ಹುಳಿಯಾರು
ಹೊಸ ವರ್ಷಾಚರಣೆಯಲ್ಲಿ ಇಡೀ ವರ್ಷ ಮಾಡಬೇಕಾದ ಕೆಲಸ-ಕಾರ್ಯಗಳ ಪ್ಲಾನ್ ಮಾಡಿ ಸ್ಪಷ್ಟ ಗುರಿಯ ಸಂಕಲ್ಪ ಮಾಡದಿದ್ದರೆ ವರ್ಷಾಚರಣೆಯೂ ವ್ಯರ್ಥ, ಇಡೀ ವರ್ಷವೂ ವ್ಯರ್ಥ ಎಂದು ಸಾಹಿತಿ ಹಾಗೂ ಪ್ರಾಚಾರ್ಯ ಬಿಳಿಗೆರೆ ಕೃಷ್ಣಮೂರ್ತಿ ತಿಳಿಸಿದರು.
ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ 2019 ನೇ ಸಾಲಿನ ಹೊಸ ವರ್ಷಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹೊಸ ವರ್ಷಾಚರಣೆ ಮಾಡುವಾಗ ಈ ವರ್ಷದಲ್ಲಿ ನಾನೇನು ಮಾಡಬೇಕು, ಮಾಡಬಾರದು ಎಂಬುದನ್ನು ನಿರ್ಧರಿಸಿ ಸಂಕಲ್ಪ ಮಾಡಿದರೆ ಇಡೀ ವರ್ಷವನ್ನು ಗುರಿ ಸಾಧನೆಯ ವರ್ಷವಾಗಿ ಮಾರ್ಪಡಿಸಿಕೊಳ್ಳಬಹುದು. ಅಲ್ಲದೆ ನಿತ್ಯ ನಮ್ಮ ಖಾತೆಗೆ ಜಮೆಯಾಗುವ 24 ಗಂಟೆಯನ್ನು ವ್ಯರ್ಥ ಮಾಡದೆ ಸದ್ಬಳಕೆ ಮಾಡಿಕೊಳ್ಳಬಹುದು. ಆದರೆ ಕೇಕು ತಿನ್ನುವುದಕ್ಕೆ, ಡ್ಯಾನ್ಸ್ ಆಡುವುದಕ್ಕೆ, ಮದ್ಯಪಾನ ಮಾಡುವುದಕ್ಕೆ ಹೊಸ ವರ್ಷಾಚರಣೆ ಮೀಸಲಾಗಿರುವುದು ವಿಷಾದಕರ ಎಂದರು.
ಈ ವರ್ಷ ನಾನು ನನ್ನ ಕವನಗಳನ್ನು, ಕೃಷಿ ಲೇಖನಗಳನ್ನು ಮತ್ತಷ್ಟು ಜನಸನಿಹಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರಲು ನಿರ್ಧರಿಸಿದ್ದೇನೆ. ಅಲ್ಲದೆ ವಿದ್ಯಾರ್ಥಿಗಳನ್ನು ಪುನಃ ಕೃಷಿಯೆಡೆಗೆ ಕರೆತರುವ ನಿಟ್ಟಿನಲ್ಲಿ ಪಠ್ಯದ ಜೊತೆ ಕೃಷಿಯ ಲಾಭಗಳು, ಕೃಷಿ ಸಾಧಕರ ಪರಿಚಯ ಹಾಗೂ ಕೃಷಿಯಿಂದಾಗುವ ವೈಯಕ್ತಿಕ ಆರೋಗ್ಯ ಮತ್ತು ಆರ್ಥಿಕ ನೆರವಿನ ಬಗ್ಗೆ ತಿಳಿಸುವ ಸಂಕಲ್ಪ ಮಾಡಿರುವುದಾಗಿ ಹೇಳಿದರು.
ಉಪನ್ಯಾಸಕ ಮಲ್ಲಿಕಾರ್ಜುನ್, ರೇಣುಕಮ್ಮ, ವಿನುತಾ, ಫರ್ರ್ನಾಸ್, ಲಾವಣ್ಯ, ಚಂದ್ರಮೌಳಿ, ದೈಹಿಕ ಶಿಕ್ಷಣ ನಿರ್ದೇಶಕರಾದ ಆರ್.ಶಿವಯ್ಯ, ಹಿಮಂತರಾಜ್, ರಘು, ಮೋಹನ್ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ