ಗಣಿತ ಕಬ್ಬಿಣದ ಕಡಲೆ ಎಂಬ ಭ್ರಮೆ ಹೋಗಲಾಡಿಸಿ

ದಾವಣಗೆರೆ:

          ಮಕ್ಕಳಲ್ಲಿ ಗಣಿತ ಎಂದರೆ, ಕಬ್ಬಿಣದ ಕಡಲೆ ಎಂಬುದಾಗಿ ಮನೆ ಮಾಡಿರುವ ಭ್ರಮೆಯನ್ನು ದೂರ ಮಾಡಬೇಕೆಂದು ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ಸಲಹೆ ನೀಡಿದರು.

       ನಗರದ ಬಿಐಇಟಿ ಕಾಲೇಜಿನ ಗಣಿತಶಾಸ್ತ್ರ ವಿಭಾಗದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಬೆಂಗಳೂರು, ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಕೇಂದ್ರ ಗಣಿತಶಾಸ್ತ್ರ ವಿಭಾಗ, ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯ, ರೋಟರಿ ಕ್ಲಬ್ ಮಿಡ್‍ಟೌನ್ ಆಶ್ರಯದಲ್ಲಿ ಏರ್ಪಡಿಸಿದ್ದ ಗಣಿತ ಶಿಕ್ಷಕರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಗಣಿತ ಎಂದರೆ ಕಬ್ಬಿಣದ ಕಡಲೆ ಎಂಬ ಭ್ರಮೆ ಅಂಟಿಕೊಂಡಿದೆ. ಮೊದಲು ಅದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಶಿಕ್ಷಕರು ಕಾರ್ಯಪ್ರವೃತ್ತರಾಗಬೇಕೆಂದು ಸಲಹೆ ನೀಡಿದರು.

       ಶಿಕ್ಷಕರು ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿಯೇ ಮಕ್ಕಳಿಗೆ ಗಣಿತ ವಿಷಯದ ಬಗ್ಗೆ ಇರುವ ಭಯವನ್ನು ದೂರ ಮಾಡಿ, ಆ ವಿಷಯದ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸಬೇಕು. ಒಂದು ಶಾಲೆಯ ಗಣಿತ ವಿಷಯದ ಫಲಿತಾಂಶವು ಆ ಇಡೀ ಶಾಲೆಯ ಫಲಿತಾಂಶವನ್ನು ಸೂಚಿಸುತ್ತದೆ ಎಂದರು.

       ಗ್ರಾಮೀಣ ಪ್ರದೇಶದ ಮಕ್ಕಳು ಗಣಿತ ಕಲಿಕೆ ಕ್ಲಿಷ್ಟಕರವಾದದ್ದು ಎಂಬುದಾಗಿ ಭಾವಿಸಿ ಅದರ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾರೆ. ಇದನ್ನು ತಡೆಯಲು ಶಿಕ್ಷಕರು ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿಯೇ ಮಕ್ಕಳಿಗೆ ಗಣಿತ ವಿಷಯವನ್ನು ನಾವೀನ್ಯ ತಂತ್ರಗಳ ಮೂಲಕ ಸುಲಭವಾಗಿ ಅರ್ಥೈಸುವಂತೆ ಪರಿಣಾಮಕಾರಿಯಾಗಿ ಭೋದನೆ ಮಾಡಬೇಕೆಂದು ಸಲಹೆ ನೀಡಿದರು.

        ಬಿಐಇಟಿ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಸುಬ್ರಮಣ್ಯಸ್ವಾಮಿ, ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಗಣಿತ ಕಲಿಕೆ ಬಗ್ಗೆ ಆಸಕ್ತಿ ಬೆಳೆಯುವ ರೀತಿ ವಾತಾವರಣ ಸೃಷ್ಟಿಸಬೇಕು. ಇಡೀ ಪ್ರಪಂಚಕ್ಕೆ ಸೊನ್ನೆಯನ್ನು ಕೊಡುಗೆಯಾಗಿ ಕೊಟ್ಟ ದೇಶ ನಮ್ಮ ಭಾರತ. ಸೊನ್ನೆಯನ್ನು ಕಂಡುಹಿಡಿಯದೇ ಇದ್ದಿದ್ದರೆ, ಗಣಿತವೇ ಇರುತ್ತಿರಲಿಲ್ಲ ಎಂದರು.

        ಕಾರ್ಯಕ್ರಮದಲ್ಲಿ ಬಿಐಇಟಿ ನಿರ್ದೇಶಕ ರ.ವೈ.ವೃಷಭೇಂದ್ರಪ್ಪ, ಬಿಐಇಟಿ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕೆ.ಎಸ್.ಬಸವರಾಜಪ್ಪ, ತೋಳಹುಣಸೆ ಪಿಎಸ್‍ಎಸ್‍ಆರ್‍ಎಸ್ ಡೀನ್ ಮಂಜುನಾಥ್ ರಂಗರಾಜನ್, ನಿವೃತ್ತ ಮುಖ್ಯೋಪಾದ್ಯಾಯ ಟಿ.ಕೆ.ಪ್ರಸನ್ನಮೂರ್ತಿ, ಬಿಇಎ ಶಾಲೆಯ ಸಂಯೋಜಕ ಜೆ.ಪದ್ಮನಾಭ, ಬಿಐಇಟಿ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ.ಬಿ.ಇ.ರಂಗಸ್ವಾಮಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕಾರ್ಯದರ್ಶಿ ಎಂ.ಗುರುಸಿದ್ದಸ್ವಾಮಿ ಮತ್ತಿತರರು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link