ಅಕ್ಷರ ಜಾತ್ರೆಗೆ ಅಭೂತಪೂರ್ವ ತೆರೆ

ಧಾರವಾಡ

     ವಿದ್ಯಾನಗರಿಯಲ್ಲಿ ಮೂರು ದಿನಗಳ ಕಾಲ ಏರ್ಪಡಿಸಿದ್ದ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಂದು ಸಂಜೆ ಸಂಭ್ರಮದ ತೆರೆ ಬಿತ್ತು. ಮೂರು ದಿನಗಳಲ್ಲಿ ಸುಮಾರು 5 ರಿಂದ 7 ಲಕ್ಷಕ್ಕೂ ಅಧಿಕ ಮಂದಿ ಕನ್ನಡಾಸಕ್ತರು ಅಕ್ಷರ ಜಾತ್ರೆಗೆ ಭೇಟಿ ನೀಡಿ ಕನ್ನಡದ ಕಂಪನ್ನು ಸವಿದಿದ್ದಾರೆ.

     ಜನವರಿ 4ರಂದು ಮಧ್ಯಾಹ್ನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಉದ್ಘಾಟನೆಯೊಂದಿಗೆ ಚಾಲನೆಗೊಂಡಿದ್ದ ಅಕ್ಷರ ಜಾತ್ರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮಾರೋಪ ಭಾಷಣದೊಂದಿಗೆ ಸಮಾಪ್ತಿಗೊಂಡಿತು.

     ರಾಜ್ಯದ ಅಭಿವೃದ್ಧಿಯ ಮೇಲೆ ಬೆಳಕು ಚೆಲ್ಲುವ, ರಾಜ್ಯ ಎದುರಿಸುತ್ತಿರುವಜ್ವಲಂತ ಸಮಸ್ಯೆಗಳ ಬಗ್ಗೆ ಸರ್ಕಾರದ ಕಣ್ಣು ತೆರೆಸುವ ಹತ್ತು ಹಲವುವಿಚಾರಗಳು, ಗೋಷ್ಠಿಗಳು ನಡೆದವು.ಮೂರು ದಿನಗಳ ಅಕ್ಷರ ಜಾತ್ರೆಯಲ್ಲಿಸಾಹಿತ್ಯಾಭಿಮಾನಿಗಳು ಮಿಂದೆದ್ದು ಧನ್ಯತಾಭಾವ ಮೆರೆದರು. ಸಣ್ಣ ಪುಟ್ಟ ಕಪ್ಪುಚುಕ್ಕೆಗಳನ್ನು ಹೊರತುಪಡಿಸಿ ಸಮ್ಮೇಳನ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದೆ.

         ಸಾಹಿತ್ಯ ಸಮ್ಮೇಳನ ಅಂದರೆ ಬಹುಮುಖ್ಯವಾಗಿ ಸಾಹಿತ್ಯ ಕ್ಷೇತ್ರಕ್ಕೆ ಮಾತ್ರ ಸೀಮಿತವೆಂಬ ಕಲ್ಪನೆಯನ್ನು ಒಡೆದು, ಸಾಹಿತ್ಯವೆಂದರೆ ರಾಜ್ಯದ ಎಲ್ಲ ಭಾಗದ ಕನ್ನಡಿಗರು ಒಂದು ಕಡೆ ಸೇರಿ ಹಬ್ಬದಂತೆ ಸಂಭ್ರಮಿಸುವುದು ಕೂಡ ಸಮ್ಮೇಳನದ ಬಹುಮುಖ್ಯವಾದ ಭಾಗವೆಂದು ತೋರ್ಪಡಿಸಿದ್ದು, ಧಾರವಾಡದಲ್ಲಿ ನಡೆದ 84ನೆ ಅಖಿಲ ಭಾರತದ ಕನ್ನಡ ಸಾಹಿತ್ಯ ಸಮ್ಮೇಳನದ ಹೆಚ್ಚುಗಾರಿಕೆಯಾಗಿದೆ.

         ಸಮ್ಮೇಳಾಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಅವರ ಭಾಷಣ ನಾಡಿನ ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಕೋನ ಹೊಂದಿತ್ತು. ಉತ್ತರ ಕರ್ನಾಟಕದ ಅಭಿವೃದ್ಧಿಯ ಸವಾಲುಗಳು, ದಲಿತ ಅಸ್ಮಿತೆ, ಕನ್ನಡ ಶಾಲೆಗಳ ಅಳಿವು-ಉಳಿವು, ಡಾ.ಚಂದ್ರಶೇಖರ ಕಂಬಾರರ ಸಾಹಿತ್ಯ, ಮಹಿಳಾ ಸಂವೇದನೆ, ಗಡಿನಾಡ ತಲ್ಲಣಗಳು, ನೀರಾವರಿ-ಜ್ವಲಂತ ಸಮಸ್ಯೆಗಳು, ಕನ್ನಡ ಚಲನಚಿತ್ರ ಮತ್ತು ಕಿರುತೆರೆ, ಪ್ರಾಚೀನ ಹಾಗೂ ಮಧ್ಯಕಾಲೀನ ಸಾಹಿತ್ಯದ ಮರು ಓದು, ಕನ್ನಡ ಕಟ್ಟುವಿಕೆ, ವೈಚಾರಿಕತೆ ಮತ್ತು ಅಸಹಿಷ್ಣುತೆ, ಆಧುನಿಕ ಸಾಹಿತ್ಯದ ಮರುಚಿಂತನೆ, ವಿಶಿಷ್ಟ್ಯ ಸಾಹಿತ್ಯ ಪ್ರಭೇದಗಳು, ಕರ್ನಾಟಕ ಮೌಖಿಕ ಪರಂಪರೆ, ಕೃಷಿ ಕೇತ್ರದ ಸವಾಲುಗಳು, ಸಂಕೀರ್ಣ, ಮಕ್ಕಳ ಸಾಹಿತ್ಯ, ಧಾರವಾಡ ಜಿಲ್ಲಾ ದರ್ಶನ, ಕರ್ನಾಟಕ ಇತಿಹಾಸ-ನೂತನ ಒಳನೋಟಗಳು, ರಂಗಭೂಮಿ-ಇತ್ತೀಚಿನ ಪ್ರಯೋಗಗಳು, ಕಾವ್ಯ ಪ್ರಚಾರದ ವಿಭಿನ್ನ ನೆಲೆಗಳು ಸೇರಿದಂತೆ ಹಲವು ಅರ್ಥಪೂರ್ಣ ಗೋಷ್ಠಿಗಳು ಈ ಬಾರಿಯ ವೈಶಿಷ್ಟ್ಯತೆಗಳಾಗಿವೆ.

       ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಜಗದೀಶ್ ಶೆಟ್ಟರ್, ಸಂಸದ ಪ್ರಹ್ಲಾದ್ ಜೋಷಿ ಸೇರಿದಂತೆ ಹಲವು ರಾಜಕೀಯ ನಾಯಕರು ಈ ಬಾರಿಯ ಸಮ್ಮೇಳನಕ್ಕೆ ಸಾಕ್ಷಿಯಾದರು. ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ . ದೇಶಪಾಂಡೆ ಸಂಪೂರ್ಣ ಸಮ್ಮೇಳನ ದ  ಉಸ್ತುವಾರಿ ವಹಿಸಿಕೊಂಡು ಯಶಸ್ವಿಯಾಗಿ ಸಮ್ಮೇಳನವನ್ನು ನಡೆಸಿಕೊಟ್ಟರು. 

        ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳು ರಾತ್ರಿ ಹಗಲು ಶ್ರಮಿಸಿದ್ದರು. ರಾಜ್ಯದ ವಿವಿಧ ಭಾಗಗಳಲ್ಲಿ ಹಾಸು ಹೊಕ್ಕಾಗಿರುವ ಸಂಸ್ಕೃತಿ ಕಲೆಗಳ ವೈಭೋಗವಿತ್ತು. ನಾಡಿನ ಸಮಸ್ಯೆಗಳ ಕುರಿತು ಸಮಗ್ರವಾಗಿ ವಿಶ್ಲೇಷಿಸುವಂತಹ ಹಾಗೂ ಅದರ ಪರಿಹಾರಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮುನ್ನೋಟು ಬೀರುವಂತಹ ಸಮ್ಮೇಳನಾಧ್ಯಕ್ಷರ ಭಾಷಣವಿತ್ತು. ಅದಕ್ಕೆ ಇಂಬು ಕೊಡುವಂತೆ ನನ್ನ ಜೀವಿತಾವಧಿಯಲ್ಲಿ ಕನ್ನಡಕ್ಕೆ ಧಕ್ಕೆ ತರುವಂತಹ ಯಾವುದೆ ಕಾರ್ಯಕ್ರಮಗಳನ್ನು ಜಾರಿ ಮಾಡುವುದಿಲ್ಲವೆಂಬ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಖಚಿತವಾದ ನುಡಿಗಳಿದ್ದವು. ಸಾಮಾನ್ಯವಾಗಿ ಸೃಜನಶೀಲ ಸಾಹಿತಿಗಳ ವಿಚಾರಗಳು ಮಾತ್ರ ಸಮಾಜದಲ್ಲಿ ಹೆಚ್ಚು ಪ್ರಚಾರದಲ್ಲಿರುತ್ತದೆ.

        ಆದರೆ, ಕರ್ನಾಟಕ ಇತಿಹಾಸ: ನೂತನ ಒಳನೋಟಗಳು ಗೋಷ್ಟಿಯ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಂಶೋಧಕ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ ಅವರು ರಾಜ್ಯದ ಇತಿಹಾಸದಲ್ಲಿ ಹಾಗಿ ಹೋಗಿರುವ ನೈಜ ಘಟನೆಗಳ ಕುರಿತು ವಸ್ತುನಿಷ್ಟವಾಗಿ ಮಾತನಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರ ವಾಗಿತ್ತು. ಹೀಗೆಯೆ ದಲಿತ ಅಸ್ಮಿತೆ ಗೋಷ್ಟಿಯಲ್ಲಿ ಕೆ.ಬಿ.ಸಿದ್ದಯ್ಯ, ಗುರುಪ್ರಸಾದ್ ಕೆರೆಗೋಡು, ಡಾ.ಬಿ.ಎಂ.ಪುಟ್ಟಯ್ಯ ಮಾತುಗಳನ್ನು ನೆರೆದಿದ್ದವರು ಗಂಭೀರವಾಗಿ ಆಲಿಸಿದ್ದು ವಿಶೇಷವಾಗಿತ್ತು.

        ಪುಸ್ತಕ ಮೇಳ: ಇವತ್ತಿನ ತಂತ್ರಜ್ಞಾನದ ಕಾಲದಲ್ಲಿ ಪುಸ್ತಕ ಸಂಸ್ಕೃತಿಗೆ ಉಳಿಗಾಲವಿಲ್ಲ. ಓದುವವರ ಸಂಖ್ಯೆ ಕಡಿಮೆ ಆಗುತ್ತಿದೆ ಎಂಬ ಕೊರಗಿಗೆ ಧಾರವಾಡದ ಕನ್ನಡ ಸಾಹಿತ್ಯ ಮೇಳ ಉತ್ತರ ನೀಡಿದೆ. ಸಾಮಾನ್ಯವಾಗಿ ಪ್ರಾರಂಭದ ದಿನದಲ್ಲಿ ಜನತೆ ಪುಸ್ತಕದ ಅಂಗಡಿಗಳತ್ತ ಹೆಜ್ಜೆ ಹಾಕುವುದಿಲ್ಲವೆಂದು ಹೇಳಲಾಗುತ್ತದೆ. ಆದರೆ, ಧಾರವಾಡದಲ್ಲಿ ಮೊದಲ ದಿನದಿಂದಲೆ ಪುಸ್ತಕ ಅಂಗಡಿಗಳ ಬಳಿ
ನೂಕುನುಗ್ಗಲು ಇತ್ತು. ಎರಡು ಹಾಗೂ ಮೂರನೆ ದಿನದಲ್ಲಿ ಸಾಹಿತ್ಯ ಗೋಷ್ಟಿ ಹಾಗೂ ಮನರಂಜನೆ ಕಾರ್ಯಕ್ರಮಗಳಿಗಿಂತಲೂ ಪುಸ್ತಕ ಅಂಗಡಿಗಳತ್ತ ಜನತೆ ನೆರೆದು, ತಮಗೆ ಬೇಕಾದ ಪುಸ್ತಕಗಳನ್ನು ಕೊಂಡರು.

      ಪ್ರತಿಯೊಬ್ಬರ ಕೈಯಲ್ಲಿ ಒಂದಲ್ಲಾ ಒಂದು ಪುಸ್ತಕ ಇದಿದ್ದು ಸಾಮಾನ್ಯವಾದ ಅಂಶವಾಗಿತ್ತು. ಯಾವುದೆ ಪುಸ್ತಕ ಪ್ರಕಾಶಕರನ್ನು ವ್ಯಾಪಾರದ ಕುರಿತು ವಿಚಾರಿಸಿದರೆ, ಅವರಿಂದ ಸಮಾಧಾನದ ಉತ್ತರ ಬಂದಿದ್ದು, ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಮತ್ತೊಂದು ಗರಿಯಾಗಿದೆ . ಊಟದ ವ್ಯವಸ್ಥೆ ಅವ್ಯವ್ಯಸ್ಥೆ: ಕುಂದಾನಗರಿಯಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಮೊದಲ ದಿನದಿಂದಲೂ ಊಟ, ತಿಂಡಿಗಾಗಿ ಊಟೋಪಹಾರಕ್ಕೆ ಹಾಗೂ ಕುಡಿಯುವ ನೀರಿಗಾಗಿ ಸಾಹಿತ್ಯಾಸಕ್ತರು ಪರದಾಡುವಂತಾಗಿತ್ತು. ಹಲವು ದಶಕಗಳ ಬಳಿಕ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದಲ್ಲಿ ಈ ರೀತಿಯಾಗಿ ಅಸ್ಥವ್ಯಸ್ತ ಮಾಡಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಯಿತು. ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರಿಂದ ಎರಡು ಬೃಹತ್ ಮಂಟಪಗಳಲ್ಲಿ ಅನ್ನದಾಸೋಹಕ್ಕೆ ವ್ಯವಸ್ಥೆ ಕಲ್ಪಿಸಿದ್ದರೂ ವಿತರಣೆಗೆ ಪರದಾಡುವಂತಾಗಿತ್ತು.
   

          ರಾಜಕೀಯ ತಾಣವಾದ ಸಮ್ಮೇಳನ: ಸಾಹಿತ್ಯ ಸಂಭ್ರಮದಲ್ಲಿ ಮಿಂದೇಳುತ್ತಿದ್ದ ಸಂದರ್ಭದಲ್ಲಿ ಗಣ್ಯರೆನಿಸಿಕೊಂಡ ಕೆಲವರು ಮತ ಪ್ರಚಾರ ನಡೆಸುತ್ತಿದ್ದರು. ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾದ ಮಾ.ಚ.ಚನ್ನೇಗೌಡ, ಸಿ.ಕೆ.ರಾಮೇಗೌಡ, ಮಹೇಶ್ ಜೋಶಿ ಸೇರಿದಂತೆ ಹಲವರು ಮುಂದಿನ ಚುನಾವಣೆಗೆ ಇಂದಿನಿಂದಲೇ ಪ್ರಚಾರ ನಡೆಸಿ ಮತಯಾಚನೆ ಮಾಡುತ್ತಿದ್ದದು ಸಾಹಿತ್ಯಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.

         ಎಲ್ಲರೂ ಲವಲವಿಕೆಯಿಂದ ಓಡಾಡುತ್ತಲೇ ಮತ ಪ್ರಚಾರ ಮಾಡುತ್ತಿದ್ದು, ರಾಜಕಾರಣಿಗಳನ್ನು ಮೀರಿಸುತ್ತಿದ್ದಾರೆ ಎಂದು ಪರಿಷತ್ತಿನ ಸದಸ್ಯರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು. ಸಮ್ಮೇಳನದಲ್ಲಿ ಪ್ಲಾಸ್ಟಿಕ್ ಹಾವಳಿ: ಪ್ಲಾಸ್ಟಿಕ್ ಮುಕ್ತ ನಗರ ಮಾಡಬೇಕು ಎಂಬ ಉದ್ದೇಶದಿಂದ ಹಲವಾರು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸಮ್ಮೇಳನದ ತಯಾರಿಗಾಗಿ ಕಳೆದ ಒಂದು ತಿಂಗಳಿನಿಂದ ಭರದ ಸಿದ್ಧತೆಗಳನ್ನು ಜಿಲ್ಲಾಡಳಿತ ಮಾಡಿಕೊಂಡಿದೆ. ಅಲ್ಲದೆ, ಪ್ಲಾಸ್ಟಿಕ್ ಬಳಕೆಯನ್ನು ನಿಷೇಧ ಮಾಡಿಯೂ ಆದೇಶ ಹೊರಡಿಸಿದೆ. ಈ ಆದೇಶ ಕೇವಲ ಮಾತಿಗಷ್ಟೇ ಸೀಮಿತವಾಗಿದ್ದರೂ, ಸಮ್ಮೇಳನದಲ್ಲಿದ್ದ ಹಲವು ಮಳಿಗೆಗಳಲ್ಲಿ ಎಗ್ಗಿಲ್ಲದೇ ಪ್ಲಾಸ್ಟಿಕ್ ಬಳಕೆಯನ್ನು ಮಾಡಲಾಗುತ್ತಿತ್ತು. ಇನ್ನುಳಿದಂತೆ ಸಮ್ಮೇಳನದ ಪ್ರಾಂಗಾಣದ ಎಲ್ಲ ಕಡೆಗಳಲ್ಲಿ ಪ್ಲಾಸ್ಟಿಕ್ ಬಾಟಲಿಗಳು, ಕವರ್‍ಗಳು ಎಲ್ಲೆಂದರಲ್ಲಿರಾರಾಜಿಸುತ್ತಿದ್ದವು. ಇನ್ನುಳಿದಂತೆ ಸ್ವಚ್ಛತೆಗೂ ಹೆಚ್ಚಿನ ಆದ್ಯತೆ ನೀಡಿರಲಿಲ್ಲ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link