ಬೆಂಗಳೂರು
ಪಕ್ಷೇತರ ಶಾಸಕರಾದ ಆರ್.ಶಂಕರ್, ಎನ್.ನಾಗೇಶ್ ಬೆಂಬಲ ಹಿಂಪಡೆದಿದ್ದರಿಂದ ಮೈತ್ರಿ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ. ಬಿಜೆಪಿಗೆ ಬಹುಮತ ಸಿಗದಂತೆ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್-ಜೆಡಿಎಸ್ ಸಕಲ ಪ್ರಯತ್ನ ನಡೆಸುತ್ತಿದ್ದು, ಎರಡೂ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ.
ಹೈಕಮಾಂಡ್ ಸೂಚನೆ ಮೇರೆಗೆ ಬೆಂಗಳೂರಿನಲ್ಲಿ ಮೊಕ್ಕಾಂ ಹೂಡಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಪಕ್ಷದ ಸಚಿವರು , ಶಾಸಕರು ಹಾಗೂ ಮುಖಂಡರ ಜೊತೆ ಸರಣಿ ಸಭೆಗಳನ್ನು ನಡೆಸಿದರು.
ಕಾಂಗ್ರೆಸ್ ಜೊತೆಗೆ ಜೆಡಿಎಸ್ ಶಾಸಕರನ್ನೂ ಸಹ ಬಿಜೆಪಿ, ತನ್ನತ್ತ ಸೆಳೆದುಕೊಳ್ಳಲು ಕಸರತ್ತು ಆರಂಭಿಸಿರುವುದಿರಂದ ಎರಡೂ ಪಕ್ಷದ ಶಾಸಕರ ರಕ್ಷಣೆ ಮಾಡುವ ಅನಿವಾರ್ಯತೆ ತಲೆದೋರಿದೆ. ಹೀಗಾಗಿ ಶಾಸಕರನ್ನು ಹೇಗೆ ರಕ್ಷಿಸಬೇಕು. ಯಾರೆಲ್ಲ ಬಿಜೆಪಿಯತ್ತ ವಾಲುತ್ತಿದ್ದಾರೆ ಹಾಗೂ ಮುಂದಿನ ರಾಜಕೀಯ ಪರಿಸ್ಥಿತಿ ಏನಾಗಬಹುದೆಂಬ ಲೆಕ್ಕಾಚಾರವೂ ಸೇರಿದಂತೆ ಶಾಸಕರ ಚಟುವಟಿಕೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಅಲ್ಲದೇ ಆಪರೇಷನ್ ಬಿಜೆಪಿಗೆ ಬದಲಾಗಿ ಬಿಜೆಪಿ ಶಾಸಕರನ್ನು ಕಾಂಗ್ರೆಸಿಗೆ ಕರೆತರುವ ಬಗ್ಗೆಯೂ ಕಾರ್ಯತಂತ್ರ ರೂಪಿಸುವ ಚರ್ಚಿಸಲಾಗಿದ್ದು, ಈ ಬಗ್ಗೆ ಸಚಿವ ಡಿ.ಕೆ.ಶಿವಕುಮಾರ್ ಸಭೆಯಲ್ಲಿ ತಮ್ಮ ರಾಜಕೀಯ ತಂತ್ರವನ್ನು ವಿವರಿಸಿದರು ಎನ್ನಲಾಗಿದೆ.
ಆಪರೇಷನ್ ಕಮಲಕ್ಕೆ ಒಳಗಾಗುತ್ತಾರೆ ಎನ್ನಲಾದ ಶಾಸಕ ಆನಂದ್ ಸಿಂಗ್ ಅವರನ್ನು ಸಭೆಗೆ ಕರೆಸಲಾಯಿತು. ಬಿಜೆಪಿಯ ನಡೆಯ ಬಗ್ಗೆ ಮತ್ತು ಹಿಂದಿನ ತಮ್ಮ ಅನುಭವದ ಬಗ್ಗೆ ಆನಂದ್ ಸಿಂಗ್ ಅವರು ಸಭೆಯಲ್ಲಿ ಮಾಹಿತಿಯನ್ನು ಬಿಚ್ಚಿಟ್ಟರು.
ಆಪರೇಷನ್ ಕಮಲಕ್ಕೆ ಸದ್ಯ ನಾಲ್ವರು ಶಾಸಕರು ಒಳಗಾಗಿದ್ದಾರೆ. ಸರ್ಕಾರದಿಂದ ಮುನಿಸಿಕೊಂಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಿಜೆಪಿಯತ್ತ ವಾಲಿದ್ದು ಸರ್ಕಾರವನ್ನು ಪತನಗೊಳಿಸಲು ಬಿಜೆಪಿಗೆ ಸಹಕರಿಸುತ್ತಿದ್ದಾರೆ. ಶಾಸಕರಾದ ನಾಗೇಂದ್ರ, ಉಮೇಶ್ ಜಾಧವ್, ಮಹೇಶ್ ಕುಮಟಳ್ಳಿ, ಕಂಪ್ಲಿ ಗಣೇಶ್, ಭೀಮಾನಾಯಕ್, ಪ್ರತಾಪ್ ಗೌಡ ಪಾಟೀಲ್, ಬಸವರಾಜ ದದ್ದಲ್, ಶಿವರಾಮ್ ಹೆಬ್ಬಾರ್, ಸಂಗಮೇಶ್, ಬಿ.ಸಿ.ಪಾಟೀಲ್, ಸುಧಾಕರ್ ಅವರನ್ನು ಬಿಜೆಪಿಗೆ ಕರೆದುಕೊಂಡು ಬರಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ವೇಣುಗೋಪಾಲ್ ಮುಂದೆ ಆನಂದ್ ಸಿಂಗ್ ಬಿಚ್ಚಿಟ್ಟರು ಎನ್ನಲಾಗಿದೆ.
ಅಲ್ಲದೇ ಜೆಡಿಎಸ್ ಶಾಸಕರಾದ ಸತ್ಯನಾರಾಯಣ, ದೇವಾನಂದ್ ಚೌಹಾಣ್ ಅವರಿಗೆ ಬಿಜೆಪಿ ನಾಯಕರು ಕರೆ ಮಾಡುತ್ತಿದ್ದಾರೆ ಎಂದು ಸಭೆಯಲ್ಲಿ ಆನಂದ್ ಸಿಂಗ್ ಪ್ರಸ್ತಾಪಿಸಿದರು.
ಪ್ರಸ್ತುತ ರಾಜಕೀಯ ಬೆಳವಣಿಗೆಗಳನ್ನು ನೋಡಿಕೊಂಡು ಬಿಜೆಪಿಯ ಆಮಿಷಕ್ಕೆ ಶಾಸಕರು ಒಳಗಾಗದಂತೆ ತಡೆಯಲು ಸಭೆಯಲ್ಲಿ ತಂತ್ರ ರೂಪಿಸಲಾಯಿತು. ಶಾಸಕರ ರಕ್ಷಣೆಯ ಜವಾಬ್ದಾರಿಯನ್ನು ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ವಹಿಸುವ ಬಗ್ಗೆ ಚರ್ಚೆ ನಡೆಸಲಾಗಿದ್ದು, ಪ್ರಸ್ತುತ ಬೆಳವಣಿಗೆಗಳನ್ನು ನೋಡಿಕೊಂಡು ನಾಳೆ ಸಂಜೆ ಶಾಸಕರನ್ನು ರೆಸಾರ್ಟಿಗೆ ಕರೆದುಕೊಂಡು ಹೋಗಲು ಚಿಂತನೆ ನಡೆಸಲಾಗಿದೆ.
ನಾಳೆ ಎಲ್ಲಾ ಶಾಸಕರನ್ನು ಬೆಂಗಳೂರಿಗೆ ಕರೆಸುವಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ವೇಣುಗೋಪಾಲ್ ನಿರ್ದೇಶಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇತ್ತ ಸಚಿವ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಪಕ್ಷೇತರ ಶಾಸಕರು ಬೆಂಬಲ ವಾಪಸು ಪಡೆಯುತ್ತಿದ್ದಂತೆಯೇ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರನ್ನು ಭೇಟಿಯಾಗಿ ಅವರಿಂದ ಸಲಹೆ ಪಡೆದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








