ದಾವಣಗೆರೆ:
ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವುದು ಶಾಲೆಗಳ ಆದ್ಯತೆಯಾಗಬೇಕೆಂದು ನಂದಿತಾವರೆಯ ಸಿದ್ಧಲಿಂಗಮಠದ ಶ್ರೀಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಇಲ್ಲಿನ ಹದಡಿ ರಸ್ತೆಯಲ್ಲಿರುವ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಭಾನುವಾರ ನಡೆದ ನಿಂಚನ ಪಬ್ಲಿಕ್ ಶಾಲೆಯ 11ನೇ ವಾರ್ಷಿಕೋತ್ಸವದ ಪ್ರಯುಕ್ತ ಶಾಲೆಯ ಪೂರ್ವ ಮತ್ತು ಹಿರಿಯ ಪ್ರಾಥಮಿಕ ತರಗತಿಗಳ ಮಕ್ಕಳ ಸಾಂಸ್ಕತಿಕ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿ ಸನಾತನ ಸಂಸ್ಕತಿ ಪದ್ಧತಿಯಂತೆ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುತ್ತಿರುವ ನಿಂಚನ ಶಾಲೆಯ ಕಾರ್ಯ ಅತ್ಯುತ್ತಮವಾಗಿದೆ. ಪ್ರಸ್ತುತ ಶಿಕ್ಷಣ ಕ್ಷೇತ್ರ ವ್ಯಾಪಾರಿಕರಣ ಆಗಿರುವ ಸಂದರ್ಭದಲ್ಲೂ ರಿಯಾಯಿತಿ ಶುಲ್ಕ ಪಡೆದು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಈ ಶಾಲೆಯ ಕ್ರಮ ಶ್ಲಾಘನೀಯವಾಗಿದೆ ಎಂದರು.
ಮಕ್ಕಳ ಆಸಕ್ತಿಗೆ ಪೂರಕವಾಗಿ ಪೋಷಕರು ಶಿಕ್ಷಣ ಕೊಡಿಸಬೇಕೆ ಹೊರತು, ನಿಮ್ಮ ಆಸಕ್ತಿಯನ್ನು ಮಕ್ಕಳ ಮೇಲೆ ಹೇರಬಾರದು. ಎಷ್ಟೇ ಕಷ್ಟ ಬಂದರೂ ಮಕ್ಕಳ ಶಿಕ್ಷಣ ಮೊಟಕುಗೊಳಿಸಬಾರದು. ಒಳ್ಳೆಯ ಶಿಕ್ಷಣ ಕೊಡಿಸುವ ಮೂಲಕ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕೇ ಹೊರತು, ಮಕ್ಕಳಿಗಾಗಿ ಆಸ್ತಿ ಮಾಡಬಾರದು ಎಂದು ಹೇಳಿದರು.
ಎಸ್.ನಿಂಗಪ್ಪನವರ ಸಾಧನೆಗೆ ಪೂರಕವಾಗಿ ಮುಂದಿನ ದಸರಾದಲ್ಲಿ ಶ್ರೀಮಠದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀಸಿದ್ದಲಿಂಗೇಶ್ವರ ಸೇವಾ ಪ್ರಶಸ್ತಿ ನೀಡಿ, ಗೌರವಿಸಲಾಗುವುದು ಎಂದರು.
ನಿಂಚನ ಪಬ್ಲಿಕ್ ಶಾಲೆಯ ಸಂಸ್ಥಾಪಕ ಅದ್ಯಕ್ಷ ಎಸ್.ನಿಂಗಪ್ಪನವರು ಮಾತನಾಡಿ, ನನ್ನ ಪರಿಕಲ್ಪನೆಯಂತೆ ಹಾಗೂ ನನ್ನ ವಿದ್ಯಾಭ್ಯಾಸದ ಸಂದರ್ಭದಲ್ಲಿ ಆದಂತಹ ಸಮಸ್ಯೆಯು ಈಗಿನ ವಿದ್ಯಾರ್ಥಿಗಳಿಗೆ ಎದುರಾಗಿ, ಕಲಿಕೆಗೆ ತೊಂದರೆ ಆಗಬಾರದೆಂಬ ಉದ್ದೇಶದಿಂದ 11 ವರ್ಷಗಳ ಹಿಂದೆ ನಿಂಚನ ಪಬ್ಲಿಕ್ ಸ್ಕೂಲ್ ಪ್ರಾರಂಭಿಸಿದ್ದು, ಅಂದಿನಿಂದ ಸಾವಿರಾರು ಮಕ್ಕಳು ನಮ್ಮ ಶಾಲೆಯಲ್ಲಿ ಕಲಿಯುತ್ತಿದ್ದಾರೆಂದು ಹೇಳಿದರು.
ಹರಿಹರ ತಾಲೂಕಿನ ಬೆಳ್ಳೊಡಿಯ ಕಾಗಿನೆಲೆ ಮಹಾಸಂಸ್ಥಾನದಡಿಯಲ್ಲಿ ನಡೆಯುತ್ತಿರುವ ಚಂದ್ರಗುಪ್ತ ಮೌರ್ಯಶಾಲೆಯನ್ನೂ ಸಹ ನಮ್ಮ ಪರಿಕಲ್ಪನೆಯಂತೆ ನಡೆಸುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಚಂದ್ರಗುಪ್ತ ಮೌರ್ಯ ಶಾಲೆಯ ಪ್ರಾಂಶುಪಾಲೆ ಶೃತಿ ಇನಾಂದಾರ್, ಸಂಸ್ಥೆಯ ಕಾರ್ಯದರ್ಶಿ ಚಂದ್ರಕಲಾ, ಶಾಲಾಭಿವೃಧ್ದಿ ಆಡಳಿತಮಂಡಳಿ ಅಧ್ಯಕ್ಷ ಅಜ್ಜಪ್ಪ, ಪ್ರಾಂಶುಪಾಲೆ ಮಾಲಾ, ಹೃಸ್ಕೂಲ್ ವಿಭಾಗದ ಮುಖ್ಯಸ್ಥ ರೇವಣ್ಣಸಿದ್ದಪ ಮತ್ತಿತರರು ಉಪಸ್ಥಿತರಿದ್ದರು. ವೇದಿಕೆ ಕಾರ್ಯಕ್ರಮದ ನಂತರ ಮಕ್ಕಳಿಂದ ಸಾಂಸ್ಕತಿಕ ಕಾರ್ಯಕ್ರಮಗಳು ನಡೆದವು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
