ಕೊರಟಗೆರೆ : ಮನು ಕೊಲೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್!!

 ತುಮಕೂರು:

      ಕೊರಟಗೆರೆ ತಾಲೂಕು ಸಿ.ಎನ್.ದುರ್ಗ ಹೋಬಳಿ ಜೆಟ್ಟಿ ಅಗ್ರಹಾರ ಗ್ರಾಮದ ಬಳಿ ಎಂ.ಎನ್.ಜೆ ಕ್ರಷರ್‍ಗೆ ರಸ್ತೆಯಲ್ಲಿ ಜನವರಿ 7ರಂದು ರಾತ್ರಿ ಸಂಭವಿಸಿರುವ ಕೊಲೆ ಪ್ರಕರಣಕ್ಕೆ ಸಂಬಂಧಿಸದಂತೆ 12 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕೇಂದ್ರ ವಲಯ ಐ.ಜಿ.ಪಿ ದಯಾನಂದ್ ತಿಳಿಸಿದರು.

      ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜನವರಿ 7ರಂದು 35 ವರ್ಷದ ಮನು ಎಂಬ ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಕೊಲೆಯಾದ ವ್ಯಕ್ತಿಯು ಮೂಲತಃ ತುಮಕೂರು ತಾಲೂಕಿನ ಬಳ್ಳಗೆರೆ ಗ್ರಾಮದವನಾಗಿದ್ದು, 15 ವರ್ಷಗಳಿಂದ ಬೆಂಗಳೂರು ಕಾಮಾಕ್ಷಿಪಾಳ್ಯದ ನಿವಾಸಿ ಬಸವರಾಜು ಎಂಬುವವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದನು ಎಂದು ಆತನ ತಾಯಿಯಿಂದ ಮಾಹಿತಿ ತಿಳಿದು ಬಂದಿದೆ ಎಂದು ಹೇಳಿದರು.

      ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗಾಗಿ ಮಧುಗಿರಿ ಪೊಲೀಸ್ ಉಪವಿಭಾಗದ ಡಿವೈಎಸ್‍ಪಿ ಧರಣೇಶ್‍ರವರ ನೇತೃತ್ವದಲ್ಲಿ ಕೊರಟಗೆರೆ ವೃತ್ತದ ಸಿಪಿಐ ಎಫ್.ಕೆ.ನದಾಪ್, ಕೊರಟಗೆರೆ ಪಿಎಸ್‍ಐ ಮಂಜುನಾಥ್, ಸಿಬ್ಬಂದಿಗಳಾದ ಸೋಮನಾಥ, ನಾರಾಯಣ, ಸೈಯದ್, ರಮೇಶ್ ಹಾಗೂ ಮೋಹನ್ ಸೇರಿ ಇತರರನ್ನೊಳಗೊಂಡಂತೆ 2 ವಿಶೇಷ ತಂಡಗಳನ್ನು ರಚಿಸಿ ಕೂಲಂಕುಷ ತನಿಖೆ ಕೈಗೊಂಡು ಜನವರಿ 8ರಂದು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

      ಬೆಂಗಳೂರು ಬಸವೇಶ್ವರ ನಗರದ ಎಂ.ಎಲ್.ಧರ್ಮೇಂದ್ರ @ ಧರಣಿ(46), ರಾಜಾಜಿನಗರದ ತಿಮ್ಮರಾಜು @ ರಾಜಣ್ಣ(35), ನೆಲಮಂಗಲ ತಾಲೂಕು ಕೋಡಿಹಳ್ಳಿಯ ಜಗಧೀಶ(30) ಹಾಗೂ ಕೆಂಪಹನುಮಯ್ಯ(26), ಪೆಮ್ಮನಹಳ್ಳಿಯ ಶಿವಕುಮಾರ(23) ಹಾಗೂ ಹೊನ್ನುಡಿಕೆ ನಿವಾಸಿ ಶ್ರೀನಿವಾಸ(20) ಸೇರಿದಂತೆ 6 ಆರೋಪಿಗಳನ್ನು ಡಾಬಸ್‍ಪೇಟೆ ಬಳಿ ಖಚಿತ ಮಾಹಿತಿ ಆಧಾರದ ಮೇರೆಗೆ ಬಂಧಿಸಲಾಗಿದ್ದು, ಇವರುಗಳ ವಿವರವಾದ ವಿಚಾರಣೆಯಿಂದ ಕೊಲೆಯ ಸಂಪೂರ್ಣ ಅಂಶಗಳು ಬಹಿರಂಗಗೊಂಡಿವೆ ಎಂದು ತಿಳಿಸಿದರು.
ಬಂಧಿತ ಆರೋಪಿಗಳು ಕೊಟ್ಟ ಮಾಹಿತಿ ಮೇರೆಗೆ ಜನವರಿ 12ರಂದು ತುಮಕೂರು ತಾಲೂಕಿನ ಅಣ್ಣಯ್ಯನಪಾಳ್ಯದಲ್ಲಿ ಉಳಿದ 6 ಮಂದಿ ಆರೋಪಿಗಳಾದ ಬೆಂಗಳೂರು ಕಾಮಾಕ್ಷಿಪಾಳ್ಯ ನಿವಾಸಿ ಬಸವರಾಜು @ ಗೂಳಿ ಬಸವ(48), ಮಂಜುನಾಥ @ ಮಂಜ(25), ಕುಮಾರ @ ಕೆಂಗುಂಟೆ ಕುಮಾರ(32), ಚಂದ್ರ @ ದೋಬಿ ಚಂದ್ರ(45), ಲೋಕೇಶ @ ಬುಡ್ಡ ಲೋಕೇಶ(27), ಪುರುಷೋತ್ತಮ @ ಬೋಡಿ(30) ಇವರುಗಳನ್ನು ಬಂಧಿಸಲಾಗಿದೆ. ಆರೋಪಿಗಳ ವಿಚಾರಣೆ ನಂತರ ಬಸವರಾಜು, ಕುಮಾರ ಹಾಗೂ ಪುರುಷೋತ್ತಮ ಈ ಮೂವರನ್ನ ಹೆಚ್ಚಿನ ವಿಚಾರಣೆಗಾಗಿ ಪೊಲೀಸರ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದರು.

      ಆರೋಪಿಗಳಿಂದ ಕೃತ್ಯಕ್ಕೆ ಉಪಯೋಗಿಸಿದ 2 ಲಾಂಗ್‍ಗಳು, ಒಂದು ಡ್ರಾಗರ್, ಒಂದು ಕ್ವಾಲೀಸ್ ವಾಹನ, ಒಂದು ಸ್ವಿಫ್ಟ್ ಡಿಸೈರ್ ವಾಹನ ಹಾಗೂ ಸ್ವಿಫ್ಟ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

      ಆರೋಪಿಗಳಲ್ಲೊಬ್ಬನಾದ ಬಸವರಾಜು ಅವರ ಮಗಳು ಕಳೆದ ಅಕ್ಟೋಬರ್ 22ರಂದು ಮನೆಯಿಂದ ಕಾಣೆಯಾಗಿರುವ ಬಗ್ಗೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕೊಲೆಯಾದ ಮನು ಬಸವರಾಜು ಅವರ ಮಗಳನ್ನು ಕರೆದುಕೊಂಡು ಹೋಗಿದ್ದಾನೆಂಬ ದ್ವೇಷದಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ತಿಳಿಸಿದರು.

      ಕೊಲೆ ಪ್ರಕರಣದ ಆರೋಪಿಗಳು ಅಪರಾಧ ಹಿನ್ನೆಲೆಯುಳ್ಳರಾಗಿದ್ದಾರೆ. ಇವರ ಪೈಕಿ ಧರ್ಮೇಂದ್ರನ ವಿರುದ್ಧ ಯಲಹಂಕ, ಕಾಮಾಕ್ಷಿಪಾಳ್ಯ, ಕ್ಯಾತ್ಸಂದ್ರ, ಕೆ.ಆರ್.ಪೇಟೆ ಪೊಲೀಸ್ ಠಾಣೆಗಳಲ್ಲಿ ವಿವಿಧ ಪ್ರಕರಣಗಳು ದಾಖಲಾಗಿದ್ದು, ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಪಟ್ಟಿಯಲ್ಲಿದ್ದಾನೆ. ತಿಮ್ಮರಾಜು ಹಾಗೂ ಬಸವರಾಜು ವಿರುದ್ಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಮನು ಸಹ ಈ ಹಿಂದೆ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದು, ಕಾಮಾಕ್ಷಿಪಾಳ್ಯ ಠಾಣೆಯ ರೌಡಿಶೀಟ್ ಪಟ್ಟಿಯಲ್ಲಿದ್ದಾನೆ ಎಂದು ತಿಳಿಸಿದರು.

      ಈಗಾಗಲೇ ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಜನವರಿ 31ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಮಧುಗಿರಿ ಡಿವೈಎಸ್‍ಪಿ ಧರಣೀಶ್ ಅವರಿಗೆ ಮುಂದಿನ ತನಿಖೆ ಕೈಗೊಳ್ಳಲು ವಹಿಸಲಾಗಿದೆ ಎಂದು ತಿಳಿಸಿದರಲ್ಲದೇ ಚಾಣಾಕ್ಷತನದಿಂದ ಆರೋಪಿಗಳನ್ನು ಪತ್ತೆ ಹಚ್ಚಿದ ತನಿಖಾ ತಂಡಕ್ಕೆ 25 ಸಾವಿರ ರೂಗಳ ನಗದು ಬಹುಮಾನವನ್ನು ಘೋಷಿಸಿದರು.

      ಆರೋಪಿ ಬಸವರಾಜು ಅವರ ಮಗಳ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಹಾಗೂ ಕೊಲೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಬೇಕಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

      ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ಕೋನ ವಂಶಿಕೃಷ್ಣ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ: ಶೋಭಾರಾಣಿ ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link