ಒತ್ತಡ ಮುಕ್ತ ಜೀವನಕ್ಕೆ ಸಹಜ ಶಿವಯೋಗ ಸಹಕಾರಿ

ದಾವಣಗೆರೆ:

           ಒತ್ತಡ ಮುಕ್ತ ಜೀವನ ನಡೆಸಲು ಸಹಜ ಶಿವಯೋಗ, ಸತ್ಸಂಗ, ಧ್ಯಾನ, ಪ್ರಾರ್ಥನೆಯ ಅತ್ಯವಶ್ಯವಾಗಿದೆ ಎಂದು ಚಿತ್ರದುರ್ಗ ಮುರುಘಾಮಠದ ಡಾ.ಶ್ರೀಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.

          ನಗರದ ಶಿವಯೋಗಾಶ್ರಮದಲ್ಲಿ ಲಿಂ.ಶ್ರೀಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳ 62ನೇ ಸ್ಮರಣೋತ್ಸವ, ಶರಣ ಸಂಸ್ಕತಿ ಉತ್ಸವದ ಅಂಗವಾಗಿ ಶುಕ್ರವಾರ ನಡೆದ ಸಹಜ ಶಿವಯೋಗ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಆಧುನಿಕ ಭಾರತದಲ್ಲಿ ಪ್ರತಿಯೊಬ್ಬರೂ ಒಂದಿಲ್ಲೊಂದು ರೀತಿಯ ಒತ್ತಡಕ್ಕೆ ತುತ್ತಾಗುತ್ತಿದ್ದಾರೆ. ಇದರಿಂದ ಹೊರ ಬಂದು, ಒತ್ತಡ ಮುಕ್ತ ಜೀವ ನಡೆಸಲು ಸತ್ಸ್‍ಂಗದ ಅಗತ್ಯ ಇದೆ ಎಂದರು.

          ಒತ್ತಡ ಎಂಬುದು ಚಕ್ರವ್ಯೂಹವಿದ್ದಂತೆ, ಅದು ಜ್ಞಾನಿ-ಅಜ್ಞಾನಿ, ಬಡವ-ಬಲ್ಲಿದ, ಸನ್ಯಾಸಿ-ಸ್ವಾಮೀಜಿ ಸೇರಿದಂತೆ ಯಾರನ್ನೂ ಬಿಟ್ಟಿಲ್ಲ. ಎಲ್ಲರನ್ನೂ ಆವರಿಸಿಕೊಂಡಿದೆ. ಒತ್ತಡ ಎಂಬುದು ಚಿತೆ ಇದ್ದಂತೆ, ಇದರ ಬಿಸಿ ತಟ್ಟದವರು ಯಾರೂ ಇಲ್ಲ ಎಂದರು.

          ಒತ್ತಡ ಎಂಬುವುದು ಮನೋ-ದೈಹಿಕ ಸಮಸ್ಯೆಗಳ ಪಿತಾಮಹನಂತೆ ಕಂಡು ಬರುತ್ತಿದೆ. ನಿರಾಸೆ, ನಿರುತ್ಸಾಹ, ಬಿಪಿ, ಶುಗರ್ ಬಂದು, ಆತ್ಮಹತ್ಯೆಯಂತಹ ಯತ್ನಕ್ಕೂ ಮುಂದಾಗುವಂತೆ ಮಾಡುತ್ತದೆ. ಒತ್ತಡದಿಂದಾಗಿ ಭಯ, ವೈಫಲ್ಯತೆಯೂ ಮನುಷ್ಯನನ್ನು ಕಾಡುತ್ತವೆ ಎಂದ ಅವರು, ನಾವು ಸಾಧನೆ ಮಾಡಬೇಕೆಂದರೆ ಶಾಂತಿಯಿಂದ ಮಾತ್ರ ಸಾಧ್ಯ. ಶಾಂತಿ- ಸಹನೆ ನಮ್ಮ ಮನಸ್ಸಿನಲ್ಲಿ ಸ್ಥಾಪನೆ ಮಾಡಬೇಕು. ಇಂತಹ ಶಾಂತಿ-ಸಹನೆಯನ್ನು ಶರಣರು ತಮ್ಮ ಬದುಕಿನುದ್ದಕ್ಕೂ ಅನುಸರಿಸಿ, ಸಾಧನೆ ಮಾಡಿ ಉಜ್ವಲ ಸಮಾಜವನ್ನು ನಿರ್ಮಿಸಿದ್ದರು ಎಂದು ಸ್ಮರಿಸಿದರು.

         ಗುರುಮಠಕಲ್ ಖಾಸಾಮಠದ ಶ್ರೀಶಾಂತವೀರ ಸ್ವಾಮೀಜಿ ಮಾತನಾಡಿ, ವಚನಗಳ ಮೂಲಕ ಬಸವಾದಿ ಶರಣರು ಏಕದೇವೋಪಾಸನೆ ಮಹತ್ವ ಸಾರಿದ್ದರು. ಈ ಏಕದೇವೋಪಾಸನೆ ಸಹಜ ಶಿವಯೋಗಕ್ಕೆ ಹತ್ತಿರವಾಗಿದೆ. ಬದುಕಿನಲ್ಲಿ ಸಹಜವಾಗಿ ಇರುವಿಕೆಯನ್ನು ಸಹಜ ಶಿವಯೋಗ ಕಲಿಸುತ್ತದೆ. ಪ್ರಸ್ತುತ ಲಿಂಗಪೂಜೆ ಮಾಡುವ ಕೈಗಳಿಗೆ ಲಿಂಗಕೊಡುವ ಕೈಗಳು ಕಡಿಮೆಯಾಗಿವೆ. ಇಂತಹ ಸಂದರ್ಭದಲ್ಲಿ ದೇಶ-ವಿದೇಶಗಳಿಗೆ ಸಂಚರಿಸಿ ಲಕ್ಷಾಂತರ ಜನರಿಗೆ ಲಿಂಗದೀಕ್ಷೆ ನೀಡಿ, ಬಸವ ತತ್ವವನ್ನು ಸಾರಿದ ಕೀರ್ತಿ ಶ್ರೀ ಶಿವಮೂರ್ತಿ ಶರಣರಿಗೆ ಸಲ್ಲುತ್ತದೆ ಎಂದರು.

          ಚೆಕ್‍ಡ್ಯಾಂ ನಿರ್ಮಾತೃ, ಬಸವಶ್ರೀ ಪ್ರಶಸ್ತಿ ಪುರಸ್ಕತ ಕಾಮೇಗೌಡ ಮಾತನಾಡಿ, ಗುರುವಿನ ದಯೆಯಿಂದ ಅಸತ್ಯ, ಅಧರ್ಮ ಅಳಿಯುತ್ತದೆ. ಗುರುವಿನ ಪ್ರಾರ್ಥನೆ ಮಾಡುವುದರಿಂದ ಗೆಲುವು ನಮ್ಮದಾಗಲಿದೆ. ಅಲ್ಲದೆ, ಜಗತ್ತಿನ ಅಜ್ಞಾನವೂ ನಿವಾರಣೆ ಆಗಲಿದೆ ಎಂದು ಹೇಳಿದರು.

            ಖಜೂರಿಯ ಕೋರಣೇಶ್ವರ ಮಠದ ಶ್ರೀಮುರುಘೇಂದ್ರ ಕೋರಣೇಶ್ವರ ಸ್ವಾಮೀಜಿ, ಚನ್ನಗಿರಿ ವಿರಕ್ತಮಠದ ಶ್ರೀ ಜಯದೇವ ಸ್ವಾಮೀಜಿ, ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ, ಹಾವೇರಿ ಬಸವಕೇಂದ್ರದ ಮುರಿಗೆಪ್ಪ ಕಡೆಕೊಪ್ಪ, ಕೆ.ಮಹಮದ್ ಗೌಸ್‍ಪೀರ್ ಹಮದರ್ಸ್ ಮತ್ತಿತರರು ಉಪಸ್ಥಿತರಿದ್ದರು.ಸಹಜ ಶಿವಯೋಗಕ್ಕೂ ಮುನ್ನ ಚೆಕ್‍ಡ್ಯಾಂ ನಿರ್ಮಾತೃ, ಬಸವಶ್ರೀ ಪ್ರಶಸ್ತಿ ಪುರಸ್ಕತ ಕಾಮೇಗೌಡರು ಬಸವತತ್ವ ಧ್ವಜಾರೋಹಣ ನೆರವೇರಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link