ದಾವಣಗೆರೆ
ಶಿವಯೋಗಿ ಶ್ರೀ ಸಿದ್ದರಾಮ ಜಯಂತಿ, ಮಹಾಯೋಗಿ ವೇಮನ ಜಯಂತಿ ಮತ್ತು ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮಗಳನ್ನು ಜ.21 ರಂದು ನಗರದ ಕುವೆಂಪು ಕನ್ನಡ ಭವನದಲ್ಲಿ ಆಯೋಜಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ ತಿಳಿಸಿದರು.
ಶಿವಯೋಗಿ ಶ್ರೀಸಿದ್ದರಾಮ ಜಯಂತಿ, ಮಹಾಯೋಗಿ ವೇಮನ ಜಯಂತಿ ಮತ್ತು ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮಗಳನ್ನು ಜಿಲ್ಲಾ ಮಟ್ಟದಲ್ಲಿ ಆಯೋಜಿಸುವ ಕುರಿತು ಇಂದು ಅಪರ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮೂರು ಸಮಾಜದೊಂದಿಗೆ ಚರ್ಚಿಸಿದ ನಂತರ ಅಪರ ಜಿಲ್ಲಾಧಿಕಾರಿಗಳು, ಜ.21 ರಂದು ಬೆಳಿಗ್ಗೆ 11 ಕ್ಕೆ ನಗರದ ಕುವೆಂಪು ಕನ್ನಡ ಭವನದಲ್ಲಿ ಶಿವಯೋಗಿ ಶ್ರೀಸಿದ್ದರಾಮ ಜಯಂತಿ, ಮಹಾಯೋಗಿ ವೇಮನ ಜಯಂತಿ ಮತ್ತು ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮಗಳನ್ನು ನಡೆಸಲಾಗುವುದು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸಂಗೀತ ಕಾರ್ಯಕ್ರಮವಿರುತ್ತದೆ ಎಂದರು.
ಭೋವಿ ಸಮಾಜದ ಮುಖಂಡರು ಶಿವಯೋಗಿ ಶ್ರೀಸಿದ್ದರಾಮ ಜಯಂತಿಯನ್ನು ಪ್ರತ್ಯೇಕವಾಗಿ ಬೇರೆ ದಿನಾಂಕದಂದು ಅದ್ದೂರಿಯಾಗಿ ಆಚರಿಸಬೇಕೆಂದು ಮನವಿ ಮಾಡಿದರು.ಅಪರ ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಇತ್ತೀಚೆಗೆ ಜಯಂತಿಗಳ ಆಚರಣೆಯಲ್ಲಿ ಜನರ ಪಾಲ್ಗೊಳ್ಳುವಿಕೆಯೇ ತೀರಾ ಕಡಿಮೆ ಆಗುತ್ತಿದೆ. ಆದ್ದರಿಂದ ಒಂದು ತಿಂಗಳಲ್ಲಿ ಬರುವ ಜಯಂತಿಗಳನ್ನು ಕೂಡಿಸಿ ಒಟ್ಟಿಗೇ ಮಾಡಲಾಗುವುದು. ಜಿಲ್ಲಾಡಳಿತದ ವತಿಯಿಂದ ಈ ಮೂರು ಜಯಂತಿಯನ್ನು ಒಂದೇ ದಿನ ಆಚರಿಸಲಾಗುವುದು. ಸಮಾಜದ ವತಿಯಿಂದ ತಾವು ಬೇಕಾದರೆ ಬೇರೆ ದಿನದಂದು ಆಚರಿಸಬಹುದು ಎಂದರು.
ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆ ಮುದ್ರಿಸಿ ಆಹ್ವಾನಿಸಲು ತಿಳಿಸಿದರು. ವೇದಿಕೆಗೆ ಪ್ರತಿ ಸಮಾಜದ ಜಿಲ್ಲಾಧ್ಯಕ್ಷರು ಮತ್ತು ಸಮಾಜದ ಸ್ವಾಮೀಜಿಯನ್ನು ಆಹ್ವಾನಿಸಬಹುದು ಎಂದರು.ಮೂರೂ ಜಯಂತಿಗಳ ಕುರಿತು ಮಾತನಾಡುವ ಒಬ್ಬ ಉಪನ್ಯಾಸಕರು ಅಥವಾ ಮೂರು ಜಯಂತಿಗೆ ಪ್ರತ್ಯೇಕ ಉಪನ್ಯಾಸಕರನ್ನು ಗುರುತಿಸಿ, ಹೆಸರನ್ನು ಅಂತಿಮಗೊಳಿಸಿ ಆದಷ್ಟು ಬೇಗ ಕನ್ನಡ ಮತ್ತು ಸಂಸ್ಕತಿ ಇಲಾಖೆಗೆ ತಿಳಿಸಬೇಕೆಂದು ಅವರು ತಿಳಿಸಿದರು.
ಪ್ರತಿ ಜಯಂತಿಯ ತಲಾ ಮೂರು ಫ್ಲೆಕ್ಸ್ಗಳನ್ನು ಕನ್ನಡ ಮತ್ತು ಸಂಸ್ಕತಿ ಇಲಾಖೆಯಿಂದ ನಗರದ ಮುಖ್ಯ ಭಾಗಗಳಲ್ಲಿ ಅಳವಡಿಸಲಾಗುವುದು. ಮೆರವಣಿಗೆಗೆ ಕಲಾತಂಡಗಳನ್ನು ನೀಡಲಾಗುವುದು ಎಂದರು.ಸಮಾಜದ ಮುಖಂಡರು ತಾವು ಪ್ರತ್ಯೇಕವಾಗಿ ಫ್ಲೆಕ್ಸ್ ಅಳವಡಿಸಲು ಮಹಾನಗರಪಾಲಿಕೆಯಿಂದ ಉಚಿತವಾಗಿ ಅನುಮತಿ ಕೊಡಿಸುವಂತೆ ಮನವಿ ಮಾಡಿದಾಗ, ಅಪರ ಜಿಲ್ಲಾಧಿಕಾರಿಗಳು, ಉಚಿತವಾಗಿ ಅನುಮತಿ ಕೊಡಿಸಲು ಬರುವುದಿಲ್ಲ. ನಿಯಮಾನುಸಾರವೇ ಫ್ಲೆಕ್ಸ್ ಅಳವಡಿಕೆ ಮಾಡಬೇಕೆಂದರು.
ಸಭೆಯಲ್ಲಿ ಭೋವಿ ಸಮಾಜದ ಜಿಲ್ಲಾಧ್ಯಕ್ಷ ಬಿ.ಟಿ.ಸಿದ್ದಪ್ಪ, ಕಾರ್ಯಾಧ್ಯಕ್ಷ ಹೆಚ್.ಜಯಣ್ಣ, ಪ್ರಧಾನ ಕಾರ್ಯದರ್ಶಿ ವಿ.ಗೋಪಾಲ್, ಕಾರ್ಯದರ್ಶಿ ಸಿದ್ದರಾಮಪ್ಪ, ಮುಖಂಡರಾದ ಹೆಚ್.ಚಂದ್ರಪ್ಪ, ಎಂ.ಅಶೋಕ್, ಹೆಚ್.ಬಸವರಾಜಪ್ಪ, ಡಿ.ಕೇಶವಮೂರ್ತಿ, ರಾಜಪ್ಪ, ಅಂಜಿನಪ್ಪ, ಹಾಲೇಶ್, ತಿಮ್ಮಪ್ಪ, ನಾಗಾಭೋವಿ, ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸಮಾಜದ ಮುಖಂಡರಾದ ಬಿ.ಸಿ.ಸಣ್ಣಪ್ಪನವರ್, ಕೊಟ್ಟೂರೇಶ್, ಶಂಕರ್ ಪಾಟಿಲ್, ಶಿವಲಿಂಗಮೂರ್ತಿ, ಗಂಗಾಮತಸ್ತ ಬೆಸ್ತರ ಸಮಾಜದ ಜಿಲ್ಲಾ ಕಾರ್ಯದರ್ಶಿ ಉಮೇಶ್, ಪ್ರಕಾಶ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ, ಜವಳಿ ಇಲಾಖೆಯ ಸಪಾರೆ ಶ್ರೀನಿವಾಸ್, ಮೀನುಗಾರಿಕೆ ಇಲಾಖೆಯ ಡಿಡಿ ಉಮೇಶ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶಿವಾನಂದ್ ಕಂಬಾರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.