ಬೆಂಗಳೂರು :
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಪತನಗೊಳಿಸಲು ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಡಿಸಿಎಂ ಪರಮೇಶ್ವರ್ ಇಂದು ಕಾಂಗ್ರೆಸ್ ಸಚಿವರ ತುರ್ತು ಸಭೆ ಕರೆದಿದ್ದಾರೆ.
ಉಪ ಮುಖ್ಯ ಮಂತ್ರಿ ಡಾ.ಜಿ. ಪರಮೇಶ್ವರ್ ಅವರು ಬೆಂಗಳೂರಿನ ಕಾಂಗ್ರೆಸ್ ನ ಸಚಿವರು, ಶಾಸಕರು ಮತ್ತು ನಾಯಕರುಗಳಿಗೆ ಖಾಸಗಿ ಹೋಟೆಲ್ ಒಂದರಲ್ಲಿ ಬೆಳಗ್ಗಿನ ಉಪಾಹಾರಕ್ಕೆ ಕರೆದಿದ್ದಾರೆ. ಆ ಮೂಲಕ ಬಿಜೆಪಿಯ ಆಪರೇಷನ್ ಕಮಲಕ್ಕೆ ಕಾಂಗ್ರೆಸ್ ಪ್ರತಿ ತಂತ್ರ ರೂಪಿಸಿದೆ ಎಂದು ತಿಳಿದು ಬಂದಿದೆ.
ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವರಾದ ತುಕಾರಾಂ, ಪುಟ್ಟರಂಗ ಶೆಟ್ಟಿ, ಪರಮೇಶ್ವರ್ ನಾಯ್ಕ್ ಪ್ರಿಯಾಂಕ್ ಖರ್ಗೆ ಆಗಮಿಸಿದ್ದಾರೆ. ಸಭೆಯಲ್ಲಿ ಅಸಮಾಧಾನಗೊಂಡಿರುವ ಕೈ ಶಾಸಕರನ್ನು ಮನವೊಲಿಸುವ ಪ್ರಯತ್ನ ಮಾಡಲಾಗುವುದು ಎನ್ನಲಾಗುತ್ತಿದೆ.
ಇನ್ನು ಕಾಂಗ್ರೆಸ್ ನ ಅಸಮಾಧಾನಿತ ಶಾಸಕರನ್ನು ಸಿದ್ದರಾಮಯ್ಯ, ಪರಮೇಶ್ವರ್, ದಿನೇಶ್ ಗುಂಡೂರಾವ್ ಮತ್ತು ಸಚಿವ ಡಿ.ಕೆ. ಶಿವಕುಮಾರ್ ಸಂಪರ್ಕಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ ಕೆಲ ಶಾಸಕರು ದೂರವಾಣಿ ಸಂಪರ್ಕಕ್ಕೂ ಸಿಗುತ್ತಿಲ್ಲ ಮತ್ತು ಬಿಜೆಪಿ ಸಂಪರ್ಕದಲ್ಲಿರುವವರ ನಿಖರ ಮಾಹಿತಿ ಲಭ್ಯವಾಗುತ್ತಿಲ್ಲ ಎಂದು ತಿಳಿದು ಬಂದಿದೆ.
ಬಿಜೆಪಿಯ ತಂತ್ರವನ್ನು ವಿಫಲಗೊಳಿಸಲು ಕಾಂಗ್ರೆಸ್ ನಾಯಕರು ಒಗ್ಗಟ್ಟಿನಿಂದ ತಂತ್ರ ರೂಪಿಸುವುದು ಡಿಸಿಎಂ ಏರ್ಪಡಿಸಿರುವ ಉಪಾಹಾರ ಕೂಟದ ಪ್ರಮುಖ ಉದ್ದೇಶಕ್ಕಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ