ಬಜೆಟ್‍ನಲ್ಲಿ ಶ್ರೀಗಳ ಹೆಸರಿನ ಯೋಜನೆ ಘೋಷಿಸುವ ಸಂಬಂಧ ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದಾರೆ : ಪರಮೇಶ್ವರ್

ತುಮಕೂರು

        ನಡೆದಾಡುವ ದೇವರು, ತ್ರಿವಿಧ ದಾಸೋಹಮೂರ್ತಿ, ಪದ್ಮಭೂಷಣ, ಕಾಯಕಯೋಗಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ನೆನಪು ಜನಮಾನಸದಲ್ಲಿ ಅಚ್ಚಳಿಯದಂತೆ ಉಳಿಯುವಂತಹ ಯೋಜನೆಯೊಂದನ್ನು ಮುಂದಿನ ಬಜೆಟ್‍ನಲ್ಲಿ ಘೋಷಿಸುವ ಸಂಬಂಧ ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಇಂದಿಲ್ಲಿ ತಿಳಿಸಿದರು.

        ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಹಿರಿಯ ಶ್ರೀಗಳಾದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದು, ಶ್ರೀಗಳ ಕುರಿತು ವಿಶೇಷ ಯೋಜನೆಯನ್ನು ಘೋಷಣೆ ಮಾಡುವ ಭರವಸೆ ತಮಗಿದೆ ಎಂದರು.

        ನಡೆದಾಡುವ ದೇವರ ಪ್ರತಿಮೆ ನಿರ್ಮಾಣ ಮಾಡುವ ಸಂಬಂಧ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸುವುದಾಗಿ ಅವರು ಹೇಳಿದರು.
ನಾಡಿನ ಇತಿಹಾಸದಲ್ಲಿ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾರ್ವಜನಿಕ ಕ್ಷೇತ್ರದಲ್ಲಿ ಇಂತಹ ಮತ್ತೊಬ್ಬ ಶ್ರೀಗಳನ್ನು ನೋಡಲು ಸಾಧ್ಯವಿಲ್ಲ. ಅವರ ಕಾಲಘಟ್ಟದಲ್ಲಿ ನಾವೆಲ್ಲಾ ಬದುಕಿರೋದೇ ನಮ್ಮೆಲ್ಲರ ಅದೃಷ್ಟ ಎಂದರು.

        ಶ್ರೀಗಳು ಜನಸಮುದಾಯದಲ್ಲಿ ಬೆಳಗಿಸಿದ ಲಕ್ಷಾಂತರ ದೀಪ ಇತಿಹಾಸದಲ್ಲಿ ಉಳಿದು ಹೋಗಲಿದೆ. ಇಂದು ಅವರು ನೆನಪು ಮಾತ್ರ. ಶರೀರಕವಾಗಿ ಅವರನ್ನು ಕಳೆದುಕೊಂಡಿದ್ದರೂ ಸಹ ಅವರ ದೈವಿಶಕ್ತಿ ಸದಾ ನಮ್ಮೊಂದಿಗಿರುತ್ತದೆ ಎಂದರು. 111 ವಸಂತಗಳನ್ನು ಪೂರೈಸಿದ್ದ ಶ್ರೀಗಳು ಸಮಾಜದಲ್ಲಿ ದೈವಿ ಪುರುಷರಾಗಿ ನೆನಪಿಸಿಕೊಳ್ಳುವಂತಹ ಸಾರ್ಥಕ ಸೇವೆಯನ್ನು ಮಾಡಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದರ್ಶನ, ಕಾಯಕ ತತ್ವವನ್ನು ನಾವೆಲ್ಲರೂ ಚಾಚೂತಪ್ಪದೇ ಪಾಲಿಸಬೇಕಾಗಿದೆ ಎಂದರು.

       ಹಿರಿಯ ಶ್ರೀಗಳು ಕಟ್ಟಿ ಬೆಳೆಸಿ ಶ್ರೀಕ್ಷೇತ್ರದ ಜವಾಬ್ದಾರಿ ಕಿರಿಯಶ್ರೀಗಳ ಮೇಲಿದೆ. ಇಂಥ ಬಹುದೊಡ್ಡ ಜವಾಬ್ದಾರಿಯನ್ನು ಕಿರಿಯಶ್ರೀಗಳು ಸುಸೂತ್ರವಾಗಿ ನಿರ್ವಹಿಸುವ ಮೂಲಕ ಇನ್ನೂ ದೊಡ್ಡಮಟ್ಟದಲ್ಲಿ ಬೆಳೆಸಬೇಕಿದೆ ಎಂದರು.

        ಜ. 31 ರಂದು ನಡೆಯಲಿರುವ ಶ್ರೀಗಳ ನುಡಿನಮನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸೇರಿದಂತೆ ಸಚಿವರುಗಳು, ಶಾಸಕರುಗಳೆಲ್ಲಾ ಪಾಲ್ಗೊಳ್ಳಲಿದ್ದಾರೆ. ಶ್ರೀಮಠದ ಕಾರ್ಯಕ್ರಮಗಳಿಗೆ ಸರ್ಕಾರದಿಂದ ಎಲ್ಲ ರೀತಿಯ ಸಹಕಾರ ಇದ್ದೇ ಇರುತ್ತದೆ ಎಂದು ಹೇಳಿದರು.

          ಶ್ರೀಗಳ ಅಂತಿಮ ಯಾತ್ರೆ ಕಾರ್ಯಕ್ರಮದಲ್ಲಿ ದೇಶದ ವಿವಿಧೆಡೆಯಿಂದ ಲಕ್ಷಾಂತರ ಜನ ಭಾಗವಹಿಸಿದ್ದರು. ಎಲ್ಲೂ ಸಹ ಗೊಂದಲ ಉಂಟಾಗದಂತೆ ಸುಸೂತ್ರವಾಗಿ ನೆರವೇರಿತು. ಇದಕ್ಕ ಸಹಕರಿಸಿದ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

        ನಡೆದಾಡುವ ದೇವರು ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಲಿಂಗೈಕ್ಯದ ಗೌರವಾರ್ಥ ರಾಜ್ಯದಲ್ಲಿ 3 ದಿನಗಳ ಕಾಲ ಶೋಕಾಚರಣೆ ಇದ್ದ ಸಂದರ್ಭದಲ್ಲಿ ಸಚಿವ ಪ್ರಿಯಾಂಕ ಖರ್ಗೆ ಕಾರ್ಯಕ್ರಮ ಆಯೋಜನೆ ಮಾಡಿದ್ದರ ಬಗ್ಗೆ ಕ್ಷಮೆ ಯಾಚಿಸಿದ್ದಾರೆ. ವಿನಾ ಕಾರಣ ಬಿಜೆಪಿಯವರು ಈ ವಿಚಾರದಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.

       ಕಾರ್ಯಕ್ರಮ ಮೊದಲನೇ ನಿಗದಿಯಾಗಿದ್ದರಿಂದ ಬೇರೆ ಬೇರೆ ರಾಜ್ಯಗಳಿಂದ ಅತಿಥಿಗಳು ಆಗಮಿಸಿದ್ದರು. ಅವರಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಮತ್ತು ಶ್ರೀಗಳ ಧ್ಯೇಯದಂತೆ ಕಾರ್ಯಕ್ರಮ ಉದ್ಘಾಟಿಸುವ ಮೂಲಕ ಕಾಯಕ ಮಾಡಿದ್ದೇವೆ. ಇದನ್ನು ಬಿಜೆಪಿಯವರು ರಾಜಕಾರಣಕ್ಕೆ ಬಳಸಿಕೊಳ್ಳುವುದು ಬೇಡ ಎಂದರು.

      ಈ ಸಂದರ್ಭದಲ್ಲಿ ಸಂಸದ ಎಸ್.ಪಿ. ಮುದ್ದಹನುಮೇಗೌಡ, ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ, ಸಿದ್ದಗಂಗಾ ಆಸ್ಪತ್ರೆಯ ಡಾ.ಪರಮೇಶ್, ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‍ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ವಂಶಿಕೃಷ್ಣ, ಅಡಿಷನಲ್ ಎಸ್ಪಿ ಡಾ. ಶೋಭರಾಣಿ,ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣ, ದನಿಯಾಕುಮಾರ್,ಚಂದ್ರಶೇಖರಗೌಡ, ದಿನೇಶ್ , ತರುಣೇಶ್, ಮಹದೇವ್, ದೀಪು, ಮತ್ತಿತರರು ಉಪಸ್ಥಿತರಿದ್ದರು.

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link