ಬೆಂಗಳೂರು
ಪತ್ರಕರ್ತೆ ಗೌರಿಲಂಕೇಶ್, ಸಾಹಿತಿ ಎಂ.ಎಂ.ಕಲ್ಬುರ್ಗಿ ಹತ್ಯೆ ಪ್ರಕರಣದ ತನಿಖೆಯನ್ನು ಪೊಲೀಸ್ ಅಧಿಕಾರಿಗಳು ಸಮರ್ಪಕವಾಗಿ ನಿರ್ವಹಿಸಿದ್ದು, ಎರಡೂ ಪ್ರಕರಣಗಳು ಶೀಘ್ರದಲ್ಲಿ ತಾರ್ಕಿಕ ಅಂತ್ಯಕಾಣಲಿವೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಎಂ.ಬಿ.ಪಾಟೀಲ್ ಗೃಹಸಚಿವರಾದ ಬಳಿಕ ವಿಧಾನಸೌಧದಲ್ಲಿಂದು ಮೊದಲ ಬಾರಿಗೆ ಇಲಾಖಾ ಪರಿಶೀಲನಾ ಸಭೆ ನಡೆಸಿದರು. ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಸಭೆಯಲ್ಲಿ ಇಲಾಖೆಯಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ಕಲೆಹಾಕಲಾಗಿದೆ. ಅಪರಾಧ ಹತೋಟಿ, ಡ್ರಗ್ಸ್ ಮಾಫಿಯಾ ತಡೆ, ಸಂಚಾರ ನಿಯಂತ್ರಣ, ಪೆಲೀಸರಿಗೆ ವಸತಿ ಸೌಲಭ್ಯ ಕಲ್ಪಿಸಿಕೊಡುವ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗಿದ್ದು, ಪೆಲೀಸ್ ಇಲಾಖೆಯಲ್ಲಿ ಕೆಲ ಬದಲಾವಣೆಗಳು ಆಗಬೇಕಿದೆ ಎಂದರು.
ಇಲಾಖೆಗೆ ಸಂಬಂಧಿಸಿದ ಕೆಲ ಯೋಜನೆಗಳು ಹಣಕಾಸು ಇಲಾಖೆಯಲ್ಲಿ ಹಾಗೆಯೇ ಉಳಿದಿವೆ. 113 ಅಕ್ರಮ ವಲಸೆಗಾರರನ್ನು ಗುರುತಿಸಲಾಗಿದ್ದು, ಅಕ್ರಮ ವಲಸೆ ಬಗ್ಗೆ ನಿಗಾವಹಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು. ಅಪರಾಧಿಗಳಿಗೆ ಯಾವುದೇ ಕೋಮಿನ ಬಣ್ಣ ಕಟ್ಟಬಾರದು. ಅಪರಾಧಿಗಳನ್ನು ಅಪರಾಧಿಗಳನ್ನಾಗಿಯೇ ನೋಡಬೇಕು ಎಂದು ಎಂ.ಬಿ.ಪಾಟೀಲ್ ತಿಳಿಸಿದರು.
ಉಕ್ಕಿನ ಸೇತುವೆಗೆ ಮರುಜೀವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ಬಗ್ಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರು ಹೇಳಿಕೆ ನೀಡಿದ್ದು, ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿಗಳು ಉಕ್ಕು ಸೇತುವೆ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
