ತುಮಕೂರು:
ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದೆ. ಈ ಹಿನ್ನೆಲೆಯಲ್ಲಿ ನಗರದಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಮಠದ ಆವರಣದೊಳಗೆ ಸಾರ್ವಜನಿಕರಿಗೆ ಹಾಗೂ ವಾಹನಗಳ ಪ್ರವೇಶಕ್ಕೆ ನಿಷೇಧ ಹೇರಲಾಗಿದ್ದು, ನಗರದಾದ್ಯಂತ 20 ಸಾವಿರಕ್ಕೂ ಹೆಚ್ಚು ಪೊಲೀಸರನ್ನ ನಿಯೋಜನೆ ಮಾಡಲಾಗಿದೆ. ಕೇಂದ್ರ ವಲಯ ಪೊಲೀಸರಿಂದ ಬಿಗಿ ಭದ್ರತೆ ಒದಗಿಸಲಾಗಿದೆ.
ಇನ್ನು ಶ್ರೀಗಳ ಆರೋಗ್ಯದಲ್ಲಿ ಏರುಪೇರು ಅನ್ನೋ ಸುದ್ದಿ ತಿಳಿಯುತ್ತಿದ್ದಂತೆ ಮಠಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಅಲ್ಲದೇ ಮಠಕ್ಕೆ ಭದ್ರತೆ ಹೆಚ್ಚಿಸಿರೋದ್ರಿಂದ ಭಕ್ತರಲ್ಲಿ ಸಹಜವಾಗಿಯೇ ಆತಂಕ ಸೃಷ್ಟಿಯಾಗಿದೆ. ತುಮಕೂರು ಸೇರಿದಂತೆ ಇತರೆ ಜಿಲ್ಲೆಗಳಿಗೂ ಹೈ-ಅಲರ್ಟ್ ಘೋಷಣೆ ಮಾಡಲಾಗಿದೆ. ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ರಾಮನಗರ ಜಿಲ್ಲೆಗಳಲ್ಲಿಯೂ ಹೈ-ಅಲರ್ಟ್ ಘೋಷಣೆ ಮಾಡಲಾಗಿದೆ
ಶ್ರೀಗಳ ಉಸಿರಾಟದಲ್ಲಿ ಏರಿಳಿತವಾಗುತ್ತಿದ್ದು, ಭಕ್ತರಲ್ಲಿ ಆತಂಕ ಮೂಡಿಸಿದೆ. ಎಲ್ಲಾ ಚೆಕಪ್ ಮಾಡಿದ ನಂತರ ಶ್ರೀಗಳ ಆರೋಗ್ಯದ ಬಗ್ಗೆ ಮಾಹಿತಿ ನೀಡಲಾಗುತ್ತದೆ ಅಂತ ಆಪ್ತ ವೈದ್ಯ ಡಾ. ಪರಮೇಶ್ ಹೇಳಿದ್ದಾರೆ.ಶೀಗ್ರಳ ರಕ್ತ ಹಾಗೂ ಬಿಪಿ ಪ್ಯಾರಾಮೀಟರ್ಸ್ ಪರಿಕ್ಷೆಗೆ ಕಳಿಸಿದ್ದು, ಅದರ ವರದಿ ಬಂದ ಮೇಲೆ ಮಾಹಿತಿ ತಿಳಿಸುತ್ತೇವೆ ಎಂದು ಡಾ. ಪರಮೇಶ್ ಹೇಳಿದ್ದಾರೆ.
ಕಳೆದೆರಡು ದಿನಗಳಿಂದ ಶ್ರೀಗಳ ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ಚೇತರಿಕೆ ಕಂಡು ಬಂದಿತ್ತು. ಆದ್ರೆ, ಈಗ ಮತ್ತೆ ಏಕಾಏಕಿ ಶ್ರೀಗಳ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡಿದೆ. ನಿನ್ನೆ ವೆಂಟಿಲೇಟರ್ ಇಲ್ಲದೇ ಶ್ರೀಗಳು 2 ಗಂಟೆಗಳ ಕಾಲ ಸ್ವತಃ ಉಸಿರಾಡಿದ್ದರು. ಶ್ರೀಗಳಿಗೆ ಆಗಾಗ ವೆಂಟಿಲೇಟರ್ ಬಳಕೆ ಮಾಡಲಾಗ್ತಿದೆ ಎಂದು ವೈದ್ಯ ಪರಮೇಶ್ ಹೇಳಿದ್ದರು. ಇನ್ನೂ ಶತಾಯುಷಿಗೆ ಹಳೇ ಮಠದಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಮಠಕ್ಕೆ ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಎಸ್ಪಿ ಡಾ.ಕೆ.ವಂಶಿಕೃಷ್ಣ ಭೇಟಿ ನೀಡಿದ್ದಾರೆ. ಸಿದ್ದಗಂಗಾ ಮಠದ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.ನಗರದಾದ್ಯಂತ 20 ಸಾವಿರಕ್ಕೂ ಹೆಚ್ಚು ಪೊಲೀಸರನ್ನ ನಿಯೋಜನೆ ಮಾಡಲಾಗಿದೆ. ಕೇಂದ್ರ ವಲಯ ಪೊಲೀಸರಿಂದ ಬಿಗಿ ಭದ್ರತೆ ಒದಗಿಸಲಾಗಿದೆ ಎಂದು ಎಸ್ಪಿ ಡಾ.ಕೆ.ವಂಶಿಕೃಷ್ಣ ಸುದ್ಧಿಗಾರರಿಗೆ ತಿಳಿಸಿದ್ದಾರೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ