ಬೆಂಗಳೂರು
ಬೈಕ್ ಕಳವು ಮಾಡಿ ನಕಲಿ ದಾಖಲೆಗಳನ್ನು ಸೃಷ್ಠಿಸಿ ಆಂಧ್ರಪ್ರದೇಶದಲ್ಲಿ ಮಾರಾಟ ಮಾಡಿ ಮೋಜು ಮಾಡುತ್ತಿದ್ದ ಇಬ್ಬರು ಅಂತಾರಾಜ್ಯ ಕಳ್ಳರನ್ನು ಬಂಧಿಸಿರುವ ಯಶವಂತಪುರ ಪೊಲೀಸರು 25 ಲಕ್ಷ ರೂ. ಮೌಲ್ಯದ 20 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಆರ್.ಟಿ. ನಗರದ ಅಬ್ದುಲ್ ವಾಹಿದ್ ಅಲಿಯಾಸ್ ಅಬ್ದುಲ್ (21), ಯಶವಂತಪುರದ ಅಬ್ರಾರ್ (21) ಬಂಧಿತ ಆರೋಪಿಗಳಾಗಿದ್ದಾರೆ. ಆಂಧ್ರಪ್ರದೇಶದ ಪುಂಗನೂರು ಮೂಲದ ಬಂಧಿತ ಆರೋಪಿಗಳಿಂದ 25 ಲಕ್ಷ ರೂ. ಮೌಲ್ಯದ ಮೂರು ಬುಲೆಟ್ ಬೈಕ್ಗಳು ಸೇರಿ 20 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ
ಆರೋಪಿಗಳ ಬಂಧನದಿಂದ ಯಶವಂತಪುರದ ಒಂದು ಸರಗಳವು, 16 ದ್ವಿಚಕ್ರ ವಾಹನ ಕಳವು, ಆರ್.ಟಿ. ನಗರದ 2, ಜಾಲಹಳ್ಳಿಯ 1 ದ್ವಿಚಕ್ರ ವಾಹನ ಕಳವು ಸೇರಿದಂತೆ, 20 ಕಳವು ಪ್ರಕರಣಗಳು ಪತ್ತೆಯಾಗಿವೆ. ಕಳೆದ ಒಂದು ವರ್ಷದಿಂದ ಕಳ್ಳತನ ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪಿಗಳು ಪೊಲೀಸರಿಗೆ ಕಣ್ತಪ್ಪಿಸಿ ಓಡಾಡುತ್ತಿರುವುದು ತನಿಖೆಯಲ್ಲಿ ಕಂಡುಬಂದಿದೆ.
ಸರಕದ್ದು ಸಿಕ್ಕಿಬಿದ್ದರು.
ಯಶವಂತಪುರದ ಮನೆಯ ಮುಂಭಾಗ ನಿಂತಿದ್ದ ಗೀತಾ ಎಂಬುವವರ ಮಾಂಗಲ್ಯ ಸರವನ್ನು ಮತ್ತಿಕೆರೆಯಿಂದ ಬಂದ ಇಬ್ಬರು ದುಷ್ಕರ್ಮಿಗಳು ಕಸಿದು ಪರಾರಿಯಾಗಿದ್ದ ಪ್ರಕರಣವನ್ನು ದಾಖಲಿಸಿಕೊಂಡ ಪೆಲೀಸರು ತನಿಖೆ ಕೈಗೊಂಡಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ ಎಂದು ಡಿಸಿಪಿ ಚೇತನ್ ಸಿಂಗ್ ರಾಥೋರ್ ತಿಳಿಸಿದ್ದಾರೆ.
ಡಿಪ್ಲೊಮೊ ಪದವೀಧರನಾಗಿದ್ದ ಅಬ್ದುಲ್ ವಾಹಿದ್ ಹಾಗೂ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅಬ್ರಾರ್, ಯಶವಂತಪುರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಕಳವು ಮಾಡಿದ್ದ ಬೈಕ್ಗಳನ್ನು ಆಂಧ್ರಪ್ರದೇಶಕ್ಕೆ ಕೊಂಡೊಂಯ್ದು, ನಕಲಿ ದಾಖಲೆಗಳನ್ನು ಸೃಷ್ಟಿಸಿ, ಮಾರಾಟ ಮಾಡಿ ಮೋಜು ಮಾಡುತ್ತಿರುವುದು ಪತ್ತೆಯಾಗಿದೆ. ಆರೋಪಿಗಳನ್ನು ಯಶವಂತಪುರ ಪೆಲೀಸ್ ಇನ್ಸ್ಪೆಕ್ಟರ್ ಮುದ್ದುರಾಜು, ಮತ್ತವರ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








