ಬೆಂಗಳೂರು
ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಬೇಕು. ವಿಪಕ್ಷಗಳು ಕೇಳುವ ಪ್ರಶ್ನೆಗೆ ಉತ್ತರಿಸಬೇಕು ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಫೇಲ್ ಹಗರಣದ ಬಗ್ಗೆ ಪ್ರಧಾನಿ ಬಾಯಿಬಿಡಬೇಕು. ರಫೇಲ್ ಚರ್ಚೆಗೆ ಸದನದಲ್ಲಿ ಉತ್ತರಿಸಬೇಕು. ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಬಗ್ಗೆ ದೊಡ್ಡ ಚರ್ಚೆಯೇ ನಡೆದಿದ್ದು, ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ವಿಧೇಯಕವನ್ನು ತಡೆಹಿಡಿಯಲಾಗಿದೆ. ಮಹಿಳಾಮೀಸಲಾತಿ ಬಗ್ಗೆ ತಾವು ಹೋರಾಟ ಮಾಡಿದ್ದು, ಕಾಂಗ್ರೆಸ್ ಹೋರಾಟ ಮಾಡಲಿಲ್ಲ ಎಂದರು.
ಕಲ್ಬುರ್ಗಿಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಲೋಕಸಭೆಯಲ್ಲಿ ರಫೇಲ್ ಯುದ್ಧ ವಿಮಾನ ಖರೀದಿ ಹಗರಣ ತನಿಖೆಗೆ ಜಂಟಿ ಸದನ ಸಮಿತಿ ರಚನೆಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಹೋರಾಟ ಮುಂದುವರೆಯಲಿದೆ ಎಂದರು.
ಬೋಫೋರ್ಸ್ ಬಂದೂಕು ಬಳಸಿ ಎಲ್ಲರನ್ನು ಮುಗಿಸುತ್ತೇವೆ ಎಂದು ಹೊರಟಿರುವ ಕೇಂದ್ರದ ನಡೆ ಎಂದಿಗೂ ಯಶಸ್ವಿಯಾಗುವುದಿಲ್ಲ. ಲೋಕಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಕೇಳುವ ಮೂಲಪ್ರಶ್ನೆಗಳಿಗೆ ಕೇಂದ್ರ ಸರ್ಕಾರ ಉತ್ತರಿಸುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಒಂದೂ ಪ್ರಶ್ನೆಗೂ ಉತ್ತರಿಸದೇ ಸದನಕ್ಕೆ ಅಗೌರವ ತೋರುತ್ತಿದ್ದಾರೆ. ರಫೇಲ್ ಹಗರಣ ನಡೆಯಲು ನರೇಂದ್ರ ಮೋದಿಯವರೇ ನೇರ ಕಾರಣ ಎಂದು ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ