ಬೆಂಗಳೂರು
ಗೋಡಂಬಿ ದ್ರಾಕ್ಷಿ ಇನ್ನಿತರ ಒಣಹಣ್ಣುಗಳ ವ್ಯಾಪಾರ ನಡೆಸುತ್ತಿದ್ದ ಉದ್ಯಮಿಯೊಬ್ಬರನ್ನು 100 ಕೋಟಿ ರೂ.ಸಾಲ ಕೊಡಿಸುವುದಾಗಿ ವಿಧಾನಸೌಧಕ್ಕೆ ಕರೆದೊಯ್ದು ನಂಬಿಸಿ ಪಂಚತಾರಾ ಹೊಟೇಲೊಂದರಲ್ಲಿ ಸ್ಟಾಂಪ್ ಡ್ಯೂಟಿಗಾಗಿ 1 ಕೋಟಿ 12 ಲಕ್ಷ ವಂಚನೆ ನಡೆಸಿ ಪರಾರಿಯಾಗಿರುವ ದ್ದ ದುಷ್ಕರ್ಮಿಗಳ ಬಂಧನಕ್ಕೆ ವಿಧಾನಸೌಧ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.
ತಮಿಳುನಾಡಿನ ಕಡಲೂರಿನ ಒಣಹಣ್ಣುಗಳ ಉದ್ಯಮ ನಡೆಸುತ್ತಿದ್ದ ರಮೇಶ್ ಅವರಿಂದ 1.12 ಕೋಟಿ ರೂ. ಹಣ ವಂಚನೆ ನಡೆಸಿರುವ ಸಂಬಂಧ ಮಧ್ಯವರ್ತಿಯಾಗಿದ್ದ ಬ್ಯಾಂಕ್ವೊಂದರ ಮಾಜಿ ಉದ್ಯೋಗಿ ಎಸ್.ಇಂದಿರಾ ಅವರು ನೀಡಿರುವ ದೂರು ದಾಖಲಿಸಿ ದುಷ್ಕರ್ಮಿಗಳ ಪತ್ತೆಗೆ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ.
ಹಣ ಕಳೆದುಕೊಂಡ ರಮೇಶ್ ಅವರಿಂದ ಮಾಹಿತಿ ಪಡೆದು ವಂಚನೆ ನಡೆಸಿರುವ ಆಂಧ್ರಪ್ರದೇಶದ ಇಳಮದಿರ, ಸುಂದರಂ, ಸೆಲ್ವಂ, ಅಜಯ್ ಮತ್ತು ಅವರ ತಂದೆ ಕೆ.ಕೆ. ಶೆಟ್ಟಿ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿ ಶೋಧ ನಡೆಸಲಾಗಿದೆ ಎಂದು ವಿಧಾನಸೌಧ ಪೆÇಲೀಸರು ತಿಳಿಸಿದ್ದಾರೆ.
ಸಾಲದ ಸಂಚು
ಬ್ಯಾಂಕ್ ಉದ್ಯೋಗವನ್ನು ತೊರೆದು ವಿಮಾ ಏಜೆಂಟ್ ಆಗಿದ್ದ ಇಂದಿರಾ ಅವರಿಗೆ ವಿಮಾ ಪಾಲಿಸಿ ಮಾಡಿಸುವಾಗ ಪರಿಚಯವಾಗಿದ್ದ ಉದ್ಯಮಿ ರಮೇಶ್ ಉದ್ಯಮಕ್ಕಾಗಿ 100 ಕೋಟಿ ರೂ. ಸಾಲ ಬೇಕಾಗಿದೆ ಎಂದು ಕೇಳಿದ್ದು ಇಂದಿರಾ ತಮಗೆ ಪರಿಚಯವಿದ್ದ ಇಳಮದಿರರನ್ನು ಸಂಪರ್ಕಿಸಿ ಸಾಲದ ವಿಚಾರ ತಿಳಿಸಿದ್ದರು.
ಇಳಮದಿರ ಸ್ನೇಹಿತರ ಮೂಲಕ ಸಾಲ ಕೊಡಿಸುವ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿ ತನ್ನ ಪರಿಚಯಸ್ಥರು ಎಂದು ಸುಂದರಂ, ಸೆಲ್ವಂ, ಅಜಯ್ ಮತ್ತು ಅವರ ತಂದೆ ಕೆ.ಕೆ. ಶೆಟ್ಟಿ ಎಂಬುವರನ್ನು ಉದ್ಯಮಿ ರಮೇಶ್ಗೆ ಪರಿಚಯ ಮಾಡಿಕೊಟ್ಟಿದ್ದನು ಕಡಿಮೆ ಬಡ್ಡಿಗೆ ಸಾಲ ಕೊಡಿಸುತ್ತೇವೆ ಎಂದು ಆರೋಪಿಗಳು ಹೇಳಿದ್ದರು. ಅದಕ್ಕಾಗಿ ಸ್ಟಾಂಪ್ ಶುಲ್ಕವಾಗಿ ಸಾಲದ ಮೊತ್ತದಲ್ಲಿ ಶೇ.1.12 ನೀಡಬೇಕಾಗುತ್ತದೆ ಎಂದು ಹೇಳಿ ರಮೇಶ್ ಅವರನ್ನು ಮಾತುಕತೆಗಾಗಿ ಕಳೆದ ಡಿ.20ರಂದು ವಿಧಾನಸೌಧದ ಒಂದನೇ ಮಹಡಿಗೆ ಕರೆಸಿಕೊಂಡಿದ್ದರು.
ಕೋಟಿ ವಂಚನೆ
ಬಳಿಕ ಎಂ.ಜಿ ರಸ್ತೆಯ ಒಬಿರಾಯ್ ಪಂಚತಾರಾ ಹೊಟೇಲ್ಗೆ ಕರೆದೊಯ್ದು 100 ರೂ 50 ರೂ. ಮತ್ತು 20 ರೂ. ಮೌಲ್ಯದ ತಲಾ 5 ಸ್ಟಾಂಪ್ ಪೇಪರ್ಗಳ ಮೇಲೆ ರಮೇಶ್ರಿಂದ ಸಹಿ ಮಾಡಿಸಿಕೊಂಡಿದ್ದರು.ರಮೇಶ್ ಕಡೆಯಿಂದ ಮರ್ಕೆಂಟೈಲ್ ಬ್ಯಾಂಕ್ನ 5 ಚೆಕ್ಗಳು ಮತ್ತು 6 ಭಾವಚಿತ್ರಗಳನ್ನು ಪಡೆದಿದ್ದರು. ಅಲ್ಲದೆ ಸಾಲ ಕೊಡುವುದಕ್ಕೆ ಮೊದಲು ಸ್ಟಾಂಪ್ ಡ್ಯೂಟಿ ಶುಲ್ಕವಾಗಿ ನನ್ನ ಮಗನಿಗೆ 1.12 ಕೋಟಿ ರೂ. ಕೊಡಿ ಎಂದು ಕೆ.ಕೆ ಶೆಟ್ಟಿ ಕೇಳಿದರು.
ಅದರಂತೆ ಹೊಟೇಲ್ನ ಪಕ್ಕದಲ್ಲಿರುವ ಪಾರ್ಕಿಂಗ್ ಸ್ಥಳದಲ್ಲಿ ಕೆ.ಕೆ ಶೆಟ್ಟಿ ಪುತ್ರ ಅಜಯ್ ಗೆ 1.12 ಕೋಟಿ ರೂ. ಕೊಡಲಾಗಿತ್ತು. ಬಳಿಕ ಎಲ್ಲರೂ ಸೇರಿ ಸಾಲದ ಹಣ ತರುವುದಾಗಿ ಹೇಳಿ ಅಲ್ಲಿಂದ ಹೋದವರು ಮರಳಿ ಬರಲಿಲ್ಲ. ಇತ್ತ ತಾವು ಕೊಟ್ಟ 1.12 ಕೋಟಿ ರೂ.ಗಳನ್ನೂ ವಾಪಸ್ ಕೊಡದೆ ವಂಚಿಸಿದ್ದಾರೆ ಎಂದು ಇಂದಿರಾ ದೂರಿನಲ್ಲಿ ಉಲ್ಲೇಖಿಸಿದ್ದು ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ