ಚಿತ್ರದುರ್ಗ:
ಇದೇ ತಿಂಗಳ ಹದಿನೇಳರಂದು ಕರ್ನಾಟಕ ಆದಿಜಾಂಬವ ಅಭಿವೃದ್ದಿ ನಿಗಮ ಲೋಕಾರ್ಪಣೆಗೊಳ್ಳುತ್ತಿರುವುದನ್ನು ಅಖಿಲ ಕರ್ನಾಟಕ ಆದಿಜಾಂಬವ ವೇದಿಕೆ ಹಾಗೂ ಜಿಲ್ಲಾ ಮಾದಿಗ ಮಹಾಸಭಾ ವತಿಯಿಂದ ಸ್ವಾಗತಿಸಲಾಯಿತು.
ಅಖಿಲ ಕರ್ನಾಟಕ ಆದಿಜಾಂಬವ ವೇದಿಕೆ ಜಿಲ್ಲಾಧ್ಯಕ್ಷ ಸಿ.ಹೆಚ್.ಮಂಜುನಾಥ್ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಜ.17 ರಂದು ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬೆಂಗಳೂರಿನಲ್ಲಿ ಕರ್ನಾಟಕ ಆದಿಜಾಂಬವ ಅಭಿವೃದ್ದಿ ನಿಗಮ ಉದ್ಘಾಟಿಸುತ್ತಿರುವುದು ನಮಗೆ ಅತ್ಯಂತ ಸಂತೋಷವಾಗಿದೆ. ಇದಕ್ಕೆ ಹಿಂದಿನ ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯರವರ ಶ್ರಮ ಅಡಗಿದೆ. ಅನೇಕ ವರ್ಷಗಳ ಹಿಂದೆಯೇ ಆದಿಜಾಂಬವ ಅಭಿವೃದ್ದಿ ನಿಗಮ ಸ್ಥಾಪನೆಯಾಗಬೇಕಿತ್ತು. ಕೆಲವರ ಅಡಚಣೆಯಿಂದ ತಡವಾಯಿತು ಎಂದು ಹೇಳಿದರು.
ಮಾದಿಗ ಒಲೆಯ ಸೇರಿದಂತೆ ತಳಸಮುದಾಯದ ಹದಿನೈದು ಜಾತಿಗಳಿಗೆ ಆದಿಜಾಂಬವ ಅಭಿವೃದ್ದಿ ನಿಗಮದಿಂದ ಅನುಕೂಲವಾಗಲಿದೆ. ಆದಿಜಾಂಬವ ಎಂದು ನಾಮಕರಣ ಮಾಡಿರುವುದು ಮಾದಿಗ ಸಮುದಾಯಕ್ಕೆ ಹರ್ಷವನ್ನುಂಟು ಮಾಡಿದೆ. ಕೆಲವು ವಿರೋಧಿಗಳು ಇದ್ದೇ ಇರುತ್ತಾರೆ ಏನು ಮಾಡಲು ಆಗುವುದಿಲ್ಲ ಎಂದರು
ನ್ಯಾಯವಾದಿ ಬೀಸ್ನಳ್ಳಿ ಜಯಣ್ಣ ಮಾತನಾಡಿ 1976 ರಲ್ಲಿ ಮುಖ್ಯಮಂತ್ರಿಯಾಗಿದ್ದ ಡಿ.ದೇವರಾಜ್‍ಅರಸ್‍ರವರು ಬೇರೆ ಬೇರೆ ಜಾತಿಗಳನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಿದ್ದರಿಂದ ಮೀಸಲಾತಿ ತಪ್ಪಿತು. ಈಗ ಕರ್ನಾಟಕ ಆದಿಜಾಂಬವ ಅಭಿವೃದ್ದಿ ನಿಗಮದಿಂದ ಮಾದಿಗರು ಮತ್ತು ಒಲೆಯರು ಸೇರಿ ಹದಿನಾರು ಜಾತಿಗಳಿಗೆ ಸರ್ಕಾರದ ಸೌಲಭ್ಯ ಸಿಗಲಿದೆ. ಮಾಜಿ ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯರವರ ಹೋರಾಟದ ಫಲವಾಗಿ ಆದಿಜಾಂಬವ ಅಭಿವೃದ್ದಿ ನಿಗಮ ಸ್ಥಾಪನೆಯಾಗುತ್ತಿದೆ.
ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ತಳಸಮುದಾಯದ ಮಾದಿಗ, ಮೋಚಿ, ಡೋರ, ದಕ್ಕಲಿಗ ಇನ್ನು ಅತಿ ಚಿಕ್ಕ ಹಾಗೂ ಅಸ್ಪಶ್ಯ ಸಮಾಜದ ಒಳಿತಿಗಾಗಿ ಆದಿಜಾಂಬವ ಅಭಿವೃದ್ದಿ ನಿಗಮ ಲೋಕಾರ್ಪಣೆ ಮಾಡುತ್ತಿರುವುದು ನಿಜಕ್ಕೂ ಸಂತಸದ ಸಂಗತಿ. ಹೆಚ್.ಆಂಜನೇಯರವರಿಂದ ಹೆಚ್ಚು ಅನುಕೂಲ ಪಡೆದವರು ಆದಿಜಾಂಬವ ಅಭಿವೃದ್ದಿ ನಿಗಮ ಸ್ಥಾಪನೆಗೆ ವಿರೋಧಿಸುತ್ತಿದ್ದಾರೆ ಎಂದು ವಿರೋಧಿಗಳ ಟೀಕೆಗಳಿಗೆ ತಿರುಗೇಟು ನೀಡಿದರು.
ನಗರಸಭೆ ಸದಸ್ಯ ಅಂಗಡಿ ಮಂಜಣ್ಣ, ಎನ್.ಮಲ್ಲಿಕಾರ್ಜುನ್, ತಿಪ್ಪೇಸ್ವಾಮಿ, ಡಿ.ಜಯಪ್ಪ, ಎಂ.ರಮೇಶ್, ರಘು, ಶಿವಕುಮಾರ್, ಪ್ರವೀಣ್ ಇನ್ನು ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
