ತುಮಕೂರು
“ಚೆನ್ನಾಗಿ ಕೆಲಸ ಮಾಡಿ” ಎಂದು ಪಾಲಿಕೆಯ ನೂತನ ಆಯುಕ್ತ, ಐಎಎಸ್ ಅಧಿಕಾರಿ ಟಿ.ಭೂಪಾಲನ್ ಅವರು ತುಮಕೂರು ಮಹಾನಗರ ಪಾಲಿಕೆಯ ಎಲ್ಲ ಅಧಿಕಾರಿಗಳಿಗೆ ಮತ್ತು ನೌಕರ ಸಿಬ್ಬಂದಿಗೆ ಉತ್ತೇಜಿಸಿರುವುದು ಪಾಲಿಕೆಯ ಬಹುತೇಕ ಸಿಬ್ಬಂದಿಯಲ್ಲಿ ಉತ್ಸಾಹ ಮೂಡಿಸಿದೆಯಲ್ಲದೆ, ಸಾರ್ವಜನಿಕ ಹೋರಾಟಗಾರರಲ್ಲಿ “ಪಾಲಿಕೆ ಆಡಳಿತದಲ್ಲಿ ಯಾವ ಬದಲಾವಣೆಯಾದೀತು?” ಎಂಬ ಕೌತುಕ ಉಂಟುಮಾಡಿದೆ.
“ನನಗೆ ಪಾಲಿಕೆಯಲ್ಲಿ ಕೆಲಸ ಮಾಡುವ ಎಲ್ಲರೂ ಸಮಾನರು. ಅಧಿಕಾರಿಗಳಾಗಿರಲಿ ಅಥವಾ ಡಿ-ದರ್ಜೆ ನೌಕರರಿರಲಿ ಎಲ್ಲರೂ ಪಾಲಿಕೆಯ ಸಿಬ್ಬಂದಿಯೇ. ಎಲ್ಲರನ್ನೂ ಸಮಾನವಾಗಿ ನೋಡುತ್ತೇನೆ” ಎಂದು ಆಯುಕ್ತರು ಹೇಳಿರುವುದು ಹಾಗೂ “ನೌಕರರು ತಮ್ಮನ್ನು ಭೇಟಿ ಮಾಡಿ ಸಮಸ್ಯೆ ಹೇಳಿಕೊಳ್ಳಬಹುದು” ಎಂದಿರುವುದು ಸಿಬ್ಬಂದಿ ಮುಖದಲ್ಲಿ ಸಂತಸ ಮೂಡಿಸಿದೆ.
ನೌಕರರು ರಜೆ ತೆಗೆದುಕೊಳ್ಳಬೇಕಾದ ಪ್ರಸಂಗಗಳಲ್ಲಿ ಮೊದಲಿಗೆ ಆಯಾ ವಿಭಾಗದ ಮುಖ್ಯಸ್ಥರನ್ನು ಕಾಣುವ ಬಗ್ಗೆ ಹಾಗೂ ಅಗತ್ಯವಿದ್ದರೆ ತಮ್ಮನ್ನು ಕಾಣಬಹುದು ಎಂದು ಆಯುಕ್ತರು ಹೇಳಿರುವುದು ಮತ್ತು ಕಚೇರಿ ಕಾರ್ಯನಿಮಿತ್ತ ಹಣ ವೆಚ್ಚ ಮಾಡಬೇಕಾದ ಸಂರ್ಭದಲ್ಲಿ ಆಯಾ ವಿಭಾಗಗಳ ಅಧಿಕಾರಿಗಳಿಗಿರುವ ಅವಕಾಶಗಳ ಬಗ್ಗೆ ಸೂಚಿಸಿರುವುದು ಮತ್ತು ಈ ಕಾರಣಗಳಿಗಾಗಿ ಅನಾವಶ್ಯಕವಾಗಿ ತಮಗಾಗಿ ಕಾಯುತ್ತ ಸಮಯ ವ್ಯರ್ಥಮಾಡಬಾರದೆಂದು ಹೇಳಿರುವುದು ಸಿಬ್ಬಂದಿ ವಲಯದಲ್ಲಿ ನಿರಾಳತೆ ಉಂಟು ಮಾಡಿದೆ.
ಈ ಹಿಂದೆ ಒಂದು ದಿನದ ರಜೆಗೂ ಆಯುಕ್ತರನ್ನೇ ಅವಲಂಬಿಸಬೇಕಿತ್ತು. ಕಚೇರಿ ಕೆಲಸದ ಸಣ್ಣಪುಟ್ಟ ಖರ್ಚು ವೆಚ್ಚಕ್ಕೂ ಆಯುಕ್ತರ ಒಪ್ಪಿಗೆ ಪಡೆದುಕೊಳ್ಳಬೇಕಿತ್ತು. ಆಯುಕ್ತರ ಭೇಟಿಗಾಗಿ ದಿನವಿಡೀ ಕಾಯಬೇಕಿತ್ತು. ಹೊಸ ಆಯುಕ್ತರ ಈ ನಿಲುವಿನಿಂದ ಈಗ ಇವೆಲ್ಲ ಸಮಸ್ಯೆಗಳು ಬಗೆಹರಿಯಲಿವೆ ಎಂಬುದೇ ಸಿಬ್ಬಂದಿಗಳ ನಿರಾಳತೆಗೆ ಕಾರಣವಾಗಿದೆ.
ಈ ನಡುವೆ ಅನೇಕ ಹೋರಾಟಗಾರರು ಈಗಿನ ಆಯುಕ್ತರು ಕುಂದಾಪುರದಲ್ಲಿ ಉಪವಿಭಾಗಾಧಿಕಾರಿಯಾಗಿ ಹೇಗೆ ಕಾರ್ಯನಿರ್ವಹಿಸಿದ್ದರೆಂಬುದನ್ನು ತಮ್ಮದೇ ಮೂಲಗಳಿಂದ ಕೇಳಿ ತಿಳಿದುಕೊಂಡಿದ್ದು, “ಆಯುಕ್ತರು ಕಾನೂನಿನ ಪ್ರಕಾರ ಕರ್ತವ್ಯ ನಿರ್ವಹಿಸುವವರಾಗಿದ್ದಾರೆ. ಯಾವುದೇ ಪ್ರಭಾವಗಳಿಗೆ ಒಳಪಡುವವರಲ್ಲ” ಎಂದು ಹೇಳುತ್ತಿದ್ದಾರೆ. “ಆಯುಕ್ತರ ಈ ಸ್ವಭಾವವೇ ಪಾಲಿಕೆಯ ಆಡಳಿತವನ್ನು ಶೇ. 50 ಭಾಗದಷ್ಟು ಸುಲಭವಾಗಿ ವ್ಯವಸ್ಥಿತಗೊಳಿಸಿಬಿಡುತ್ತದೆ” ಎಂದು ಹೋರಾಟಗಾರರು ಅಭಿಪ್ರಾಯಪಡುತ್ತಿದ್ದಾರೆ. “ಆಯುಕ್ತರು ಪಾಲಿಕೆ ಕಚೇರಿಯ ಯಾರೋ ಒಂದಿಬ್ಬರು ಸಿಬ್ಬಂದಿಯ ಮಾತಿಗಷ್ಟೇ ಬೆಲೆಕೊಟ್ಟರೆ ಪರಿಸ್ಥಿತಿ ಬದಲಾಗುವುದಿಲ್ಲ. ಅದು ಇನ್ನೊಂದು ರೀತಿಯ ಪರಿಣಾಮ ಬೀರಬಹುದು. ಆದ್ದರಿಂದ ಆಯುಕ್ತರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು.
ಆಗ ಟೀಂ ವರ್ಕ್ ಉಂಟಾಗುತ್ತದೆ. ಇದಲ್ಲದೆ ಪಾಲಿಕೆ ಕಚೇರಿಯ ವಿವಿಧ ವಿಭಾಗಗಳಿಗೆ ಆಯುಕ್ತರು ಆಗಾಗ ಭೇಟಿ ಕೊಟ್ಟು ಪರಿಸ್ಥಿತಿಗಳನ್ನು ತಾವೇ ಮನಗಾಣಬೇಕು. ಇದು ಆಡಳಿತ ಸುಧಾರಣೆಗೆ ಸಹಕಾರಿಯಾಗುತ್ತದೆ” ಎಂದು ಹೋರಾಟಗಾರರು ಹೇಳುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
