ಹಿರಿಯೂರು :
ನ್ಯಾಯಬೆಲೆ ಅಂಗಡಿಯಲ್ಲಿ ಆಹಾರ ಪದಾರ್ಥಗಳ ವಿತರಣೆ ವಿಳಂಬವಾಗುತ್ತಿದ್ದು, ಮೊದಲು ನ್ಯಾಯಬೆಲೆ ಅಂಗಡಿ ನಿರ್ವಹಿಸುತ್ತಿದ್ದ ಸ್ಥಳೀಯರಾದ ರಾಮಣ್ಣನವರಿಗೆ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿ ತಾಲೂಕಿನ ಮಸ್ಕಲ್-ಮಜರೆ ಗ್ರಾಮಸ್ಥರು ನಗರದ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಕಳೆದ 10 ವರ್ಷಗಳಿಂದ ರಾಮಣ್ಣ ಕಾಲಕಾಲಕ್ಕೆ ಸರ್ಕಾರ ನೀಡುವಂತಹ ದವಸ-ಧಾನ್ಯಗಳನ್ನು ಗ್ರಾಹಕರಿಗೆ ಪಾರದರ್ಶಕವಾಗಿ ನೀಡುತ್ತಾ ಬಂದಿದ್ದಾರೆ. ಇದೀಗ ಏಕಾಏಕಿ ಹಿರಿಯೂರು ನಗರದ ನೀಲಕಂಠಪ್ಪ ಎಂಬುವರನ್ನು ನೇಮಕ ಮಾಡಿರುವುದರಿಂದ ಸ್ಥಳೀಯ ಗ್ರಾಮಸ್ಥರಿಗೆ ನಿಗದಿತ ಸಮಯದಲ್ಲಿ ವಿತರಿಸಲು ತೊಂದರೆಯಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ಕೂಡಲೇ ತಹಶೀಲ್ದಾರರು ಈ ಮೊದಲಿದ್ದ ರಾಮಣ್ಣನವರಿಗೆ ನ್ಯಾಯಬೆಲೆ ಅಂಗಡಿ ನಿರ್ವಹಣೆ ಜವಾಬ್ದಾರಿ ನೀಡಬೇಕು. ಇದರಿಂದ ಸ್ಥಳೀಯರಿಗೆ ಆದ್ಯತೆ ನೀಡಿದಂತಾಗುತ್ತದೆ. ಸಮಯಕ್ಕೆ ಸರಿಯಾಗಿ ಆಹಾರಧಾನ್ಯ ಪಡೆಯಲು ಅನುಕೂಲವಾಗುತ್ತದೆ ಎಂಬುದಾಗಿ ಮನವಿ ಮಾಡಿದರು.
ತಾಲೂಕಿನ ಮಸ್ಕಲ್-ಮಜರೆ ಗ್ರಾಮಸ್ಥರು ಸಲ್ಲಿಸಿದ ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಜೆ.ಸಿ.ವೆಂಕಟೇಶಯ್ಯ ನವರು ನಿಮ್ಮ ಗ್ರಾಮದವರೇ ರಾಮಣ್ಣನವರ ವಿರುದ್ಧ ದೂರು ನೀಡಿದ್ದರಿಂದ ಬದಲಿ ವ್ಯವಸ್ಥೆ ಮಾಡಬೇಕಾಯಿತು. ಈ ಬಗ್ಗೆ ಜಿಲ್ಲಾ ಆಹಾರ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ರಾಮಣ್ಣನವರು ನಡೆಸಿದ ವಹಿವಾಟು ಲೆಕ್ಕ ಪರಿಶೋಧನೆ ನಂತರ ಅಧಿಕಾರಿಗಳ ನಿರ್ದೇಶನದಂತೆ ಮತ್ತೆ ರಾಮಣ್ಣನವರನ್ನು ನೇಮಕ ಮಾಡಲಾಗುವುದು ಎಂದು ಭರವಸೆ ನೀಡಿದರು.ಈ ಪ್ರತಿಭಟನೆಯಲ್ಲಿ ಗ್ರಾಮದ ಪರಮೇಶ್ ಬಿಂಬೋಧರ, ತಿಪ್ಪೇಸ್ವಾಮಿ, ಪ್ರಕಾಶ್, ವೀರೇಶ್, ಶಾಂತಮೂರ್ತಿ, ನಾಗರಾಜ್, ಈರಣ್ಣ, ಲೋಕೇಶ್, ಸರ್ವಮ್ಮ, ಗಿರಿಜಮ್ಮ, ಭುವನೇಶ್ವರಿ, ಶಿವಲಿಂಗಮ್ಮ, ಸಿದ್ದಲಿಂಗಮ್ಮ, ಅಲಮೇಲು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
