ಬೆಂಗಳೂರು
ಬೀಗ ಹಾಕಿದ ಮನೆಗಳಿಗೆ ಹಾಡುಹಗಲೇ ನುಗ್ಗಿ ಕಳವು ಮಾಡುತ್ತಿದ್ದ ಖತರ್ನಾಕ್ ಹಳೆಕಳ್ಳನನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸಿ 8 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಕುರುಬರಹಳ್ಳಿಯ ಮಂಜು ಅಲಿಯಾಸ್ ಪಾರಿವಾಳ ಮಂಜ (39) ಬಂಧಿತ ಆರೋಪಿಯಾಗಿದ್ದಾನೆ. ಹಳೆಕಳ್ಳನಾದ ಬಂಧಿತನಿಂದ 8 ಲಕ್ಷ ರೂ. ಮೌಲ್ಯದ 250 ಗ್ರಾಂ ಚಿನ್ನ, ಒಂದು ಕೆಜಿ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ.
ಹಳೆಕಳ್ಳನಾಗಿದ್ದ ಆರೋಪಿಯು ಹಿಂದೆ ಚಾಮರಾಜಪೇಟೆ, ಹುಳಿಮಾವು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮನೆಗಳವು ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದು, ಜೈಲು ಶಿಕ್ಷೆ ಅನುಭವಿಸಿ, 8 ತಿಂಗಳ ಹಿಂದೆ ಬಿಡುಗಡೆಯಾಗಿ ಬಂದಿದ್ದನು ಎಂದು ಡಿಸಿಪಿ ಚೇತನ್ ಸಿಂಗ್ ರಾಥೋರ್ ತಿಳಿಸಿದ್ದಾರೆ
ಮಹಾಲಕ್ಷ್ಮಿ ಲೇಔಟ್, ನಂದಿನಿ ಲೇಔಟ್, ಇನ್ನಿತರ ಕಡೆಗಳಲ್ಲಿ ಬೆಳಗಿನ ವೇಳೆ ತಳ್ಳುವ ಗಾಡಿಯಲ್ಲಿ ತರಕಾರಿ ಮಾರುತ್ತ, ಬೀಗ ಹಾಕಿದ ಮನೆಗಳನ್ನು ಗುರುತಿಸಿ, ಬೆಳಿಗ್ಗೆ 11 ರಿಂದ ಮಧ್ಯಾಹ್ನ 2ರ ಮಧ್ಯೆ ಜನಸಂದಣಿ ಕಡಿಮೆ ಇರುವುದನ್ನು ಗಮನಿಸಿ ಬೀಗ ಮುರಿದು ಕಳವು ಮಾಡುತ್ತಿದ್ದ.
ಕಳವು ಕೃತ್ಯಗಳನ್ನು ಒಂಟಿಯಾಗಿ ಮಾಡುತ್ತಿದ್ದ ಆರೋಪಿಯು ಕುಡಿತದ ಚಟ ಅಂಟಿಸಿಕೊಂಡಿದ್ದು, ಹಣ ಖರ್ಚಾದ ಕೂಡಲೇ ಮತ್ತೆ ಕಳವಿಗೆ ಇಳಿಯುತ್ತಿದ್ದ. ಇಲ್ಲಿಯವರೆಗೆ ಆರೋಪಿಯು ಕಳವು ಮಾಡಿದ ಕೃತ್ಯದಲ್ಲಿ ವಿಧಿಸಿದ ಶಿಕ್ಷೆಯನ್ನು ಸಂಪೂರ್ಣವಾಗಿ ಅನುಭವಿಸಿ ಬಿಡುಗಡೆಯಾಗಿ ಬಂದಿರುವುದು ತನಿಖೆಯಲ್ಲಿ ಕಂಡುಬಂದಿದೆ.
ಮಹಾಲಕ್ಷ್ಮಿ ಲೇಔಟ್‍ನ ಮನೆಯೊಂದರಲ್ಲಿ ಕಳವು ಮಾಡಿದ್ದ ಪ್ರಕರಣವನ್ನು ದಾಖಲಿಸಿದ ಇನ್ಸ್‍ಪೆಕ್ಟರ್ ಪ್ರಶಾಂತ್ ಅವರು ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಟ್ಟಿಂಗ್ ಆರೋಪಿ ಸೆರೆ
ಭಾರತ – ಆಸ್ಟ್ರೇಲಿಯಾ ತಂಡಗಳ ನಡುವಿನ ಕ್ರಿಕೆಟ್ ಪಂದ್ಯಕ್ಕೆ ಹಣ ಕಟ್ಟಿಸಿಕೊಂಡು ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಆರೋಪಿಯೊಬ್ಬನನ್ನು ಸಿಸಿಬಿ ಪೆÇಲೀಸರು ಬಂಧಿಸಿದ್ದಾರೆ.
ಅಜಾದ್ ನಗರದ ಹನುಮಾನ್ ಪಟೇಲ್ (28) ಬಂಧಿತ ಆರೋಪಿಯಾಗಿದ್ದಾನೆ. ಬಂಧಿತನಿಂದ 1.2,400 ನಗದು ಸೇರಿ ಬೆಟ್ಟಿಂಗ್‍ಗೆ ಬಳಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ
ಆರೋಪಿಯು ಅಡಿಲೇಡ್‍ನಲ್ಲಿ ಭಾರತ – ಆಸ್ಟ್ರೇಲಿಯಾ ತಂಡಗಳ ನಡುವಿನ ಕ್ರಿಕೆಟ್ ಪಂದ್ಯಕ್ಕೆ ಹಣ ಕಟ್ಟಿಸಿಕೊಂಡು ಬೆಟ್ಟಿಂಗ್ ದಂಧೆ ನಡೆಸುತ್ತಿದ್ದನು. ಖಚಿತ ಮಾಹಿತಿ ಆಧರಿಸಿ ಕಲಾಸಿಪಾಳ್ಯದ ಜರ್ನಲಿಸ್ಟ್ ಕಾಲೋನಿಯ ಮಹದೇವ ಆಟೋ ಮೊಬೈಲ್ ಅಂಗಡಿ ಮೇಲೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ ಕಲಾಸಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ