ಬೆಂಗಳೂರು
ಲೋಕಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ, ಚುನಾವಣಾ ಕಾರ್ಯತಂತ್ರ ಮತ್ತು ಸಿದ್ಧತೆಗಳ ಬಗ್ಗೆ ಗುರವಾರದಂದು ಮಹತ್ವದ ಸಭೆ ನಡೆಸಲಿದ್ದಾರೆ.
ಸಂಘಟನೆ ಮೂಲಕ ಪಕ್ಷಕ್ಕೆ ಹೊಸರೂಪ ಕೊಡಲು ಗೌಡರು ಕಾರ್ಯಪ್ರವೃತ್ತರಾಗಿದ್ದು, ಜೆ.ಪಿ.ಭವನದಲ್ಲಿ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.
ಕಾಂಗ್ರೆಸ್ ಜೊತೆ ಸರ್ಕಾರದ ಭಾಗವಾಗಿದ್ದರೂ ಜೆಡಿಎಸ್ ಪಕ್ಷಕ್ಕೆ ತಳಮಟ್ಟದಲ್ಲಿನ್ನೂ ಬೇರೂರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕಾಂಗ್ರೆಸ್ ಜತೆ ಮೈತ್ರಿ ಇರಲಿ ಬಿಡಲಿ ಪಕ್ಷಕ್ಕೆ ಸ್ವಂತ ಬಲ ನೀಡಬೇಕು ಎನ್ನುವ ನಿಲುವಿಗೆ ಬಂದಿದ್ದು, ಈ ಬಗ್ಗೆ ನಾಯಕರಿಗೆ ಸೂಕ್ತ ಸಂದೇಶ ರವಾನಿಸಲಿದ್ದಾರೆ.
ದೇವೇಗೌಡರ ನೇತೃತ್ವದಲ್ಲಿನ ಸಭೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಭಾಗವಹಿಸಲಿದ್ದಾರೆ.ಈಗಾಗಲೇ ಲೋಕಸಭಾ ಚುನಾವಣೆಯಲ್ಲಿ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಬಿಟ್ಟುಕೊಡಬೇಕೆಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ದೇವೇಗೌಡರು ಬೇಡಿಕೆ ಇಟ್ಟಿದ್ದಾರೆ.
ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕೆಂಬ ಉದ್ದೇಶದಿಂದ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಮಾಡಿಕೊಂಡಿವೆ. ರಾಷ್ಟ್ರಮಟ್ಟದಲ್ಲಿ ಬಿಜೆಪಿಯೇತರ ಪಕ್ಷಗಳೆಲ್ಲ ಒಟ್ಟಾಗಿ ಮಹಾಮೈತ್ರಿಕೂಟ ರಚನೆ ಮಾಡಿಕೊಳ್ಳಲು ಯೋಜನೆ ರೂಪಿಸಿದ್ದು, ಇದರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಮುಖವಾಗಿದೆ. ಹೀಗಾಗಿ ಲೋಕಸಭಾ ಚುನಾವಣೆಗೆ ಜೆಡಿಎಸ್ ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆಲ್ಲಲು ತಂತ್ರರೂಪಿಸಲಿದೆ.
ಇದಕ್ಕೆ ಪಕ್ಷ ಸಂಘಟನೆ ಅತಿಮುಖ್ಯವಾಗಿದ್ದು, ಪಕ್ಷದ ನೆಲೆಯನ್ನು ಗಟ್ಟಿಮಾಡಿಕೊಳ್ಳಲು ಮುಂದಾಗಿದೆ.ದೇವೇಗೌಡರು ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ಬಳಿ ಷರತ್ತುಗಳನ್ನು ಮುಂದಿಟ್ಟಿದ್ದು, ಕಾಂಗ್ರೆಸ್ ತನ್ನ ನಿಲುವನ್ನು ಇನ್ನೂ ಬಹಿರಂಗಪಡಿಸಿಲ್ಲ. ಈ ಬಗ್ಗೆ ಗುರುವಾರದ ಸಭೆಯಲ್ಲಿ ಚರ್ಚೆಯಾಗಲಿದೆ. ಪಕ್ಷಕ್ಕೆ ನೂತನ ಸಾರಥಿಯಾಗಿ ಶಾಸಕ ಹೆಚ್.ವಿಶ್ವನಾಥ್ ಅವರ ನೇಮಕವಾಗಿದ್ದರೂ ಅವರು ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿಲ್ಲ.
ಅನಾರೋಗ್ಯ ಕಾರಣ ಜವಾಬ್ದಾರಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಿದ್ದಾರೆ. ಜತೆಗೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಲು ವಿಶ್ವನಾಥ್, ಮುಂದಾಗಿದ್ದು, ಈ ವಿಷಯ ಸಹ ಸಭೆಯಲ್ಲಿ ಚರ್ಚೆಯಾಗಲಿದೆ. ಒಟ್ಟಾರೆ ಲೋಕಸಭೆ ಚುನಾವಣೆಗೆ ಪೂರ್ವಭಾವಿ ಸಭೆಯಲ್ಲಿ ಜೆಡಿಎಸ್ ತಂತ್ರಗಳು ಸಿದ್ಧಗೊಳ್ಳಲಿದ್ದು, ಗುರುವಾರದ ಸಭೆ ಕುತೂಹಲ ಮೂಡಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ