ನವದೆಹಲಿ:
1984 ರ ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿರುವ ಕಾಂಗ್ರೆಸ್ ಮುಖಂಡ ಸಜ್ಜನ್ ಕುಮಾರ್ ಸೋಮವಾರ ಕಾರ್ಕಾಡೂಮಾ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.
ಸಜ್ಜನ್ ಕುಮಾರ್ ರವರ ಜೊತೆ ಮಾಜಿ ಶಾಸಕರಾದ ಕಿಶಾನ್ ಖೋಖರ್ ಮತ್ತು ಮಹೇಂದರ್ ಯಾದವ್ ಕೂಡಾ ಶರಣಾಗಿದ್ದಾರೆ. ಇವರಿಗೆ ದೆಹಲಿ ನ್ಯಾಯಾಲಯ 10 ವರ್ಷ ಸೆರೆವಾಸ ಶಿಕ್ಷೆ ವಿಧಿಸಿದೆ.
1984ರ ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಸಜ್ಜನ್ ಕುಮಾರ್ ಅವರನ್ನು ವಿಚಾರಣಾಧೀನ ಕೋರ್ಟ್ ಖುಲಾಸೆಗೊಳಿಸಿ ನೀಡಿದ್ದ ತೀರ್ಪನ್ನು ದೆಹಲಿ ಹೈಕೋರ್ಟ್ ರದ್ದು ಮಾಡಿ ಜೀವಾವಧಿ ಶಿಕ್ಷೆ ಹಾಗೂ 5 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿತ್ತು.
ಆದರೆ ಸಜ್ಜನ್ ಅವರು ಶರಣಾಗಲು ನೀಡಿರುವ ಅವಧಿಯನ್ನು 2019ರ ಜನವರಿ 31ರವರೆಗೆ ವಿಸ್ತರಿಸಬೇಕು ಎಂದು ಮನವಿ ಮಾಡಿದ್ದರು. ಈ ಅರ್ಜಿಯನ್ನು ತಿರಸ್ಕರಿಸಿದ ದೆಹಲಿ ಹೈಕೋರ್ಟ್ ಡಿಸೆಂಬರ್ 17ರಂದು ಜೀವಾವಧಿ ಶಿಕ್ಷೆ ವಿಧಿಸಿತ್ತು. ಜೊತೆಗೆ ಡಿಸೆಂಬರ್ 31ರೊಳಗೆ ಶರಣಾಗುವಂತೆ ಸಜ್ಜನ್ ಅವರಿಗೆ ನ್ಯಾಯಾಲಯ ಸೂಚಿಸಿತ್ತು.
ಸಜ್ಜನ್ ಅವರನ್ನು ಕೋರ್ಟ್ ಮಾಂಡೋಲಿ ಜೈಲಿಗೆ ಕಳುಹಿಸುವಂತೆ ಆದೇಶಿಸಿದೆ. ಅಷ್ಟೇ ಅಲ್ಲ ಭದ್ರತೆಯ ದೃಷ್ಟಿಯಿಂದ ಪ್ರತ್ಯೇಕ ವಾಹನದಲ್ಲಿ ಅವರನ್ನು ಕರೆದೊಯ್ಯುವಂತೆ ಸೂಚನೆ ನೀಡಿರುವುದಾಗಿ ಸಜ್ಜನ್ ಪರ ವಕೀಲರು ಮಾಧ್ಯಮದವರಿಗೆ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ