ಬ್ಯಾಡಗಿ:
ಬೆಂಗಳೂರಿನ ಯಾವುದೇ ಮಲ್ಟಿ ಸ್ಪೆಶಾಲಿಟಿ ಖಾಸಗಿ ಆಸ್ಪತ್ರೆಗಳಿಗೂ ಕಡಿಮೆ ಇಲ್ಲವೆನ್ನುವ ರೀತಿಯಲ್ಲಿ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಶುಚಿತ್ವ ಕಾಪಾಡಿಕೊಳ್ಳಲಾಗಿದೆ, ಮರಣೋತ್ತರ ಪರೀಕ್ಷಾ ಕೇಂದ್ರದ ನವೀಕರಣ ಸೇರಿದಂತೆ ಚಿಕಿತ್ಸಾಲಯವನ್ನು ಸೌಲಭ್ಯಗಳಿಂದ ಜೀವಂತವಾಗಿಡುವ ನಿಟ್ಟಿನಲ್ಲಿ ರೂ.1 ಕೋಟಿ ವಿಶೇಷ ಅನುದಾನ ಬಿಡುಗಡೆಗೊಳಿಸುವುದಾಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಭರವಸೆ ನೀಡಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಆರೋಗ್ಯ ರಕ್ಷಾ ಸಮಿತಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಜನರಿಗೆ ಗುಣಮಟ್ಟದ ಚಿಕಿತ್ಸೆ ನೀಡುವುದೂ ಸೇರಿದಂತೆ ಕೇವಲ ರೋಗಿಗಳನ್ನಷ್ಟೇ ಅಲ್ಲ ಚಿಕಿತ್ಸಾಲಯಗಳು ಕೂಡ ಜೀವಂತವಾಗಿರಬೇಕು, ‘ವೈದ್ಯೋ ನಾರಾಯಣೇ ಹರಿ’ ಎನ್ನುವ ಮಾತಿನಂತೆ ವೈದ್ಯರನ್ನು ದೇವರಿಗೆ ಹೋಲಿಕೆ ಮಾಡಲಾಗುತ್ತದೆ, ಸರ್ಕಾರಿ ಆಸ್ಪತ್ರೆಗಳಿಗೆ ಬರುವಂತಹ ಬಹುತೇಕರು ಬಡಕುಟುಂಬದ ಹಿನ್ನೆಲೆಯುಳ್ಳವರಾಗಿದ್ದು ಅಂತಹವರಿಗೆ ಸೂಕ್ತ ಚಿಕಿತ್ಸೆ ನೀಡುವ ವಿಷಯದಲ್ಲಿ ಧನಾತ್ಮಕ ಚಿಂತನೆಗಳು ವೈದ್ಯರಿಂದಾಗಬೇಕಾಗಿದೆ ಎಂದರು.
ಸರ್ಕಾರಿ ಆಸ್ಪತ್ರೆಗಳಿಗೆ ಬರುವಂತಹ ಬಹುತೇಕ ರೋಗಿಗಳು ಹಣಕಾಸಿನ ತೊಂದರೆಯನ್ನು ಅನುಭವಿಸುವಂತಹವರೇ ಹೆಚ್ಚು ಆರ್ಥಿಕ ತೊಂದರೆಯಿಂದ ಬಳಲುವವರಿಗಾಗಿಯೇ ಸರ್ಕಾರಿ ಆಸ್ಪತ್ರೆಗಳು ಎನ್ನುವಂತಾಗಿದೆ, ಸರ್ಕಾರವೂ ಕೂಡ ಸಕಲ ರೀತಿಯ ಸೌಲಭ್ಯಗಳನ್ನು ಸರ್ಕಾರಿ ಆಸ್ಪತ್ರೆಗಳಿಗೆ ಒದಗಿಸಲಾಗುತ್ತಿದ್ದು ಅವುಗಳನ್ನು ರೋಗಿಗಳಿಗೆ ತಲುಪಿಸುವ ಕಾರ್ಯ ಎಲ್ಲ ವೈದ್ಯಕೀಯ ಸಿಬ್ಬಂದಿ ಯಿಂದಾಗಬೇಕಾಗಿದೆ ಎಂದರು.
ನೂರು ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರದಲ್ಲಿ, ಕಳೆದ ವರ್ಷ 1.20 ಲಕ್ಷಕ್ಕೂ ಅಧಿಕ ಹೊರ ರೋಗಿಗಳು ಮತ್ತು 50 ಸಾವಿರಕ್ಕೂ ಅಧಿಕ ರೋಗಿಗಳು ಎರಡನೇ ಬಾರಿ ಚಿಕಿತ್ಸೆ ಪಡೆದಿರುವುದು ವೈದ್ಯರ ಶ್ರಮಕ್ಕೆ ಹಿಡಿದ ಕನ್ನಡಿಯಾಗಿದೆ, ಬೆಂಗಳೂರಿನ ಯಾವುದೇ ಮಲ್ಟಿ ಸ್ಪೆಶಾಲಿಟಿ ಖಾಸಗಿ ಆಸ್ಪತ್ರೆಗಳಿಗೂ ಕಡಿಮೆ ಇಲ್ಲವೆನ್ನುವ ರೀತಿಯಲ್ಲಿ ಶುಚಿತ್ವ ಕಾಪಾಡಿಕೊಳ್ಳಲಾಗಿದ್ದು ಲಭ್ಯವಿರುವ ಜಾಗದಲ್ಲೇ ರಕ್ತತಪಾಸಣೆ, ಎಕ್ಸ್‍ರೇ, ಡಯಾಲಿಸಿಸ್, ಆಪರೇಶನ ಥೇಟರ್ ಸೇರಿದಂತೆ ನಾಯಿ ಮತ್ತು ಹಾವು ಕಡಿತಕ್ಕೆ ಚಿಕಿತ್ಸಾ ಸೌಲಭ್ಯಗಳನ್ನು ಇಲ್ಲಿ ಒದಗಿಸಿರುವ ಕಾರ್ಯ ಶ್ಲಾಘನೀಯ ಎಂದರು.
ಸರ್ಕಾರಿ ಆಸ್ಪತ್ರೆಯಲ್ಲಿ ಗಂಟಲು-ಕಿವಿ, ಎಲುಬು-ಕೀಲು, ಚರ್ಮ, ನೇತ್ರ, ಮಕ್ಕಳು ಮತ್ತು ಮಹಿಳೆಯರಿಗೆ, ಹೋಮಿಯೋಪಥಿ, ಆಯುಷ್ಯ ಜನರಲ್ ಫಿಸಿಶಿಯನ್ ಇನ್ನಿತರ ರೋಗಗಳಿಗೆ ತಜ್ಞ ವೈದ್ಯರುಗಳು ಲಭ್ಯವಿದ್ದು, ನುರಿತ ಸರ್ಜನ್‍ಗಳು ಸಹ ಸೇವೆಗೆ ಲಭ್ಯವಿದ್ದಾರೆ ಹೀಗಾಗಿ ಇದೊಂದು ಸಕಲ ಸೌಲಭ್ಯಗಳಿರುವ ಸರ್ಕಾರಿ ಆಸ್ಪತ್ರೆಯಾಗಿದ್ದು ತಾಲೂಕಿನ ಎಲ್ಲ ಜನರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಮರಣೋತ್ತರ ಪರೀಕ್ಷಾ ಕೇಂದ್ರದ ಶುದ್ಧ ಕುಡಿಯುವ ನೀರಿನ ಘಟಕ, ಸ್ಪೆಶಲ್ ವಾರ್ಡಗಳ (ಪೇಯ್ಡ್ ರೂಮ್ಸ್) ರೋಗಿಯ ಸಂಬಂಧಿಗಳು ಬಟ್ಟೆ ತೊಳೆದುಕೊಳ್ಳಲು ಪ್ರತ್ಯೇಕ ಜಾಗದ ವ್ಯವಸ್ಥೆ ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ 1 ಕೋಟಿ ರೂ.ಗಳ ವೆಚ್ಚದ ವಿಶೇಷ ಅನುದಾನಕ್ಕೆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಪುಟ್ಟರಾಜು ಇದೇ ಸಂದರ್ಭದಲ್ಲಿ ಮನವಿ ಸಲ್ಲಿಸಿದರು.
ಸಭೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ವಿರೇಂದ್ರ ಶೆಟ್ಟರ, ರವೀಂದ್ರ ಪಟ್ಟಣಶೆಟ್ಟಿ, ಹೊನ್ನೂರಪ್ಪ ಕಾಡಸಾಲಿ, ರೇಖಾ ಪೂಜಾರ, ಸುರೇಶ ಯತ್ನಳ್ಳಿ, ಸುರೇಶ ಉದ್ಯೋಗಣ್ಣವರ, ಪುರಸಭೆ ಮುಖ್ಯಾಧಿಕಾರಿ ವಿ.ಎಂ.ಪೂಜಾರ, ತಾಲೂಕಾ ಆರೋಗ್ಯಾಧಿಕಾರಿ ಡಾ.ಬಿ.ಆರ್.ಲಮಾಣಿ, ವೈದ್ಯರುಗಳಾದ ಡಾ.ಶ್ರೀನಿವಾಸ, ಚಂದ್ರಕಾಂತ್ ಮಣ್ಣಾಪೂರ, ಸುರೇಶ ಹೊಸ್ಮನಿ, ವಿರೇಶ ಶಿರೂರ, ರಮೇಶ್ ಸೇರಿದಂತೆ ಆಸ್ಪತ್ರೆಯ ಎಲ್ಲ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ