ಸರ್ಕಾರಿ ಆಸ್ತಿಗಳ ಲೆಕ್ಕ ಪರಿಶೋಧನೆ : ಪರಮೇಶ್ವರ್

ಬೆಂಗಳೂರು

           ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಸರ್ಕಾರಿ ಆಸ್ತಿಗಳ ಲೆಕ್ಕ ಪರಿಶೋಧನೆ ಮಾಡಿಸಲು ಸರ್ಕಾರ ಮುಂದಾಗಿದೆ.

           ಆರಂಭಿಕ ಹಂತದಲ್ಲಿ ಬೆಂಗಳೂರು ಮಹಾನಗರ ಪಾಲಿಕೆ,ಬಿಡಿಎ ಸೇರಿದಂತೆ ಪ್ರಮುಖ ಸಂಸ್ಥೆಗಳ ಆಸ್ತಿ ಪರಿಶೋಧನೆ ನಡೆಸುತ್ತೇವೆ.ಆ ಮೂಲಕ ಸರ್ಕಾರದ ಆಸ್ತಿಗಳ ನಿಜವಾದ ವಿವರವನ್ನು ಪಡೆಯುತ್ತೇವೆ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಹೇಳಿದರು.

           ಇಂದಿಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜತೆ ಮಾತನಾಡಿದ ಅವರು,ಇವತ್ತು ಬಿಡಿಎ ವಶದಲ್ಲಿರುವ ನಿಜವಾದ ಆಸ್ತಿ ವಿವರ ಸರ್ಕಾರದ ಬಳಿ ಇಲ್ಲ.ಹಾಗೆಯೇ ಬಿಬಿಎಂಪಿ ವ್ಯಾಪ್ತಿಯ ಆಸ್ತಿ ವಿವರಗಳು ಸರ್ಕಾರದ ಬಳಿ ಇಲ್ಲ.

           ಈ ವಿವರ ಸಂಬಂಧಪಟ್ಟ ಪ್ರದೇಶಗಳ ಇಂಜಿನಿಯರುಗಳ ಬಳಿ,ಉನ್ನತಾಧಿಕಾರಿಗಳ ಬಳಿ ಮಾತ್ರವೇ ಇರುತ್ತದೆ.ಇದ್ಯಾವುದೂ ಸರ್ಕಾರಿ ದಾಖಲೆಗಳಲ್ಲಿ ಇಲ್ಲದಿರುವುದರಿಂದ ದುರುಪಯೋಗ ಮಾಡಿಕೊಳ್ಳುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ.

          ಬೆಂಗಳೂರಿನ ಕೃಷ್ಣ ರಾಜೇಂದ್ರ ಮಾರುಕಟ್ಟೆಯಲ್ಲಿ ಒಂದು ಭಾಗದಲ್ಲಿ ಬಿಬಿಎಂಪಿಗೆ ಸೇರಿದ ಹಲ ಕಟ್ಟಡಗಳಿವೆ.ಈ ಕಟ್ಟಡಗಳಲ್ಲಿ ವಾಸವಿರುವವರು ಯಾರು?ಇದು ಯಾರ ಆಸ್ತಿ?ಎಂಬ ಕುರಿತು ಸರ್ಕಾರದ ಬಳಿ ವಿವರವೇ ಇಲ್ಲ.ನಾನೇ ಒಂದು ಬಾರಿ ಇಂತಹ ಕಟ್ಟಡವೊಂದಕ್ಕೆ ಭೇಟಿ ನೀಡಿ ವಿವರ ಪಡೆದೆ ಎಂದರು.

         ಆ ಕಟ್ಟಡವನ್ನು ಮಾಸಿಕ ಇನ್ನೂರು ರೂ ಬಾಡಿಗೆ ಆಧಾರದ ಮೇಲೆ ಬಿಬಿಎಂಪಿಯವರು ಖಾಸಗಿಯವರಿಗೆ ನೀಡಿದ್ದರು.ಇವತ್ತು ಮಾರುಕಟ್ಟೆಯಲ್ಲಿ ಅದರ ಬಾಡಿಗೆ ಮೌಲ್ಯ ಇಪ್ಪತ್ತು ಸಾವಿರ ರೂಪಾಯಿಗಳಿಗಿಂತ ಹೆಚ್ಚಿದೆ ಎಂದು ವಿವರಿಸಿದರು.

         ಹೀಗೆ ಸರ್ಕಾರದ ಆಸ್ತಿಯ ವಿವರ ಸರ್ಕಾರದ ಬಳಿಯೇ ಇಲ್ಲದಿರುವುದು ಆಘಾತಕಾರಿ ವಿಷಯ.ಹೀಗಾಗಿ ಮೊದಲು ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಸರ್ಕಾರಿ ಆಸ್ತಿಗಳ ಲೆಕ್ಕ ಪರಿಶೋಧನೆ ನಡೆಸುವುದಾಗಿ ಹೇಳಿದರು.

         ಈ ಮುಂಚೆ ತೊಂಭತ್ತೊಂಭತ್ತು ವರ್ಷಗಳ ಕಾಲ ಗುತ್ತಿಗೆ ಆಧಾರದ ಮೇಲೆ ಆಸ್ತಿಯನ್ನು ಒದಗಿಸುವ ಕೆಲಸ ನಡೆಯುತ್ತಿತ್ತು.ಆದರೆ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾದ ನಂತರ ಅದು ನಿಂತಿದೆ.ಆದರೆ ಈ ಮೂವತ್ತು ವರ್ಷಗಳ ಗುತ್ತಿಗೆ ಅವಧಿಯನ್ನು ನವೀಕರಿಸುವಾಗ ಪ್ರಸ್ತುತ ಮಾರುಕಟ್ಟೆ ಮೌಲ್ಯವನ್ನು ಗಮನದಲ್ಲಿಟ್ಟುಕೊಳ್ಳಲಾಗುತ್ತದೆ.

         ಇದೇ ರೀತಿ ಸರ್ಕಾರಿ ಆಸ್ತಿಗಳ ವಿಷಯದಲ್ಲಿ ಒಂದು ಬಿಗಿ ಸಾಧಿಸದೆ ಹೋದರೆ ಕಷ್ಟವಾಗುತ್ತದೆ.ಹೀಗಾಗಿ ನಿಧಾನವಾದರೂ ಆಸ್ತಿ ಪರಿಶೋಧನೆಯ ಮೂಲಕ ಎಲ್ಲ ವಿವರಗಳು ದಾಖಲೆಗಳಲ್ಲಿ ಉಳಿಯುವಂತೆ ಮಾಡಿದರೆ ಭವಿಷ್ಯದಲ್ಲಿ ಆಗುವ ಸಮಸ್ಯೆಗಳು ತಪ್ಪುತ್ತವೆ ಎಂದು ಹೇಳಿದರು.

         ಈ ಮಧ್ಯೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಮುಂಚೆ ನಲವತ್ತು ಸಾವಿರ ಪೌರ ಕಾರ್ಮಿಕರು ಇದ್ದಾರೆ ಎಂಧು ಲೆಕ್ಕ ಕೊಡಲಾಗುತ್ತಿತ್ತು.ಆದರೆ ಬಯೋ ಮೆಟ್ರಿಕ್ ವ್ಯವಸ್ಥೆ ಜಾರಿಗೆ ಬಂದ ಮೇಲೆ ಅದು ಹದಿನಾರು ಸಾವಿರಕ್ಕಿಳಿದಿದೆ ಎಂಬ ಅಚ್ಚರಿಯ ಅಂಶವನ್ನು ಅವರು ಬಹಿರಂಗಪಡಿಸಿದರು.

           ತಮಗೆ ಗೃಹ ಖಾತೆ ಸಚಿವ ಸ್ಥಾನ ತಪ್ಪಲು ಯಾರೂ ಕಾರಣರಲ್ಲ,ಅದು ಸಮ್ಮಿಶ್ರ ಸರ್ಕಾರ ರಚನೆಯಾಗುವಾಗ ಕಾಂಗ್ರೆಸ್ ಪಾಲಿಗೆ ಬಂದ ಖಾತೆ.ಅದನ್ನು ನನ್ನಿಂದ ಬೇರೆಯವರಿಗೆ ಕೊಡಲು ಹೈಕಮಾಂಡ್ ಬಯಸಿತು.ನಾನದನ್ನು ಮನಪೂರ್ವಕವಾಗಿ ಒಪ್ಪಿಕೊಂಡಿದ್ದೇನೆ ಎಂದರು.

           ಈಗ ನನಗೆ ನೀಡಿರುವ ಖಾತೆಗಳನ್ನು ನಿರ್ವಹಿಸುತ್ತೇನೆ ಎಂದ ಅವರು,ತಮಗೆ ಇತ್ತೀಚಿನ ಬೆಳವಣಿಗೆಗಳಿಂದ ಯಾವ ಅಸಮಾಧಾನವೂ ಆಗಿಲ್ಲ.ಪಕ್ಷ ಏನು ಹೇಳುತ್ತದೋ?ಅದನ್ನು ನಿರ್ವಹಿಸುವುದಷ್ಟೇ ನನ್ನ ಕೆಲಸ ಎಂದು ಹೇಳಿದರು.

          ಆಪರೇಷನ್ ಕಮಲ ಕಾರ್ಯಾಚರಣೆಗೆ ಮುಂದಾಗಿರುವ ಬಿಜೆಪಿ ಕೈ ಪಾಳೆಯದ ಶಾಸಕರಿಗೆ ತಲಾ ಮೂವತ್ತು ಕೋಟಿ ರೂಪಾಯಿ ಆಮಿಷವೊಡ್ಡಿದೆ ಎಂದು ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯ ಹೇಳಿರುವ ಕುರಿತು ಪ್ರತಿಕ್ರಿಯಿಸಿದ ಅವರು,ಈ ಕುರಿತು ಅವರನ್ನೇ ಕೇಳಬೇಕು.ಯಾಕೆಂದರೆ ಅದನ್ನು ಹೇಳಿರುವವರು ಅವರು.ನೀವು ನನ್ನ ಬಳಿ ಕೇಳಿದರೆ ಏನು ಹೇಳಲು ಸಾಧ್ಯ?ಎಂದು ಮರು ಪ್ರಶ್ನಿಸಿದರು.

         ಸರ್ಕಾರ ರಚನೆಯ ಸಂದರ್ಭದಲ್ಲಿ ಯಾವ ಪಕ್ಷಕ್ಕೆ ಎಷ್ಟು ಅಧಿಕಾರ ಸ್ಥಾನಗಳನ್ನು ನೀಡಬೇಕು?ಎಂಬ ಬಗ್ಗೆ ಚರ್ಚೆಯಾಗಿರಲಿಲ್ಲವೇ?ಹಾಗಿದ್ದ ಮೇಲೆ ಗೊಂದಲವೇಕೆ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,ಯಾವ ಗೊಂದಲವೂ ಇಲ್ಲ.ಇದ್ದರೆ ಪರಿಹರಿಸಿಕೊಂಡು ಹೋಗುತ್ತೇವೆ ಎಂದು ಹೇಳಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ