ಕೃಷಿಯನ್ನು ಲಾಭದಾಯಕವಾಗಿಸಲು ಸರ್ಕಾರ ಪ್ರಯತ್ನಿಸುತ್ತಿದೆ : ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು

      ರೈತರ ಸಾಲ ಮನ್ನಾ ಮಾಡಿದ ತಕ್ಷಣ ರೈತರ ಎಲ್ಲಾ ಸಮಸ್ಯೆ ಪರಿಹಾರವಾಗುವುದಿಲ್ಲ. ರೈತರನ್ನು ಸಾಲ ಮುಕ್ತಗೊಳಿಸಿದ ಬಳಿಕ ಅವರಿಗೆ ಆರ್ಥಿಕ ಶಕ್ತಿ ತುಂಬಲು ಇಸ್ರೇಲ್ ಕೃಷಿ ಪದ್ಧತಿ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಕೃಷಿಯನ್ನು ಲಾಭದಾಯಕವಾಗಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

       ರಾಜ್ಯ ಸರ್ಕಾರದ ಕೃಷಿ ಇಲಾಖೆ ವತಿಯಿಂದ ನಗರದ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಏರ್ಪಡಿಸಿರುವ “ಸಾವಯವ ಮತ್ತು ಸಿರಿಧಾನ್ಯಗಳು-2019 ಅಂತಾರಾಷ್ಟ್ರೀಯ ಮೇಳ”ಕ್ಕೆ ನವಧಾನ್ಯಗಳನ್ನು ಕಣಜಗಳಿಗೆ ತುಂಬುವ ಮೂಲಕ ಅವರು ಚಾಲನೆ ನೀಡಿ, ಮಾತನಾಡಿದರು.

       ಕೃಷಿ ಕ್ಷೇತ್ರದಲ್ಲಿ ಹಲವು ಬದಲಾವಣೆಗಳನ್ನು ತರಲು ಚಿಂತಿಸಲಾಗಿದೆ. ಯಾವ ಪ್ರದೇಶದಲ್ಲಿ ಯಾವ ಬೆಳೆಗಳನ್ನು ಬೆಳೆದರೆ ಸೂಕ್ತ ಎಂಬುದನ್ನು ತಿಳಿದುಕೊಂಡು ರೈತರಿಗೆ ಈ ಬಗ್ಗೆ ಅರಿವು ಮೂಡಿಸಲು ನೀತಿ ರೂಪಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

       ಕೃಷಿ ಕ್ಷೇತ್ರದ ಬಗ್ಗೆ ನಿರಾಸೆ ಮೂಡುತ್ತಿರುವ ಈ ಸಂದರ್ಭದಲ್ಲಿ ಸಿರಿಧಾನ್ಯ ಬೆಳೆಗೆ ಪ್ರೋತ್ಸಾಹ ನೀಡುವ ಮೂಲಕ ರೈತರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವುದು ಎಲ್ಲರ ಕರ್ತವ್ಯ. ಸರ್ಕಾರ ಕೂಡ ಸಿರಿಧಾನ್ಯ ಮತ್ತು ಸಾವಯವಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಶಾಲಾ ಮಕ್ಕಳಿಗೆ ವಿತರಿಸುತ್ತಿರುವ ಮಧ್ಯಾಹ್ನದ ಬಿಸಿಯೂಟ ಮತ್ತು ಇಂದಿರಾ ಕ್ಯಾಂಟೀನ್‍ನಲ್ಲಿ ಸಿರಿಧಾನ್ಯ ಆಹಾರ ನೀಡುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

       ಕಡಿಮೆ ವೆಚ್ಚದಲ್ಲಿ ಬೆಳೆಯುವ ಸಿರಿಧಾನ್ಯ ಆರೋಗ್ಯಕ್ಕೂ ಉತ್ತಮ. ಇದು ಭವಿಷ್ಯದ ಆಹಾರವೂ ಆಗಲಿದೆ ಎಂದು ಹೇಳಿದ ಅವರು, ಸಿರಿಧಾನ್ಯದ ಬಗ್ಗೆ ಸಾರ್ವಜನಿಕರಲ್ಲಿ ಇನ್ನಷ್ಟು ಅರಿವು ಮೂಡಬೇಕಾಗಿದೆ ಎಂದು ಹೇಳಿದರು.

      ಕೃಷಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ಮಾತನಾಡಿ, ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಕಲ್ಪಿಸಲು ಹಾಗೂ ಸಿರಿಧಾನ್ಯಗಳಿಗೆ ಉತ್ತೇಜನ ನೀಡಲು ಅಂತಾರಾಷ್ಟ್ರೀಯ ವಾಣಿಜ್ಯ ಮೇಳ ಏರ್ಪಡಿಸಲಾಗಿದೆ. ಅತಿಯಾದ ಕ್ರಿಮಿನಾಶಕಗಳನ್ನು ಬಳಕೆ ಮಾಡುತ್ತಿರುವುದರಿಂದ ಹೆಚ್ಚಿನ ರೋಗಗಳು ಬರುತ್ತಿವೆ. ಮಕ್ಕಳು ಸಣ್ಣ ವಯಸ್ಸಿನಲ್ಲಿಯೇ ಹಲವು ಖಾಯಿಲೆಗಳಿಗೆ ತುತ್ತಾಗುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ಈ ನಿಟ್ಟಿನಲ್ಲಿ ಸಾವಯವ ಕೃಷಿಗೆ ಹೆಚ್ಚು ಪ್ರೋತ್ಸಾಹ ನೀಡುವ ಮೂಲಕ ಜನರನ್ನು ರೋಗ ಮುಕ್ತರನ್ನಾಗಿ ಮಾಡಲು ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದರು

      ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಸಮಾಜ, ರೈತರು ಮತ್ತು ಗ್ರಾಹಕರ ಅನೇಕ ಸಮಸ್ಯೆಗಳಿಗೆ ಸಾವಯವ ಮತ್ತು ಸಿರಿಧಾನ್ಯದಲ್ಲಿ ಪರಿಹಾರವಿದೆ. ಸಿರಿಧಾನ್ಯದಿಂದ ಸುಸ್ಥಿರ ಅಭಿವೃದ್ಧಿ, ಪರಿಸರ ಸಂರಕ್ಷಣೆ, ಉದ್ಯೋಗ ಸೃಷ್ಟಿ, ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.

       ಸಿರಿಧಾನ್ಯ ಎಂಬುದು 21ನೇ ಶತಮಾನದ ಪ್ರಜ್ಞಾವಂತರ ಆಹಾರವಾಗಿದೆ. ಸಿರಿಧಾನ್ಯಗಳ ಉಗಮ ಸ್ಥಾನ ಕರ್ನಾಟಕ ರಾಜ್ಯವಾಗಿದ್ದು, ರಾಜ್ಯದ ಮಾದರಿಯನ್ನು ಇತರ ರಾಜ್ಯಗಳು ಅನುಸರಿಸಲು ಮುಂದಾಗಿವೆ. ವಿಶ್ವಸಂಸ್ಥೆ ಕೂಡ ಸಿರಿಧಾನ್ಯಕ್ಕೆ ಮಾನ್ಯತೆ ನೀಡಿದ್ದು, 2023ನೇ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಆಚರಿಸಲು ಮುಂದಾಗಿದೆ ಎಂದು ಹೇಳಿದರು.

     ಪಶುಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ ಮಾತನಾಡಿ, ಭೂಮಿಯ ಫಲವತ್ತತೆ ರಕ್ಷಣೆ ಮತ್ತು ಜನರ ಆರೋಗ್ಯ ರಕ್ಷಣೆಗೆ ಸಿರಿಧಾನ್ಯಕ್ಕಿಂತ ಉಪಯುಕ್ತವಾದುದು ಬೇರೊಂದಿಲ್ಲ. ಸಿರಿಧಾನ್ಯದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ನಡೆಯಬೇಕು ಎಂದು ಹೇಳಿದರು.

       ಕಾರ್ಯಕ್ರಮದಲ್ಲಿ ತೋಟಗಾರಿಕಾ ಸಚಿವ ಸಿ.ಎಸ್.ಮನಗೂಳಿ, ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಉಪ ಮೇಯರ್ ಭದ್ರೇಗೌಡ, ಕೇರಳದ ಕೃಷಿ ಸಚಿವ ಸುನೀಲ್ ಕುಮಾರ್, ವಿಧಾನ ಪರಿಷತ್ ಸದಸ್ಯರಾದ ಎಚ್.ಎಂ.ರೇವಣ್ಣ, ರಮೇಶ್ ಗೌಡ, ಎ.ದೇವೇಗೌಡ, ಇಲಾಖೆಯ ಕಾರ್ಯದರ್ಶಿ ಮಹೇಶ್ವರ್ ರಾವ್, ಡಾ.ಅಶೋಕ್ ದಳವಾಯಿ ಮತ್ತಿತರರು ಪಾಲ್ಗೊಂಡಿದ್ದರು.ಇದೇ ವೇಳೆ ಮುಖ್ಯಮಂತ್ರಿ ಸಾಂಕೇತಿಕವಾಗಿ ಕೆಲವು ತಂತ್ರಾಂಶ ಆಧಾರಿತ ರೈತರಿಗೆ ಗುರುತಿನ ಚೀಟಿ ವಿತರಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link