ಶ್ರೀ ಗುರುಸಿದ್ದರಾಮೇಶ್ವರ ಜಯಂತಿಗೆ ಅಗತ್ಯ ಪೂರ್ವಭಾವಿ ಸಿದ್ಧತೆ: ಜಿಎಸ್‍ಬಿ

ಗುಬ್ಬಿ

       ರಾಜ್ಯ ಮಟ್ಟದ ಗುರು ಶ್ರೀಸಿದ್ದರಾಮೇಶ್ವರ ಜಯಂತಿ ಮಹೋತ್ಸವವನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ನಡೆಸಲು ಎಲ್ಲಾ ರೀತಿಯ ಪೂರ್ವಭಾವಿ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು, ಈ ಧಾರ್ಮಿಕ ಸಮಾರಂಭದಲ್ಲಿ ನಾಡಿನ ವಿವಿಧ ಭಾಗಗಳಿಂದ ಮೂರು ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಆಗಮಿಸಲಿದ್ದು, ಭಕ್ತಾದಿಗಳಿಗೆ ಮತ್ತು ಸಾರ್ವಜನಿಕರಿಗೆ ಯಾವುದೇ ರೀತಿಯ ಮೂಲಭೂತ ಸಮಸ್ಯೆಗಳಾಗದಂತೆ ಸಮಿತಿಯು ಅಗತ್ಯ ಪೂರ್ವಭಾವಿ ಸಿದ್ಧತೆಗಳನ್ನು ಅಚ್ಚುಕಟ್ಟಾಗಿ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಜಿ ಸಂಸದ ಜಿ.ಎಸ್.ಬಸವರಾಜು ತಿಳಿಸಿದರು.

       ತಾಲ್ಲೂಕಿನ ಬಾಗೂರುಗೇಟಿನ ಶ್ರೀಸಿದ್ದರಾಮೇಶ್ವರ ಅನುಭವ ಮಂಟಪದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, 846ನೇ ಶ್ರೀಸಿದ್ದರಾಮೇಶ್ವರ ಜಯಂತಿಯು ಜನವರಿ 14 ಮತ್ತು 15 ರಂದು ಎರಡು ದಿನಗಳ ಕಾಲ ನಡೆಯಲಿದ್ದು, ಈಗಾಗಲೇ ಬಹುತೇಕ ಪೂರ್ವ ಸಿದ್ದತಾ ಕಾರ್ಯಗಳು ಭರದಿಂದ ನಡೆಯುತ್ತಿವೆ. ಜಯಂತಿ ಮಹೋತ್ಸವವು ಯಶಸ್ವಿಯಾಗಿ ನಡೆಯಲು ಭಕ್ತಾದಿಗಳು ಮತ್ತು ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ತಿಳಿಸಿದರು.

        ಜಯಂತಿ ಮಹೋತ್ಸವದಲ್ಲಿ ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಮಾರೋಪ ಸಮಾರಂಭಕ್ಕೆ ಆಗಮಿಸಲಿದ್ದಾರೆ. ಅಲ್ಲದೆ ಹಲವು ಸಚಿವರು, ಸಂಸದರು, ಶಾಸಕರು ಸೇರಿದಂತೆ ರಾಜ್ಯದ ವಿವಿಧ ಮಠಗಳ ಮಠಾಧೀಶರು ಭಾಗವಹಿಸಲಿದ್ದಾರೆ. ಜಯಂತಿ ಮಹೋತ್ಸವದ ಉದ್ಘಾಟನೆಯಂದು ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಸಂಸದರು, ಶಾಸಕರು ಮತ್ತು ರಾಜ್ಯದ ಹಲವು ಜಿಲ್ಲೆಗಳ ಮಠಾಧಿಪತಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದ ಅವರು, ತಾಲ್ಲೂಕಿನ ನಿಟ್ಟೂರಿನಿಂದ ಬಾಗೂರು ಗೇಟ್‍ವರೆಗೂ ಜನವರಿ 14 ರಂದು ವಿವಿಧ ಸಾಂಸ್ಕøತಿಕ ಕಲಾತಂಡಗಳೊಂದಿಗೆ ವೈಭವಯುತವಾದ ಮೆರವಣಿಗೆಯನ್ನು ಏರ್ಪಡಿಸಲಾಗಿದೆ. ಸಮಾರಂಭಕ್ಕೆ ಆಗಮಿಸುವ ಭಕ್ತಾದಿಗಳಿಗೆ ತುಮಕೂರು, ತಿಪಟೂರು ಕಡೆಯಿಂದ ವಿಶೇಷ ಬಸ್ಸಿನ ಸೇವೆಯನ್ನು ಸಹ ಒದಗಿಸಲಾಗುತ್ತದೆ ಎಂದು ತಿಳಿಸಿದರು.

        ಜಯಂತಿ ಮಹೋತ್ಸವ ಸಮಿತಿ ಅಧ್ಯಕ್ಷರು ಹಾಗೂ ಬೆಟ್ಟದಹಳ್ಳಿ ಗವಿಮಠದ ಶ್ರೀಚಂದ್ರಶೇಖರಸ್ವಾಮೀಜಿ ಮಾತನಾಡಿ ರಾಜ್ಯದ 100 ಕ್ಕೂ ಹೆಚ್ಚು ಮಠಗಳ ಸ್ವಾಮೀಜಿಗಳು ಜಯಂತಿ ಮಹೋತ್ಸವಕ್ಕೆ ಆಗಮಿಸುತ್ತಿದ್ದಾರೆ. ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ನಡೆಸಲು ಈಗಾಗಲೆ ಎಲ್ಲಾ ರೀತಿಯ ಅಗತ್ಯ ಮೂಲಭೂತ ಸೌಲಭ್ಯಗಳನ್ನು ವ್ಯವಸ್ಥೆ ಮಾಡಲಾಗುತ್ತಿದೆ. ಈ ಬಾರಿ ವಿಶೇಷವಾಗಿ 12 ನೇ ಶತಮಾನದಲ್ಲಿ ನಡೆಯುತ್ತಿದ್ದಂತಹ ಅನುಭವ ಮಂಟಪವನ್ನು ನಿರ್ಮಾಣ ಮಾಡುತ್ತಿದ್ದು ನೂರಾರು ಕವಿಗಳು ವಚನಕಾರರು ಬಂದು ಜಯಂತಿಯಲ್ಲಿ ಚರ್ಚೆ ಮಾಡಲಿದ್ದಾರೆ ಎಂದು ತಿಳಿಸಿದರು.

          ಕಾರ್ಯಾಧ್ಯಕ್ಷ ಶಂಕರಾನಂದ ಮಾತನಾಡಿ ಧಾರ್ಮಿಕ ಕಾರ್ಯಕ್ರಮವಾಗಿರುವುದರಿಂದ ಶ್ರೀಗುರು ಸಿದ್ದರಾಮಜಯಂತಿಯನ್ನು ಅರ್ಥ ಪೂರ್ಣವಾಗಿ ಆಚರಿಸಲು ಸಕಲ ರೀತಿಯಲ್ಲಿ ಸಿದ್ದತೆ ಮಾಡಿಕೊಳ್ಳಲಾಗುತ್ತಿದ್ದು ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಸೇರಿದಂತೆ ಭಕ್ತಾದಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಹಕಾರ ನೀಡುವುದರೊಂದಿಗೆ ಜಯಂತಿ ಮಹೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ವೈಭವಯುತವಾಗಿ ನಡೆಸಲು ಹೆಚ್ಚಿನ ಸಹಕಾರ ನೀಡುವಂತೆ ಮನವಿ ಮಾಡಿದರು.

        ಸುದ್ದಿಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷರಾದ ಸಿ.ಎಸ್.ಮೋಹನ್ ಕುಮಾರ್, ಜಿ.ಎಸ್.ಪ್ರಸನ್ನಕುಮಾರ್, ಪಿ.ಬಿ.ಚಂದ್ರಶೇಖರಬಾಬು, ಹೆಚ್.ಸಿ.ಪ್ರಭಾಕರ್, ಬಿಳಿಗೆರೆ ಶಿವಕುಮಾರ್, ಪತ್ರೆದಿನೇಶ್, ಬಿ.ಎಸ್.ಪಂಚಾಕ್ಷರಿ, ಸಿದ್ದಲಿಂಗಮೂರ್ತಿ, ಪ್ರಧಾನ ಕಾರ್ಯದರ್ಶಿ ನಿರಂಜನಮೂರ್ತಿ ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link