ದಾವಣಗೆರೆ :
ಮುಂದಿನ ವರ್ಷದ ವೇಳಗೆ ನಗರದಲ್ಲಿ ಸುಸಜ್ಜಿತ ರೈಲ್ವೆ ನಿಲ್ದಾಣ ನಿರ್ಮಾಣವಾಗಲಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದರು.ನಗರದ ರೈಲ್ವೆ ನಿಲ್ದಾಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ನಿಲ್ದಾಣದ ಎರಡನೇ ಪ್ರವೇಶ ದ್ವಾರ ಹಾಗೂ ಹೊಸ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಹೊಸ ರೈಲ್ವೆ ನಿಲ್ದಾಣ ನಿರ್ಮಾಣ ಜಿಲ್ಲೆಯ ಜನತೆಯ ಬಹುದಿನದ ಬೇಡಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ತಾವು ಸತತ ಪ್ರಯತ್ನದ ಮೂಲಕ ಕೇಂದ್ರ ಸರ್ಕಾರದ ಮೇಲೆ ಒತ್ತಡ ಏರಿದ ಹಿನ್ನೆಲೆಯಲ್ಲಿ ರೈಲ್ವೆ ನಿಲ್ದಾಣಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸಿದೆ ಎಂದು ಹೇಳಿದರು.
ರೈಲ್ವೆ ನಿಲ್ದಾಣದಲ್ಲಿ ಸ್ವಚ್ಛತೆ, ಸುರಕ್ಷತೆ, ಪಾರ್ಕಿಂಗ್ ವ್ಯವಸ್ಥೆ, ಅತ್ಯಾಧುನಿಕ ಕ್ಯಾಟೀನ್ ನಿರ್ಮಾಣಕ್ಕೆ ಮಹತ್ವ ನೀಡಲಾಗುವುದು. ಜಿಲ್ಲೆಯ ಕಾಟನ್ ಮಿಲ್ ಹತ್ತಿರ 61 ಮೀಟರ್ ನೇರ ಹಳಿ ನಿರ್ಮಾಣವನ್ನು ಪ್ರಾರಂಭಿಸಿದೆ. ಜಿಲ್ಲೆಯ ಕೆಲ ರೈಲ್ವೆ ಮೇಲು ಸೇತುವೆ ಮತ್ತು ನೂತನ ಕಟ್ಟಡ ನಿರ್ಮಾಣದ ಕಡೆಗಳಲ್ಲಿ ಮಳೆ ಬಂದಾಗ ನೀರು ನಿಲ್ಲುತ್ತದೆ ಎಂಬ ಆರೋಪಗಳಿದ್ದವು, ಈ ಸಮಸ್ಯೆಗಳನ್ನು ರೈಲ್ವೆ ಡಬ್ಲಿಂಗ್ ವೇಳೆಯಲ್ಲಿ ಸಮಸ್ಯೆಯನ್ನು ಪರಿಹರಿಸುವಂತೆ ಸೂಚಿಸಲಾಗಿದೆ ಎಂದರು.
ಕೇಂದ್ರ ಸರ್ಕಾರ ಆಡಳಿತಕ್ಕೆ ಬಂದ ನಂತರ ರೈಲ್ವೆ ಇಲಾಖೆಯಲ್ಲಿ ಮಹತ್ತರ ಸಾಧನೆಗಳನ್ನು ಮಾಡಿದೆ. ರೈಲ್ವೆ ಡಿಜಿಟಲಿಕರಣಕ್ಕೆ ಒತ್ತು ನೀಡಿದೆ. ಸುಮಾರು 700ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈಫೈಗಳನ್ನು ಅಳವಡಿಸಿದೆ. ರೈಲ್ವೆ ಇಲಾಖೆಯ ಅಪಘಾತಗಳನ್ನು ತಡೆಗಟ್ಟುವ ದೃಷ್ಟಿಯಿಂದ ದೇಶಾದ್ಯಂತ ಇದ್ದ 4,973 ಮಾನವ ರಹಿತ ಕ್ರಾಸಿಂಗ್‍ಗಳನ್ನು 2019ರ ವೇಳೆಗೆ ನಿರ್ಮೂಲನೆ ಮಾಡಲು “ಮಿಷನ್ ಜೀರೋ ಆಕ್ಸಿಡೆಂಟ್” ಎಂಬ ಅಭಿಯಾನವನ್ನು ಪ್ರಾರಂಭಿಸಿ 4,940 ಮಾನವ ರಹಿತ ಲೆವೆಲ್ ಕ್ರಾಸಿಂಗ್‍ಗಳನ್ನು ನಿರ್ಮೂಲನೆ ಮಾಡಿ ಅಂತಹ ಸ್ಥಳಗಳಲ್ಲಿ ಸಬ್‍ವೇ/ಅಂಡರ್ ಪಾಸ್‍ಗಳನ್ನು ನಿರ್ಮಾಣ ಮಾಡಿ ರೈಲ್ವೆ ಅಪಘಾತಗಳನ್ನು ಗಣನೀಯವಾಗಿ ತಗ್ಗಿಸಿದೆ ಎಂದು ಹೇಳಿದರು.
ರೈಲ್ವೆ ಇಲಾಖೆಯ ಬಳಿ ಸುಮಾರು 47,300 ಹೆಕ್ಟೇರ್ ಖಾಲಿ ಜಾಗವಿದ್ದು, ಇದರಲ್ಲಿ ಶೇ. 90 ರಷ್ಟು ಜಾಗ ರೈಲ್ವೆ ಹಳಿಯ ಪಕ್ಕದಲ್ಲಿಯೇ ಇದೆ. 15 ಮೀಟರ್‍ನಿಂದ 45 ಮೀಟರ್ ವರೆಗೆ ಹಳಿಯ ಎರಡೂ ಕಡೆಯ ಜಾಗದಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆ ಮಾಡುಲು ರೈಲ್ವೆ ಇಲಾಖೆ ಹೆಜ್ಜೆಯನ್ನಿಟ್ಟಿದೆ. ಇದರಿಂದ 2020-21ರ ವೇಳೆಗೆ 1000 ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದೆ ಎಂದು ಹೇಳಿದರು.
ರೈಲ್ವೆ ಇಲಾಖೆ ಸುಮಾರು 2 ಲಕ್ಷ ಉದ್ಯೋಗಿಗಳನ್ನು ನೇಮಿಸಿದ್ದು, ಈಗ ಮತ್ತೆ 1.3 ಲಕ್ಷ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಸಿದ್ಧತೆ ನಡೆದಿದೆ. ಅಶೋಕ ರಸ್ತೆಯಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಿಸುವುದು ನೆನೆಗುದಿಗೆ ಬಿದ್ದಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಅನುದಾನವು ಬಿಡುಗಡೆ ಮಾಡಿದೆ. ಆದ್ದರಿಂದ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಅಲ್ಲಿರುವ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ಸೇತುವೆ ನಿರ್ಮಾಣಕ್ಕೆ ಅನುವು ಮಾಡಿಕೊಡಬೇಕೆಂದು ಸಲಹೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್ ಶ್ರೀನಿವಾಸ್ ಮಾತನಾಡಿ, ಸಂಸದ ಜಿ.ಎಂ. ಸಿದ್ದೇಶ್ವರ ಅವರು ಕೇಂದ್ರ ಸರ್ಕಾರದಿಂದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ತಂದು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು.
ಶಾಸಕ ಎಸ್.ಎ.ರವೀಂದ್ರನಾಥ್ ಮಾತನಾಡಿ, ಜಿಲ್ಲೆಯ ರೈಲ್ವೆ ನಿಲ್ದಾಣದ ನೂತನ ಕಟ್ಟಡಕ್ಕೆ ಸಾಕಷ್ಟು ಒತ್ತಾಯಗಳ ನಂತರ ಇಂದು ಒಪ್ಪಿಗೆ ಸಿಕ್ಕಿರುವುದು ಸಂತೋಷದ ವಿಷಯ. ಚಿಕ್ಕ ಚಿಕ್ಕ ರೈಲ್ವೆ ಸ್ಟೇಷನ್‍ಗಳು ಸಹ ನವೀಕರಿಣ ಗೊಳ್ಳುತ್ತಿರುವುದು ನೋಡಿ ನಮ್ಮ ಜಿಲ್ಲೆಯಲ್ಲಿ ನೂತನ ರೈಲ್ವೆ ನಿಲ್ದಾಣ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಜಿಲ್ಲೆಯ ರೈಲ್ವೆ ನಿಲ್ದಾಣ ಇಡೀ ರಾಜ್ಯದಲ್ಲಿಯೇ ಮಾದರಿಯಾಗುವಂತೆ ನಿರ್ಮಾಣ ಮಾಡಬೇಕು ಎಂದರು. ನೂತನ ರೈಲ್ವೆ ನಿಲ್ದಾಣಕ್ಕೆ ಸಂಬಂಧಿಸಿದಂತೆ ಆಧುನಿಕರಣ ಸ್ಪರ್ಷ ನೀಡಿ ನಿಲ್ದಾಣದ ಆಕರ್ಷಣೆಗೆ ಒತ್ತು ನೀಡಬೇಕೆಂದು ಸೂಚಿಸಿದರು.
ಕಾರ್ಯಕ್ರಮದಲ್ಲಿ ಪಾಲಿಕೆ ಮೇಯರ್ ಶೋಭ ಪಲ್ಲಾಗಟ್ಟೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸವಿತಾ ಕಲ್ಲೇಶಪ್ಪ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್. ಶಿವಯೋಗಿಸ್ವಾಮಿ, ಮೈಸೂರಿನ ಎಡಿಆರ್‍ಎಂ ಅಜಯ್ ಸಿನ್ಹಾ, ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್, ದಾವಣಗೆರೆ ವಿಶ್ವವಿದ್ಯಾನಿಲಯದ ಸಿಂಡಿಕೆಟ್(ಸೆನೆಟ್) ಸದಸ್ಯ ಜಯಪ್ರಕಾಶ್ ಕೊಂಡಜ್ಜಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
