರಿಣಮಿಸಿತು. ಎರಡು ದಿನಗಳ ನಂತರ ಆಸ್ಪತ್ರೆಗೆ ಕರೆತಂದಾಗ ಅವರಿಗೆ ತೀವ್ರ ಜ್ವರ ಹಾಗೂ ಉಸಿರಾಟದ ಸಮಸ್ಯೆ ಇತ್ತು.
ತಕ್ಷಣ ನಾವು ಅವರನ್ನು ತುರ್ತು ನಿಗಾ ಘಟಕಕ್ಕೆ ಸ್ಥಳಾಂತರಿಸಿ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದ್ದರಿಂದ ವೆಂಟಿಲೇಟರ್ ಅಳವಡಿಸಿ ವೈದ್ಯರ ತಂಡ ಸೂಕ್ತ ಚಿಕಿತ್ಸೆ ನೀಡಿದರೂ ಗುಣಪಡಿಸಲು ಸಾಧ್ಯವಾಗಲಿಲ್ಲ ಎಂದು ಕಾಂಟಿನೆಂಟಲ್ ಹಾಸ್ಪಿಟಲ್ನ ಮುಖ್ಯಸ್ಥ ಡಾ.ಗುರು ಎನ್.ರೆಡ್ಡಿ, ತಿಳಿಸಿದ್ದಾರೆ.
ದಕ್ಷತೆಯ ಹಾದಿ
1999ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿರುವ ಇವರು 2003 ರಿಂದ 2004ರವರೆಗೆ ಚಾಮರಾಜನಗರ ಎಸ್ಪಿಯಾಗಿ ಸೇವೆ ಸಲ್ಲಿಸಿದ್ದಾರೆ. 2011ರಲ್ಲಿ ವಿದ್ಯಾಭ್ಯಾಸದ ರಜೆ ತೆಗೆದುಕೊಂಡ ಬಳಿಕ ತರಬೇತಿ ಮತ್ತು ನೇಮಕಾತಿ ವಿಭಾಗದ ಡಿಐಜಿ ಆಗಿ ಬಡ್ತಿ ಪಡೆದಿದ್ದರು ನಂತರ ಹೈದರಾಬಾದ್ನ ನ್ಯಾಷನಲ್ ಪೆಲೀಸ್ ಅಕಾಡೆಮಿಯಲ್ಲಿ ಉಪನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ಅವರಿಗೆ ಕಳೆದ ವರ್ಷ ಐಜಿ ಹುದ್ದೆಗೆ ಬಡ್ತಿ ನೀಡಲಾಗಿತ್ತು. ಇವರು ದೆಹಲಿಯ ಜೆಎನ್ಯುನಿಂದ ಸಮಾಜಶಾಸ್ತ್ರದಲ್ಲಿ ಎಂ.ಎ ಹಾಗೂ ನ್ಯೂಯಾರ್ಕ್ ನ ಯೂನಿವರ್ಸಿಟಿಯಲ್ಲಿ ಪಿ.ಎಚ್.ಡಿ ಪದವಿ ಪಡೆದಿದ್ದಾರೆ.
ಲೋಕಾಯುಕ್ತದಲ್ಲಿ ಎಸ್ಪಿಯಾಗಿದ್ದಾಗ ಮನೆ ಮಾತಾಗಿದ್ದರು. ಲೋಕಾಯುಕ್ತ ಎಸ್ಪಿಯಾಗಿ ನಿಯೋಜನೆಗೊಂಡ ಎರಡೇ ತಿಂಗಳಿಗೆ ಎರಡು ಜಿಲ್ಲೆಯ ಎಸ್ಪಿಗಳನ್ನು ಟ್ರಾಪ್ ಮಾಡಿ ಲಂಚ ಪಡೆಯುವಾಗ ಜೈಲಿಗೆ ಕಳಹಿಸಿದ್ದರು. ಲೋಕಾಯುಕ್ತದಲ್ಲಿ ಆದ ಕೆಲವು ಬೆಳವಣಿಗೆಗಳಿಂದ ಬೇಸತ್ತ ಮಧುಕರ್ ಶೆಟ್ಟಿ, ಅಮೆರಿಕಕ್ಕೆ ತೆರಳಿ ನಾಲ್ಕು ವರ್ಷಗಳ ಕಾಲ ವಿದ್ಯಾಭ್ಯಾಸ ಮಾಡಿ ಕರ್ನಾಟಕಕ್ಕೆ ವಾಪಸ್ಸು ಬಂದಿದ್ದರು.
ಡಿಐಜಿಯಾದ ಮಧುಕರ್ ಶೆಟ್ಟಿಗೆ ಸರ್ಕಾರ ಸರಿಯಾದ ಸ್ಥಾನ ಮಾನ ನೀಡಿರಲಿಲ್ಲ. ಇದರಿಂದ ಬೇಸತ್ತು ಮತ್ತೆ ಕೇಂದ್ರ ಸರ್ಕಾರದ ಅಡಿಯಲ್ಲಿ ಕೆಲಸಕ್ಕೆ ತೆರಳಿದ್ದರು. ಕರ್ನಾಟಕದಿಂದ ಕೇಂದ್ರ ಸೇವೆಗೆ ಮರಳಿದ್ದ ಅವರನ್ನ ಸರ್ದಾರ್ ವಲ್ಲಭಾಯ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಉಪ ನಿರ್ದೇಶಕರಾಗಿ ನಿಯೋಜನೆಗೊಂಡಿದ್ದರು.
ಚಾಮರಾಜನಗರ ಜಿಲ್ಲೆಯಲ್ಲಿ ಎಸ್ಪಿಯಾಗಿದ್ದಾಗ ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸಿ ಪೊಲೀಸರಿಗೆ ಬಿಸಿ ಮುಟ್ಟಿಸುತ್ತಿದ್ದರು. ಒಟ್ಟಿನಲ್ಲಿ ಲೋಕಾಯುಕ್ತಕ್ಕೆ ಹೊಸ ಖದರ್ ತಂದುಕೊಟ್ಟ ನೇರ ನಡೆ ನುಡಿಯ ನಿಷ್ಠುರ ಅಧಿಕಾರಿಯಾಗಿದ್ದ ಮಧುಕರ್, ಲೋಕಾಯುಕ್ತದಲ್ಲೂ ಭ್ರಷ್ಟಾಚಾರ ಇದೆ ಎಂದು ಹೇಳಿ ಬಿರುಗಾಳಿ ಎಬ್ಬಿಸಿದ್ದ ಸಿಂಗಂ ಆಗಿದ್ದರು. ಇಷ್ಟು ಮಾತ್ರವಲ್ಲದೇ ವೀರಪ್ಪನ್ ಸೆರೆಗಾಗಿ ರಚನೆಗೊಂಡಿದ್ದ ವಿಶೇಷ ಕಾರ್ಯಪಡೆಯಲ್ಲಿಯೂ ಸೇವೆ ಸಲ್ಲಿಸಿದ ಕೀರ್ತಿ ಇವರದ್ದಾಗಿದೆ.
ಗುಪ್ತಶೆಟ್ಟಿ ಹಳ್ಳಿ
ಉಡುಪಿ ಜಿಲ್ಲೆ ಮೂಲದವರಾದ ಮಧುಕರ್ ಶೆಟ್ಟಿ ಚಿಕ್ಕಮಗಳೂರಿನಿಂದ ವೃತ್ತಿ ಪ್ರಾರಂಭಿಸಿದ್ದ ಇವರ ಕಾರ್ಯಕ್ಕೆ ಮೂಡಿಗೆರೆಯ ಆಲ್ದೂರಿನ ಜನ ಆ ಊರಿಗೆ ಇಟ್ಟ ಹೆಸರು ಡಿಸಿ ಹಾಗೂ ಎಸ್ಪಿಯದು. 2006ರಲ್ಲಿ ಆಗಿನ ಜಿಲ್ಲಾಧಿಕಾರಿಯಾಗಿದ್ದ ಹರ್ಷಗುಪ್ತ ಅವರೊಡನೆ ಸೇರಿ ಒತ್ತುವರಿಯಾಗಿದ್ದ ಜಮೀನನ್ನು ಬಿಡಿಸಿ ದಲಿತರಿಗೆ ಕೊಟ್ಟಿದ್ದರು. ಹಾಗಾಗಿ ಜನ ಡಿಸಿ ಹರ್ಷ ಗುಪ್ತಾ,ಎಸ್ಪಿ ಮಧುಕರ್ ಶೆಟ್ಟಿ ಹೆಸರನ್ನ ಸೇರಿಸಿ ಆ ಹಳ್ಳಿಗೆ ಗುಪ್ತಶೆಟ್ಟಿ ಹಳ್ಳಿ ಎನ್ನುವ ಹೆಸರಿಟ್ಟುಕೊಂಡಿದ್ದು ಶೆಟ್ಟಿ ನಿಧನದಿಂದ ಆ ಗ್ರಾಮದಲ್ಲಿ ಸೂತಕದ ಕಳೆ ಆವರಿಸಿ ಮೌನ ಮನೆಮಾಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ