ಚಳ್ಳಕೆರೆ
ಕಳೆದ ಜ.2ರ ಬುಧವಾರ ನಡೆದ ವೆಂಕಟೇಶ್ವರ ನಗರದ ಕರೇಕಲ್ ಕೆರೆಯಂಗಳದ ಅಗ್ನಿ ದುರಂತದಲ್ಲಿ 35 ಕುಟುಂಬಗಳು ತಮ್ಮ ಎಲ್ಲಾ ವಸ್ತು ಹಾಗೂ ಬಟ್ಟೆ ಬರೆಗಳನ್ನು ಕಳೆದುಕೊಂಡು ನಿರಶಿತರಾಗಿ ಜೀವನ ನಿರ್ವಹಿಸುತ್ತಿದ್ದು, ಈ ಅವಘಡದಲ್ಲಿ ನೊಂದ ಎಲ್ಲಾ ಕುಟುಂಬಗಳಿಗೆ ಸಾಂತ್ವನ ಹೇಳಲು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಶುಕ್ರವಾರ ವೆಂಕಟೇಶ್ವರ ನಗರಕ್ಕೆ ಆಗಮಿಸಿ ಅಲ್ಲಿನ ವಾಸ್ತವ ಸ್ಥಿತಿಯನ್ನು ಪರಿಶೀಲನೆ ನಡೆಸಿದರು.
ಪ್ರಾರಂಭದ ಹಂತದಲ್ಲಿ ಬೆಂಕಿ ಕಾಣಿಸಿಕೊಂಡ ಮೊದಲ ಗುಡಿಸಲನನ್ನು ವೀಕ್ಷಿಸಿದ ಅವರು ಅಲ್ಲಿದ್ದ ಅಡುಗೆ ಸಿಲೆಂಡರ್ ಸ್ಪೋಟಗೊಂಡಿದ್ದನ್ನು ಗಮನಿಸಿದರು. ಬೆಂಕಿ ಆಕಸ್ಮಿಕದಿಂದ ಸುಟ್ಟು ಹೋದ ಎಲ್ಲಾ ಗುಡಿಸಲುಗಳ ಅವಶೇಷ ವೀಕ್ಷಿಸಿದ ಅವರು, ಇಂತಹ ಘಟನೆ ನಡೆಯಬಾರದಿತ್ತು. ಬಡ ಕುಟುಂಬಗಳು ಇಲ್ಲಿ ವಾಸಿಸುತ್ತಿದ್ದು, ಈ ಘಟನೆ ಅನಿರೀಕ್ಷಿತವಾಗಿ ನಡೆದಿದ್ದು, ಸಂಪೂರ್ಣ ಒಟ್ಟು ನಷ್ಟದ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ ನಂತರ ಈ ಬಗ್ಗೆ ಸರ್ಕಾರಕ್ಕೆ ಹೆಚ್ಚಿನ ಪರಿಹಾರಕ್ಕಾಗಿ ಶಿಫಾರಸ್ಸು ಮಾಡಲಾಗುವುದು ಎಂದರು. ನಂತರ ಅಲ್ಲಿಂದ ನೇರವಾಗಿ ವೆಂಕಟೇಶ್ವರ ನಗರದ ನೀರು ಸರಬರಾಜು ಕೇಂದ್ರಕ್ಕೆ ಆಗಮಿಸಿ ಅಲ್ಲಿ 35 ಕುಟುಂಬಗಳ ಸುಮಾರು 100ಕ್ಕೂ ಹೆಚ್ಚು ಸದಸ್ಯರಿಗೆ ಪ್ರತಿನಿತ್ಯ ತಿಂಡಿ, ಊಟ, ಟೀ.ಕಾಪಿ ಹಾಗೂ ವಿತರಣೆಗಾಗಿ ಇಟ್ಟಿದ್ದ ಕೆಲವೊಂದು ವಸ್ತುಗಳನ್ನು ಸಹ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪೌರಾಯುಕ್ತ ಜೆ.ಟಿ.ಹನುಮಂತರಾಜು, ಮಾನ್ಯ ಜಿಲ್ಲಾಧಿಕಾರಿಗಳು ನಿಮ್ಮ ನೋವನ್ನು ಆಲಿಸಲು ಆಗಮಿಸಿದ್ದು, ತಮ್ಮ ಯಾವುದೇ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳಲ್ಲಿ ಭಿನ್ನವಿಸಿಕೊಳ್ಳಲು ಮನವಿ ಮಾಡಿದರು. ಈ ಸಂದರ್ಭದಲ್ಲಿ ಬೆಂಕಿ ದುರಂತದಲ್ಲಿ ತಮ್ಮ ಸರ್ವಸ್ವವನ್ನು ಕಳೆದುಕೊಂಡ ಅಲ್ಲಿನ ನಿವಾಸಿಗಳಾದ ಗಾನಮ್ಮ, ಮಹದೇವಿ, ಟಿ.ಸರ್ವಮಂಗಳ, ಮಂಜುಳಮ್ಮ, ಸಾವಿತ್ರಮ್ಮ, ಹೊನ್ನೂರಪ್ಪ ಮುಂತಾದವರು ಅಳುತ್ತಲೇ ವಾಸ್ತವ ಸ್ಥಿತಿಯನ್ನು ವಿವರಿಸಿದರು. ನಮ್ಮ ಜೀವ ಬಿಟ್ಟು ನಮ್ಮ ಎಲ್ಲಾ ವಸ್ತುಗಳು ಸಂಪೂರ್ಣವಾಗಿ ಸುಟ್ಟುಕರಕಲಾಗಿವೆ.
ಮುಂದಿನ ನಮ್ಮ ಭವಿಷ್ಯದ ಬದುಕಿನ ಬಗ್ಗೆ ನಮಗೆ ಚಿಂತೆಯಾಗಿದೆ. ಶಾಲೆಗೆ ಹೋಗುವ ವಿದ್ಯಾರ್ಥಿಗಳ ಓದುವ ಪುಸ್ತಕ, ಬಟ್ಟೆ ಬರೆ, ಸಮವಸ್ತ್ರ, ಬ್ಯಾಂಕ್ ಹಾಗೂ ಇತರೆ ದಾಖಲಾತಿಗಳು ಸುಟ್ಟಿವೆ. ನಾವು ಇಂದು ಶೋಚನಿಯ ಸ್ಥಿತಿಯಲ್ಲಿ ಬದುಕುತ್ತಿದ್ದೇವೆ. ನಮ್ಮ ಕಣ್ಣೆದುರಿನಲ್ಲೇ ನಮ್ಮ ಮಕ್ಕಳು ಎಲ್ಲವನ್ನೂ ಕಳೆದುಕೊಂಡು ಅನಾಥವಾಗಿದ್ದೇರೆಂಬ ಭಾವನೆ ನಮ್ಮಲ್ಲಿದೆ. ದಯಮಾಡಿ ನೀವು ನಮಗೆ ಸೂಕ್ತ ವ್ಯವಸ್ಥೆಯನ್ನು ಮಾಡಿಕೊಸಬೇಕು. ತಾಲ್ಲೂಕು ಆಡಳಿತ, ನಗರಸಭೆ ಮತ್ತು ಇತರೆ ಸಂಘ ಸಂಸ್ಥೆಗಳು, ನಗರಸಭಾ ಸದಸ್ಯ ಟಿ.ಮಲ್ಲಿಕಾರ್ಜುನ ಮತ್ತು ಸ್ನೇಹಿತರ ತಂಡ ಕೆಲವೊಂದು ಸೌಲಭ್ಯಗಳನ್ನು ನೀಡಿದೆ. ನಮ್ಮ ಜೀವನ ಕತ್ತಲಾಗಿದೆ ಎಂಬ ಭಾವನೆ ನಮಗೆ ಉಂಟಾಗಿದ್ದು, ದಯಮಾಡಿ ಬೆಳಕು ನೀಡುವಂತೆ ಕೈಮುಗಿದು ಬೇಡಿದರು.
ನೊಂದವರ ಬಾಯಿಂದ ಬಂದ ಖುದ್ದ ನುಡಿಗಳನ್ನು ಕೇಳಿದ ಜಿಲ್ಲಾಧಿಕಾರಿ ಕೆಲ ನಿಮಿಷಗಳ ಕಾಲ ಮೌನಕ್ಕೆ ಜಾರಿದರಲ್ಲದೆ, ನಂತರ ದಯಮಾಡಿ ಯಾರೂ ಧೈರ್ಯವನ್ನು ಕಳೆದುಕೊಳ್ಳಬೇಡಿ. ಸರ್ಕಾರ ಹಾಗೂ ಜಿಲ್ಲಾಡಳಿತ ಸದಾ ನಿಮ್ಮ ನೆರವಿಗೆ ದಾವಿಸುತ್ತದೆ. ಪ್ರಸ್ತುತ ಸ್ಥಿತಿಯಲ್ಲಿ ನಿಮಗೆ ದೈನಂದಿನ ಎಲ್ಲಾ ಅಗತ್ಯತೆಗಳನ್ನು ಪೂರೈಸಲಾಗಿದೆ. ನಿಮಗೆ ಪ್ರತಿನಿತ್ಯ ಸ್ನಾನ ಹಾಗೂ ಶೌಚಾಲಯ ವ್ಯವಸ್ಥೆ ಮಾಡುವಂತೆ ಪೌರಾಯುಕ್ತರಿಗೆ ಸೂಚನೆ ನೀಡಿದ್ದೇನೆ. ನಿಮ್ಮೆಲ್ಲರ ಸ್ಥಿತಿಯ ಬಗ್ಗೆ ಸ್ಪಷ್ಟ ಅರಿವಿದೆ. ಯಾರೂ ಸಹ ಚಿಂತೆ ಮಾಡದೆ ಸಹಕಾರ ನೀಡಿ. ನಿಮಗೆ ಸರ್ಕಾರದಿಂದ ಯಾವ ರೀತಿ ಪರಿಹಾರ ನೀಡಬೇಕು ಎಂಬ ಬಗ್ಗೆ ಚಿಂತನೆ ನಡೆಸಿದೆ ಎಂದರು. ಯಾರೂ ಸಹ ಯಾವ ಕಾರಣಕ್ಕೂ ದೃತಿಗೆಡದೆ ಧೈರ್ಯವಾಗಿ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವಂತೆ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ನೊಂದ ಪ್ರತಿಯೊಂದು ಕುಟುಂಬಕ್ಕೂ ನಗರಸಭೆಯಿಂದ 2 ಸಾವಿರ ಪರಿಹಾರ ಧನದ ಚೆಕು, ನೂತನ ಪಡಿತರ ಚೀಟಿಯನ್ನು ಜಿಲ್ಲಾಧಿಕಾರಿಗಳು ವಿತರಿಸಿದರು.
ಇದೇ ಸಂದರ್ಭದಲ್ಲಿ ಲಿಡ್ಕರ್ ಸಂಸ್ಥೆಯಿಂದ ನಗರಸಭೆ ವ್ಯಾಪ್ತಿಯ ರಿ.ಸರ್ವೆ ನಂ.102ರಲ್ಲಿ ನಿವೇಶನಗಳನ್ನು ವಿಂಗಡಿಸಿದ್ದು, ಫಲಾನುಭವಿಗಳನ್ನು ಗುರುತಿಸಿದ ಬಗ್ಗೆ ಮಾಹಿತಿ ಪಡೆದ ಅವರು ಸದರಿ ಜಾಗಕ್ಕೆ ತೆರಳಿ ವೀಕ್ಷಿಸಿದರು. ಈ ಸಂದರ್ಭದಲ್ಲಿ ಪೌರಾಯುಕ್ತ ಹನುಮಂತರಾಜು, ಈಗಾಗಲೇ ಕರೇಕಲ್ ಕೆರೆಯಂಗಳದ ಎಲ್ಲಾ ಫಲಾನುಭವಿಗಳನ್ನು ಗುರುತಿಸಿದ್ದು, ನಿವೇಶನಗಳ ಸಂಖ್ಯೆಯನ್ನು ಸಹ ದಾಖಲಿಸಲಾಗಿದೆ. ಲಿಡ್ಕರ್ ಸಂಸ್ಥೆಯಿಂದ ಹಕ್ಕು ಪತ್ರ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಬೇಕಿದೆ ಎಂದರು. ಕೂಡಲೇ ಜಿಲ್ಲಾಧಿಕಾರಿಗಳು ಲಿಡ್ಕರ್ ಸಂಸ್ಥೆ ಎಂ.ಡಿಯೊಂದಿಗೆ ಮಾತನಾಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ನಾಗರಾಜು, ಆಹಾರ ನಿರೀಕ್ಷಕ ರಂಗಸ್ವಾಮಿ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಮಂಜಪ್ಪ, ಸಿಡಿಪಿಒ ಗಿರಿಜಾಂಬ, ಪ್ರಭಾರ ಆರ್‍ಐ ಲಿಂಗೇಗೌಡ, ಗ್ರಾಮ ಲೆಕ್ಕಿಗ ರಾಜೇಶ್ ಮುಂತಾದವರು ಉಪಸ್ಥಿತರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ