ಚಳ್ಳಕೆರೆ
ರಾಷ್ಟ್ರದಲ್ಲಿ ಕಾರ್ಮಿಕ ವಿರೋಧ ನೀತಿಯನ್ನು ಅನುಸರಿಸುವ ಮೂಲಕ ಪ್ರಧಾನಿ ನರೇಂದ್ರಮೋದಿ ಸಮಸ್ತ ಕಾರ್ಮಿಕ ಸಮೂಹದ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ರಾಷ್ಟ್ರದ ಇಂದಿನ ಎಲ್ಲಾ ಆರ್ಥಿಕ ಸುಸ್ಥಿತಿಗೆ ಕಾರ್ಮಿಕರ ಪರಿಶ್ರಮವೇ ಕಾರಣವಾಗಿದ್ದು, ಕಾರ್ಮಿಕರಿಗೆ ಹೆಚ್ಚು ಸೌಲಭ್ಯಗಳನ್ನು ನೀಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿವೆ. ನರೇಂದ್ರಮೋದಿಯವರ ಕಾರ್ಮಿಕ ವಿರೋಧಿ ನೀತಿ ಕಾರ್ಮಿಕರನ್ನು ಕಗ್ಗತ್ತಲಲ್ಲಿಟ್ಟಿದೆ ಎಂದು ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಸಿ.ವೈ.ಶಿವರುದ್ರಪ್ಪ ಆರೋಪಿಸಿದ್ದಾರೆ.
ಅವರು, ಬುಧವಾರ ಇಲ್ಲಿನ ನೆಹರೂ ಸರ್ಕಲ್ನಲ್ಲಿ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಹಮ್ಮಿಕೊಂಡಿದ್ದ ಮುಷ್ಕರದಲ್ಲಿ ಪಾಲ್ಗೊಂಡು ಮಾತನಾಡಿದರು. ಸುಮಾರು 400ಕ್ಕೂ ಹೆಚ್ಚು ಕಾರ್ಮಿಕರು ವಿಶೇಷವಾಗಿ ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರು ಮಾನವ ಸರಪಳಿ ನಿರ್ಮಿಸಿ ನರೇಂದ್ರಮೋದಿಯವರ ವಿರುದ್ದ ಘೋಷಣೆಗಳನ್ನು ಕೂಗಿದರು. ಪ್ರಧಾನ ಮಂತ್ರಿ ನರೇಂದ್ರಮೋದಿ ಪ್ರತಿಯೊಂದು ಹಂತದಲ್ಲೂ ಶ್ರೀಮಂತ ವರ್ಗದ ಪರವಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ಧಾರೆ. ಮೋದಿಯವರ ಆಡಳಿತ ಕಾಲದಲ್ಲಿ ಜಾರಿಯಾದ ಎಲ್ಲಾ ಕಾನೂನುಗಳು ಶ್ರೀಮಂತರ ಪರವಾಗಿವೆ. ಬಡ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕೇವಲ ಹಣವುಳ್ಳ ವ್ಯಕ್ತಿಗಳ ಪರವಾಗಿ ಕೇಂದ್ರ ಸರ್ಕಾರ ಆಡಳಿತ ನಡೆಸುತ್ತಿದೆ. ಮುಂಬರುವ ದಿನಗಳಲ್ಲಿ ಮೋದಿಯವರಿಗೆ ತಕ್ಕ ಪಾಠಕಲಿಸಲು ಕಾರ್ಮಿಕ ವರ್ಗ ಸನ್ನದ್ದವಾಗಿದೆ ಎಂದರು.
ಅಖಿಲ ಭಾರತ ಕಿಸಾನ್ ಸಭಾದ ರಾಜ್ಯಾಧ್ಯಕ್ಷ ದೊಡ್ಡ ಉಳ್ಳಾರ್ತಿ ಕರಿಯಣ್ಣ ಮಾತನಾಡಿ, ಕಳೆದ ಹಲವಾರು ದಶಕಗಳಿಂದ ಕಾರ್ಮಿಕರು ಮೂಲಭೂತ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ನಡೆಸುತ್ತಿದ್ಧಾರೆ. ಕಾರ್ಮಿಕರ ಸಾಮಾಜಿಕ ಭದ್ರತೆ, ಪಿಂಚಣಿ ಯೋಜನೆ, ಸಮಾನ ಕೆಲಸಕ್ಕೆ ಸಮಾನ ವೇತನ, ಕಾರ್ಮಿಕ ಕಲ್ಯಾಣ ನಿಧಿಗೆ ಹೆಚ್ಚಿನ ಆರ್ಥಿಕ ಶಕ್ತಿ ಮುಂತಾದ ಬೇಡಿಕೆಗಳನ್ನು ಈಡೇರಿಸುವಂತೆ ಎಐಟಿಯುಸಿ ನೇತೃತ್ವದಲ್ಲಿ ಈ ಪ್ರತಿಭಟನೆ ಹಮ್ಮಿಕೊಂಡಿದ್ದು, ಪ್ರಧಾನ ಮಂತ್ರಿ ನರೇಂದ್ರಮೋದಿಯವರು ಕಾರ್ಮಿಕರ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಮೂಲಕ ಕಾರ್ಮಿಕರ ಬದುಕಿಗೆ ಹೊಸ ಶಕ್ತಿ ತುಂಬಬೇಕೆಂದರು.
ಈ ಸಂದರ್ಭದಲ್ಲಿ ಎಐಟಿಯುಸಿ ತಾಲ್ಲೂಕು ಅದ್ಯಕ್ಷ ಬಿ.ತಿಪ್ಪೇರುದ್ರಪ್ಪ, ಉಪಾಧ್ಯಕ್ಷ ಪಿ.ಒ.ಬಸವರಾಜು, ಸುರೇಶ್ಬಾಬು, ಬಿ.ಬಸವರಾಜು, ಜಯಲಕ್ಷ್ಮಿ, ಸರೋಜಮ್ಮ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.