ಸಂನ್ಮೂಲ ವ್ಯಕ್ತಿಗಳ ತರಬೇತಿಗೆ ಚಾಲನೆ

ಚಿತ್ರದುರ್ಗ:

       ಜಿಲ್ಲೆಯ 72 ಕೇಂದ್ರಗಳಲ್ಲಿ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಚಿಣ್ಣರ ನಡಿಗೆ ಕೃಷಿ ಕಡೆಗೆ/ರೈತ ಮಕ್ಕಳಿಗೆ ಕೃಷಿ ದರ್ಶನ ಮಾಡಿಸುವ ಕಾರ್ಯಾಗಾರವನ್ನು ಸದ್ಯದಲ್ಲಿಯೇ ಹಮ್ಮಿಕೊಳ್ಳಲಾಗುವುದು ಈ ಕುರಿತು ಕೃಷಿ ಮಂತ್ರಿಗಳ ಜೊತೆ ಚರ್ಚಿಸಿದ್ದೇನೆ ಎಂದು ಜಿ.ಪಂ.ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಡಾ.ಆನಂದ್ ತಿಳಿಸಿದರು.

         ಜಿಲ್ಲೆಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪ್ರೌಢಶಾಲೆ ಮುಖ್ಯ ಶಿಕ್ಷಕರು, ಕೃಷಿ, ತೋಟಗಾರಿಕೆ, ಮೀನುಗಾರಿಕೆ, ರೇಷ್ಮೆ, ಅರಣ್ಯ, ಪಶುಪಾಲನಾ ಇಲಾಖೆ ಅಧಿಕಾರಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳಿಗೆ ಜಿ.ಪಂ.ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.

         9 ನೇ ತರಗತಿ ಮಕ್ಕಳಿಗೆ ಮಾತ್ರ ಸದ್ಯಕ್ಕೆ ಹಿರಿಯೂರಿನ ಬಬ್ಬೂರು ಫಾರಂನಲ್ಲಿ ಚಿಣ್ಣರ ನಡಿಗೆ ಕೃಷಿ ಕಡೆಗೆ/ರೈತ ಮಕ್ಕಳಿಗೆ ಕೃಷಿ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಜಿಲ್ಲೆಯ 72 ಕೇಂದ್ರಗಳಲ್ಲಿಯೂ ಏಕಕಾಲಕ್ಕೆ ಕಾರ್ಯಾಗಾರ ನಡೆಸಲು ಚಿಂತಿಸಿದ್ದು, ದೇಶಕ್ಕೆ ನೀವೇನಾದರೂ ಕೊಡುಗೆ ನೀಡಬೇಕೆಂದಿದ್ದರೆ ಮಕ್ಕಳಲ್ಲಿ ಕೃಷಿ ಕುರಿತು ಅರಿವು ಮೂಡಿಸಿ ಎಂದು ಜಿಲ್ಲೆಯ ಎಲ್ಲಾ ಮುಖ್ಯ ಶಿಕ್ಷಕರುಗಳಿಗೆ ಹಾಗೂ ಅಧಿಕಾರಿಗಳಿಗೆ ಸೂಚಿಸಿದರು.

        ಕೃಷಿ ಪ್ರಧಾನ ದೇಶ ನಮ್ಮದು. ಶೇ.65 ರಷ್ಟು ಮಂದಿ ಕೃಷಿಯನ್ನೆ ನಂಬಿ ಜೀವನ ನಡೆಸುತ್ತಿದ್ದಾರೆ. ಸರ್ಕಾರಿ ನೌಕರಿಗಾಗಿಯೇ ಎಲ್ಲರೂ ಶಿಕ್ಷಣ ಪಡೆಯುವಂತಾಗಿರುವುದರಿಂದ ಹಳ್ಳಿಗಳಲ್ಲಿ ಕೃಷಿ ಮಾಡುವವರೆ ಇಲ್ಲದಂತಾಗಿ ಕೆಲಸ ಹುಡುಕಿಕೊಂಡು ದೊಡ್ಡ ದೊಡ್ಡ ಪಟ್ಟಣಗಳಿಗೆ ಹೋಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ವಿದೇಶಿಗರು ಇಲ್ಲಿಗೆ ಬಂದು ಕೃಷಿ ಮಾಡಿದರೂ ಆಶ್ಚರ್ಯವೇನಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.ಸರ್ಕಾರಿ ನೌಕರಿ ಭ್ರಮೆಯಿಂದ ಕೃಷಿ ನಶಿಸಿ ಹೋಗುತ್ತಿದೆ. ಮುಂದಿನ ಭವಿಷ್ಯದ ರೈತ ಮಕ್ಕಳಿಗೆ ಕೃಷಿ ಕುರಿತು ಪರಿಚಯಿಸುವ ಕೆಲಸವಾಗಬೇಕು.

         8, 9 ಮತ್ತು ಹತ್ತನೆ ತರಗತಿ ಮಕ್ಕಳಿಗೂ ಮುಂದಿನ ದಿನಗಳಲ್ಲಿ ವ್ಯವಸಾಯದ ಕುರಿತು ವರ್ಷದಲ್ಲಿ ಮೂರು ಕಾರ್ಯಾಗಾರವನ್ನು ನಡೆಸಬೇಕಾಗುತ್ತದೆ. ಜಿಲ್ಲೆಯಲ್ಲಿ ಎಲ್ಲೆಲ್ಲಿ ಹತ್ತನೆ ತರಗತಿ ಪರೀಕ್ಷೆಗಳು ನಡೆಯುತ್ತವೋ ಅಂತಹ ಕೇಂದ್ರಗಳಲ್ಲಿ ಚಿಣ್ಣರ ನಡಿಗೆ ಕೃಷಿ ಕಡೆಗೆ ಕಾರ್ಯಕ್ರಮ ಆಯೋಜಿಸಲಾಗುವುದು. ಮೂರರಿಂದ ನಾಲ್ವರು ಸಂಪನ್ಮೂಲ ವ್ಯಕ್ತಿಗಳು ಕಾರ್ಯಾಗಾರದಲ್ಲಿ ಮಕ್ಕಳಿಗೆ ಕೃಷಿಯ ಪರಿಚಯ ಮಾಡುವರು. ಪ್ರಗತಿಪರ ರೈತರು, ಕೃಷಿಯಲ್ಲಿ ಸಾಧನೆ ಮಾಡಿದವರು ಸಂಪನ್ಮೂಲ ವ್ಯಕ್ತಿಗಳಾಗಿ ಮಣ್ಣಿನಿಂದ ಹಿಡಿದು ಆಧುನಿಕ ಕೃಷಿ ಉಪಕರಣಗಳ ಮಾಹಿತಿಯನ್ನು ಮಕ್ಕಳಿಗೆ ನೀಡುವರು. ಸಿರಿಧಾನ್ಯಗಳನ್ನು ಪರಿಚಯಿಸುವುದಕ್ಕಾಗಿಯೇ ಮಧ್ಯಾಹ್ನ ಮಕ್ಕಳಿಗೆ ಸಿರಿಧಾನ್ಯಗಳಿಂದ ತಯಾರಿಸಿದ ಊಟ ನೀಡಲಾಗುವುದು. ಇದಕ್ಕೆ ಎಲ್ಲಾ ಇಲಾಖೆಯ ಅಧಿಕಾರಿಗಳು ಸನ್ನದ್ದರಾಗಬೇಕು ಎಂದು ತಿಳಿಸಿದರು.

        ಜಿ.ಪಂ.ಸದಸ್ಯರುಗಳಾದ ಮಮತ, ಪ್ರಕಾಶ್‍ಮೂರ್ತಿ, ವಿಶಾಲಾಕ್ಷ್ಮಿ ನಟರಾಜ್, ಶಶಿಕಲ ಸುರೇಶ್‍ಬಾಬು, ವಿಜಯಲಕ್ಷ್ಮಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂಥೋಣಿ, ಶಿಕ್ಷಣಾಧಿಕಾರಿ ಪಿ.ರಾಮಯ್ಯ, ವಿಷಯ ಪರಿವೀಕ್ಷಕ ಮಹಲಿಂಗಪ್ಪ ವೇದಿಕೆಯಲ್ಲಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap