ಬೆಂಗಳೂರು
ರಾಜ್ಯದ ಮೈತ್ರಿ ಸರ್ಕಾರದ 2019-20 ನೇ ಸಾಲಿನ ಮುಂಗಡ ಪತ್ರವನ್ನು ಫೆ. 8 ರಂದು ಮಂಡಿಸುವುದಾಗಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪ್ರಕಟಿಸಿದರು. ಜೆಡಿಎಸ್ ಕಚೇರಿಯಲ್ಲಿ ನಡೆದ ಸ್ಥಳೀಯ ಸಂಸ್ಥೆಗಳು ಹಾಗೂ ಲೋಕಸಭಾ ಚುನಾವಣಾ ಪೂರ್ವಭಾವಿ ಪ್ರಮುಖರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಲೋಕೋಪಯೋಗಿ ಸಚಿವ ಹೆಚ್ ಡಿ ರೇವಣ್ಣ ಅವರು ಬಜೆಟ್ ಮಂಡನೆಗೆ ಮಹೂರ್ತಯಾವಾಗ ನಿಗದಿ ಪಡಿಸುತ್ತಾರೋ ಗೊತ್ತಿಲ್ಲ. ಆದರೆ ಫೆ.08 ರಂದು ಬಜೆಟ್ ಮಂಡಿಸುವ ಚಿಂತನೆಯಿದೆ ಎಂದರು.
ರಾಜ್ಯದ ರೈತರ 46,000 ಕೋಟಿ ರೂ. ಸಾಲ ಮನ್ನಾಗೆ ಸಂಬಂಧಿಸಿದಂತೆ ಬಜೆಟ್‍ನಲ್ಲಿ ಘೋಷಿಸಲಾಗುವುದು. ಹಾಗೆಯೇ ಬಜೆಟ್ ನಲ್ಲಿ ಸಾಲಮನ್ನಾ ಮಾಡುವ ಗೊಂದಲಕ್ಕೆ ತೆರೆ ಎಳೆದು ಹಣ ಪಾವತಿ ಮಾಡಲಾಗುವುದು ಎಂದು ಅವರು ಸ್ವಷ್ಟಪಡಿಸಿದರು.
ಮಾಜಿ ಮುಖ್ಯಮಂತ್ರಿ ಎಸ್. ಎಂ,. ಕೃಷ್ಣ ಅವರು ರಾಜ್ಯದಲ್ಲಿ ರೈತರ ಸಾಲ ಮನ್ನಾ ಕುರಿತಂತೆ ಘೋಷಣೆ ಮಾಡಲಾಗಿದ್ದರೂ, ಅದು ವೈಜ್ಞಾನಿಕವಾಗಿ ಅನುಷ್ಠಾನವಾಗುತ್ತಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಅವರಿಗೂ ಸ್ಪಷ್ಟಚಿತ್ರಣದ ಅರಿವು ಮೂಡಿಸಲಾಗುವುದು. ಜೊತೆಗೆ ರಾಷ್ಟ್ರೀಕೃತ ಬ್ಯಾಂಕ್‍ಗಳೊಂದಿಗೆ ನಡೆಸಿದ ಮಾತುಕತೆ ಸಂದರ್ಭದಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದ್ದು, ಕಾಲ ಕಾಲಕ್ಕೆ ಅವರಿಗೆ ಹಣ ಪಾವತಿ ಮಾಡುವ ವಿಧಾನದ ಸಂಪೂರ್ಣ ದಾಖಲೆಗಳನ್ನು ಆಯವ್ಯಯದಲ್ಲಿ ಪ್ರಕಟಿಸಲಾಗುವುದು ಎಂದು ಮುಖ್ಯಮಂತ್ರಿಕುಮಾರಸ್ವಾಮಿ ತಿಳಿಸಿದರು.
ಬೆಂಗಳೂರು ಸುತ್ತಮುತ್ತಲ ಉಪ ನಗರಗಳ ರೈಲ್ವೆ ಯೋಜನೆಗೆ ಅಗತ್ಯವಾಗಿರುವ ಸಂಪನ್ಮೂಲವನ್ನು ರಾಷ್ಟ್ರೀಕೃತ ಬ್ಯಾಂಕ್‍ಗಳ ಜೊತೆಗೆ ನಗರದ ಸ್ಥಳೀಯ ಸಂಸ್ಥೆಗಳ ನೆರವನ್ನೂ ಪಡೆದು ಯೋಜನೆಯನ್ನು ಅನುಷ್ಠಾನ ಗೊಳಿಸಲಾಗುವುದು ಎಂದರು.ಈಗಾಗಲೇ ಈ ಕುರಿತಂತೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸೇರಿದಂತೆ ವಿವಿಧ ಹಣಕಾಸು ಸಂಸ್ಥೆಗಳಿಂದ ಸಂಪನ್ಮೂಲ ಸಂಗ್ರಹದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ತಿಳಿಸಿದರು.
ಬೆಂಗಳೂರು ಅಭಿವೃದ್ಧಿಗೆ ಸರ್ಕಾರ ಕೈಗೊಂಡಿರುವ ಇಂತಹ ಕಾರ್ಯಕ್ರಮಗಳನ್ನು ಮನೆಮನೆಗೂ ತಲುಪಿಸುವ ಕೆಲಸ ಮಾಡಬೇಕೆಂದು ಪಕ್ಷದ ಕಾರ್ಯಕರ್ತರಿಗೆ ಕುಮಾರಸ್ವಾಮಿ ಸೂಚಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








