ಬೆಂಗಳೂರು:
ಬಿಡದಿಯ ಈಗಲ್ಟನ್ ರೆಸಾರ್ಟ್ನಲ್ಲಿ ವಿಜಯನಗರ ಶಾಸಕ ಆನಂದ್ ಸಿಂಗ್ ಅವರ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಕಂಪ್ಲಿ ಶಾಸಕ ಗಣೇಶ್ ಅವರಿಗೆ ಬಂಧನದ ಭೀತಿ ಎದುರಾಗಿದೆ.
ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿರುವ ಶಾಸಕ ಗಣೇಶ್ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 323(ಹಲ್ಲೆ), 324(ದೊಣ್ಣೆಯಿಂದ ಹಲ್ಲೆ), 307(ಕೊಲೆ ಯತ್ನ), 504(ಉದ್ದೇಶ ಪೂರ್ವಕ ಶಾಂತಿ ಕದಡುವುದು) 506(ಜೀವ ಬೆದರಿಕೆ) ಅಡಿ ಪ್ರಕರಣ ದಾಖಲಾಗಿದೆ.
ಪ್ರಕರಣ ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿರುವ ಗಣೇಶ್ಗಾಗಿ ಬಿಡದಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ರಾಮನಗರ ಡಿವೈಎಸ್ಪಿ ಪುರುಷೋತ್ತಮ್ ಹಾಗೂ ಬಿಡದಿ ಇನ್ಸ್ಪೆಕ್ಟರ್ ಹರೀಶ್ ನೇತೃತ್ವದಲ್ಲಿ ಗಣೇಶ್ ಪತ್ತೆಗೆ ಮೂರು ತಂಡ ರಚನೆಯಾಗಿದೆ.
ಜಾಮೀನಿಗೆ ಯತ್ನ
ಬಂಧನ ಭೀತಿಯಿಂದ ಪಾರಾಗಲು ನ್ಯಾಯಾಲಯದ ಮೊರೆ ಹೋಗಿ ಜಾಮೀನು ಪಡೆಯಲು ಗಣೇಶ್ ವಕೀಲರ ಮೂಲಕ ಪ್ರಯತ್ನ ನಡೆಸುತ್ತಿದ್ದಾರೆ. ಕೊಲೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಗಣೇಶ್ ಬಂಧನವಾಗುವ ತನಕ ಆಸ್ಪತ್ರೆಯಿಂದ ಬಿಡುಗಡೆಯಾಗದಿರಲು ಆನಂದ್ ಸಿಂಗ್ ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ಶಾಸಕ ಗಣೇಶ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಲಾಗಿದೆ. ಕೆಪಿಸಿಸಿ ಸಭೆಯಲ್ಲಿ ನಿನ್ನೆ ಕಾಂಗ್ರೆಸ್ ಪಕ್ಷದಿಂದ ಶಾಸಕ ಗಣೇಶ್ ಅವರನ್ನು ಅಮಾನತು ಮಾಡುವ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಪ್ರಕರಣದ ತನಿಖೆ ನಡೆಸಲು ವಿಶೇಷ ತನಿಖಾ ಸಮಿತಿ ರಚನೆ ಮಾಡಲಾಗಿದ್ದು, ಡಿಸಿಎಂ ಪರಮೇಶ್ವರ್, ಕೆ.ಜೆ ಜಾರ್ಜ್, ಕೃಷ್ಣಭೈರೇಗೌಡ ಅವರನ್ನೊಳಗೊಂಡ ಸಮಿತಿ ಆದಷ್ಟು ಶೀಘ್ರದಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ