ಹಿರಿಯೂರು :
ಸಹಕಾರ ಸಂಘಗಳಿಗೆ ಸರ್ಕಾರದಿಂದ ಬರುವ ಬಡ್ಡಿ, ಸಹಾಯಧನ ಅಥವಾ ವ್ಯವಹಾರಕ್ಕೆಂದು ಚಾಲ್ತಿ ಖಾತೆಗೆ ಜಮಾ ಮಾಡಿದ ಹಣವನ್ನು ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರು ಆಡಳಿತ ಮಂಡಳಿಗೆ ಕಾರ್ಯದರ್ಶಿಗೆ ತಿಳಿಸದೆ ಸಂಘದ ಸಾಲಕ್ಕೆ ಜಮಾ ಮಾಡಿಕೊಳ್ಳುತ್ತಿರುವುದು ನಿಜಕ್ಕೂ ಖಂಡನೀಯ ಎಂಬುದಾಗಿ ತಾಲ್ಲೂಕು ರೈತಸಂಘ ಹಾಗೂ ಹಸಿರುಸೇನೆ ಅಧ್ಯಕ್ಷ ಕೆ.ಸಿ.ಹೊರಕೇರಪ್ಪ ಹಾಗೂ ಕಾರ್ಯಾಧ್ಯಕ್ಷ ಆಲೂರುಸಿದ್ದರಾಮಣ್ಣ ಆರೋಪಿಸಿದ್ದಾರೆ.
ತಾಲ್ಲೂಕು ಕೇಂದ್ರಗಳಲ್ಲಿರುವ ಡಿಸಿಸಿ ಬ್ಯಾಂಕ್ ಶಾಖೆಗಳು ಎಲ್ಲ ವ್ಯವಸಾಯ ಪತ್ತಿನ ಸಹಕಾರ ಸಂಘಗಳಿಗೆ ಕೋಟಿ ಲೆಕ್ಕದಲ್ಲಿ ಕೆಸಿಸಿ ಸಾಲ ವಿತರಣೆ ಮಾಡಿವೆ. ಸರ್ಕಾರದಿಂದ ಶೇ2.50 ಬಡ್ಡಿ ಸಹಾಯಧನ ಬಂದಿದ್ದರೂ ಕೇವಲ ಶೇ 1 ಬಡ್ಡಿಯನ್ನು ಸಂಘಗಳ ಚಾಲ್ತಿ ಖಾತೆಗೆ ಜಮಾ ಮಾಡುತ್ತಿದ್ದಾರೆ. ಅಲ್ಲದೆ ಬ್ಯಾಂಕಿನ ಗ್ರಾಹಕರು, ಸಾಲಗಾರರು ತೆರೆದಿರುವ ಉಳಿತಾಯ ಖಾತೆಯಲ್ಲಿನ ಹಣ ಬಿಡಿಸಿಕೊಳ್ಳಲು ವ್ಯವಸ್ಥಾಪಕರು ತುಂಬಾ ಕಿರಿಕಿರಿ ಮಾಡುತ್ತಿದ್ದಾರೆ. ಸಂಬಂಧಪಟ್ಟವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರ ವಿರುದ್ಧ ರೈತಸಂಘ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂಬುದಾಗಿ ಈ ಮೂಲಕ ಅವರುಗಳು ಎಚ್ಚರಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ







