ದಾವಣಗೆರೆ
ಗಣರಾಜ್ಯೋತ್ಸವದ ಪ್ರಯುಕ್ತ ನಾಳೆಯಿಂದ (ಫೆ.26ರಿಂದ) ಆಂಭವಾಗಲಿರುವ ಫಲಪುಷ್ಪ ಪ್ರದರ್ಶನಕ್ಕೆ ನಗರದ ಗಾಜಿನ ಮನೆಯು ಮಧುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದ್ದು, ಹಲವು ನಾವಿನ್ಯಗಳಿಗೆ ಸಾಕ್ಷಿ ಬರೆಯಲಿರುವ ಗಾಜಿನ ಮನೆಯಲ್ಲಿ ಭರದ ಸಿದ್ಧತೆ ನಡೆದಿದೆ.
ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಾ.ವೇದಮೂರ್ತಿ, ತೋಟಗಾರಿಕೆ ಇಲಾಖೆ ವತಿಯಿಂದ ಗಣರಾಜ್ಯೋತ್ಸವದ ಪ್ರಯುಕ್ತ ಏರ್ಪಡಿಸಿರುವ ಫಲಪುಷ್ಪ ಪ್ರದರ್ಶನವು ನಾಳೆಯಿಂದ (ಜ.26 ರಿಂದ) ಫೆ.04 ರ ವರೆಗೆ ಗಾಜಿನ ಮನೆಯಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಜನರಲ್ಲಿ ತೋಟಗಾರಿಕೆಯ ಅಭಿರುಚಿ ಹೆಚ್ಚಿಸಲು ವಿವಿಧ ಅಲಂಕಾರಿಕ ಗಿಡಗಳು ಹಾಗೂ ಹೂ ಗಿಡಗಳನ್ನು ಬೆಳೆಸಲು ಪ್ರೋತ್ಸಾಹಿಸಲು, ಮಕ್ಕಳಲ್ಲಿ ತೋಟಗಾರಿಕೆ ಬಗ್ಗೆ ಜ್ಞಾನ ವೃದ್ಧಿಸುವ ಉದ್ದೇಶದಿಂದ ಈ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.
ಸಮಾಜಮುಖಿ ಮತ್ತು ಎಲ್ಲ ವರ್ಗದ ಜನರ ಏಳಿಗೆಗೆ ಶ್ರಮಿಸಿದವರ ಸಾಲಿನಲ್ಲಿ ಒಬ್ಬರಾದ ಡಾ.ಭೀಮರಾವ್ ರಾಮ್‍ಜೀ ಅಂಬೇಡ್ಕರ್ ಮೂರ್ತಿಯನ್ನು ಸಿರಿಧಾನ್ಯದಲ್ಲಿ ಅರಳಿಸುತ್ತಿರುವುದು ಸಹ ಈ ಬಾರಿಯ ವಿಶೇಷತೆಯಾಗಿದೆ. ಅಲ್ಲದೆ, ಗಿಟಾರ್, ಶಿವಲಿಂಗ, ಮತ್ತು ಹೃದಯ ಆಕಾರದ ವಿವಿಧ ಕಲಾಕೃತಿಗಳನ್ನು ಪ್ರದರ್ಶನದಲ್ಲಿ ಇಡಲಾಗುವುದು. 10 ಬಗೆಯ ವಿವಿಧ ತಳಿಯ 15,000 ಗಿಡಗಳನ್ನು ಪ್ಲಾಸ್ಟಿಕ್ ಕುಂಡದಲ್ಲಿ ಬೆಳೆಸಿರುವುದನ್ನು ಪ್ರದರ್ಶದಲ್ಲಿ ಇಡಲಾಗುವುದು ಎಂದು ಮಾಹಿತಿ ನೀಡಿದರು.
ಗಾಜಿನ ಮನೆಯ ಒಳ ಆವರಣದಲ್ಲಿರುವ ಎಲ್ಲಾ ಮರಗಳಿಗೂ ಬಗೆ ಬಗೆಯಾದ ವಿದ್ಯುತ್ ದೀಪಾಲಂಕಾರ ಮಾಡಲಾಗುವುದು. ಈ ಬಾರಿ ವಿಶೇಷವಾಗಿ ಮಕ್ಕಳಿಗೆ ಅಮ್ಯೂಸ್‍ಮೆಂಟ್ ಪಾರ್ಕ್ ನಿರ್ಮಿಸಿದ್ದು ವಿವಿಧ ಆಟಗಳ ಜೊತೆಗೆ ವಿಶೇಷ ಬಗೆ ಬಗೆಯ ತಿಂಡಿ ತಿನಿಸುಗಳ ಮಳಿಗೆಗಳನ್ನು ನಿರ್ಮಿಸಲಾಗುವುದು ಎಂದರು.
ಪ್ರದರ್ಶನದಲ್ಲಿ ವಿವಿಧ ಇಲಾಖೆಗಳಿಗೆ 15 ಮಳಿಗೆಗಳು ಮತ್ತು 30 ತಿಂಡಿ ಮತ್ತು ಇತರೆ ಮಳಿಗೆಗಳನ್ನು ತೆರೆಯಲುದ್ದೇಶಿಸಲಾಗಿದೆ. ಅಲ್ಲದೇ, ನಡೆದಾಡುವ ದೇವರು ಎಂದೇ ಪ್ರಸಿದ್ದಿಯಾಗಿರುವ ಸಿದ್ದಗಂಗಾ ಶ್ರೀಗಳು, ಶ್ರೀ ಪುಟ್ಟರಾಜು ಗವಾಯಿ, ಕುವೆಂಪು, ತೋಟಗಾರಿಕೆ ಪಿತಾಮಹರಾದ ಡಾ.ಎಂ.ಹೆಚ್. ಮರಿಗೌಡ ಇವರುಗಳ ಭಾವಚಿತ್ರಗಳನ್ನು ರಂಗೋಲಿಯಲ್ಲಿ ಅರಳಿಸಲಾಗುವುದು ಎಂದರು.
ಸಾರ್ವಜನಿಕರ ಪ್ರದರ್ಶನವನ್ನು ಪ್ರತಿನಿತ್ಯ ಸಂಜೆ 6 ಗಂಟೆಯಿಂದ 9 ಗಂಟೆಯವರೆಗೆ ನಿಗದಿಪಡಿದ್ದು, 5 ವರ್ಷದೊಳಗಿನ ಮಕ್ಕಳಿಗೆ 10 ರೂ. ಮತ್ತು 5 ವರ್ಷಕ್ಕಿಂತ ಮೇಲಿನ ಎಲ್ಲರಿಗೂ 20 ರೂ. ಪ್ರವೇಶ ದರ ನಿಗದಿ ಮಾಡಲಾಗಿದೆ. ಗಾಜಿನ ಮನೆ ವೀಕ್ಷಣೆಗೆ ಪ್ರವಾಸಿಗರನ್ನು ಸೆಳೆಯಲು ರಾಷ್ಟ್ರೀಯ ಹೆದ್ದಾರಿ ಎನ್‍ಹೆಚ್-4ರಲ್ಲಿ ನಾಮಫಲಕ ಅಳವಡಿಸಲಾಗುವುದು. ಫಲಪುಷ್ಪ ಪ್ರದರ್ಶನ ನಡೆಯುವ ದಿನಗಳಲ್ಲಿ ಪ್ರತಿ ಎರಡು ಗಂಟೆಗಳಿಗೊಮ್ಮೆ ನಗರದಿಂದ ಸಿಟಿ ಬಸ್ಸುಗಳಿಗೆ ವ್ಯವಸ್ಥೆ ಮಾಡಲು ಮನವಿ ಮಾಡಲಾಗುವುದು. ಹಾಗೂ ಸಿಟಿ ಬಸ್ಸುಗಳ ಸಂಚಾರದಲ್ಲಿ ಸಹ ಗಾಜಿನ ಮನೆ ಎಂಬ ನಾಮಫಲಕ ಅಳವಡಿಸಿ ಜನರನ್ನು ಹೆಚ್ಚಿನದಾಗಿ ಸೆಳೆಯಲಾಗುವುದು ಎಂದರು.
ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವನೆ : ರೂ.25 ಕೋಟಿ ಗಾಜಿನ ಮನೆ ನಿರ್ಮಾಣಕ್ಕೆ ಇದುವರೆಗೆ ಖರ್ಚಾಗಿದೆ. ಸಂಗೀತ ಕಾರಂಜಿ, ಸಂಪರ್ಕ ರಸ್ತೆಗಳು, ದೀಪಾಂಲಂಕಾರ, ಆಧುನೀಕರಣ ಮತ್ತು ಇತರೆ ಮೂಲಭೂತ ಸೌಕರ್ಯ ಕಲ್ಪಿಸುವುದಕ್ಕಾಗಿ ಹೆಚ್ಚುವರಿ ರೂ.5 ಕೋಟಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.ಅಮ್ಯೂಸ್‍ಮೆಂಟ್ ಪಾರ್ಕ್‍ನಲ್ಲಿ ಸುಮಾರು 40 ಮಳಿಗೆಗಳು ಖಾಲಿ ಇದ್ದು, ಆಸಕ್ತಿಯುಳ್ಳ ವ್ಯಾಪಾರಸ್ಥರು, ಮೊಬೈಲ್ ಸಂಖ್ಯೆ-9686255809 ಇವರನ್ನು ಸಂಪರ್ಕಿಸಬಹುದೆಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
