ಚಳ್ಳಕೆರೆ
ನಗರದ ವೆಂಕಟೇಶ್ವರ ನಗರದಲ್ಲಿ ಜ.2ರಂದು ನಡೆದ ಅಗ್ನಿ ದುರಂತದಲ್ಲಿ 35 ಗುಡಿಸಲು ಸಂಪೂರ್ಣವಾಗಿ ಸುಟ್ಟಿದ್ದು, ಅವರಿಗೆ ಭರವಸೆ ನೀಡಿದಂತೆ ಕೇವಲ 25 ದಿನದಲ್ಲಿ ಎಲ್ಲರಿಗೂ 12 ಲಕ್ಷ ವೆಚ್ಚದಲ್ಲಿ ತಾತ್ಕಾಲಿಕವಾಗಿ ಶೆಡ್ಗಳನ್ನು ನಿರ್ಮಿಸಿದ್ದು, ಮತ್ತಷ್ಟು ಸೌಲಭ್ಯಗಳನ್ನು ನೀಡಲಾಗುವುದು ಎಂದು ಕ್ಷೇತ್ರದ ಶಾಸಕ, ಹಟ್ಟಿಚಿನ್ನದ ಗಣಿ ನಿಗಮದ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.
ಅವರು, ಶನಿವಾರ ಮಧ್ಯಾಹ್ನ ಇಲ್ಲಿನ ಲಿಡ್ಕರ್ ಕಾಲೋನಿ ಪಕ್ಕದಲ್ಲಿ ನಿರ್ಮಿಸಿರುವ 35ಕ್ಕೂ ಹೆಚ್ಚು ಶೆಡ್ಗಳನ್ನು ಉದ್ಘಾಟಿಸಿ ಮಾತನಾಡಿದರು. ನಗರಸಭೆ ಆಡಳಿತ, ತಾಲ್ಲೂಕು ಆಡಳಿತ ಹಾಗೂ ನಿರ್ಮಿತಿ ಕೇಂದ್ರ ಸಹಯೋಗದಲ್ಲಿ ತಾತ್ಕಾಲಿಕವಾಗಿ ಈ ಶೆಡ್ಗಳನ್ನು ನಿರ್ಮಾಣ ಮಾಡಲಾಗಿದೆ. 35 ಕುಟುಂಬಗಳು ಸಹ ನೆಲೆ ಇಲ್ಲದೆ ತೊಂದರೆಗೀಡಾಗಿದ್ದು, ಕೂಡಲೇ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ ಹಣ ಬಿಡುಗಡೆಗೊಳಿಸಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಗುವುದು. ಕೂಡಲೇ ಎಲ್ಲರೂ ಈ ಶೆಡ್ಗಳಿಗೆ ವೆಂಕಟೇಶ್ವರ ನಗರದಿಂದ ಆಗಮಿಸಿ ನೆಲೆಸುವಂತೆ ಅವರು ಮನವಿ ಮಾಡಿದರು.
ಪೌರಾಯುಕ್ತ ಜೆ.ಟಿ.ಹನುಮಂತರಾಜು ಮಾತನಾಡಿ, ಜ.12ರ ಶನಿವಾರ ಈ ಶೆಡ್ಗಳ ನಿರ್ಮಾಣ ಕಾಮಗಾರಿ ಪ್ರಾರಂಭವಾಯಿತು. ನಿರ್ಮಿತಿ ಕೇಂದ್ರದ ಸಹಕಾರದೊಂದಿಗೆ ಈ 35 ಶೆಡ್ಗಳನ್ನು ಹಗಲಿರುಳು ಶ್ರಮಿಸಿ ನಿರ್ಮಿಸಲಾಗಿದೆ. ಕಾರಣ 35 ನೊಂದ ಕುಟುಂಬಗಳಿಗೂ ವಸತಿ ಸೌಕರ್ಯ ಕಲ್ಪಿಸುವಂತೆ ಕ್ಷೇತ್ರದ ಶಾಸಕರು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದು, ತಾಲ್ಲೂಕು ಆಡಳಿತದ ಸಹಕಾರದೊಂದಿಗೆ ನಿಗದಿತ ಅವಧಿಯೊಳಗೆ 35 ಶೆಡ್ಗಳನ್ನು ನಿರ್ಮಿಸಲಾಗಿದೆ ಎಂದರು. ಜ.28ರಿಂದ ವಿದ್ಯುತ್ ಸಂಪರ್ಕ ಕಾಮಗಾರಿ ಚಾಲನೆಯಾಗಲಿದೆ ಎಂದರು.
ಪ್ರಸ್ತುತ 35 ಶೆಡ್ಗಳಲ್ಲಿ ಸಾಧ್ಯವಾದಷ್ಟು ಸೌಲಭ್ಯಗಳನ್ನು ನೀಡಲಾಗಿದೆ. ಕುಡಿಯುವ ನೀರು, ಶೌಚಾಲಯ ನಿರ್ಮಾಣ ಹಾಗೂ ರಸ್ತೆಯನ್ನು ಸಹ ನಿರ್ಮಿಸಲಾಗುವುದು. ಪ್ರತಿಯೊಂದು ಮನೆಗೂ ವಿದ್ಯುತ್ ಸಂಪರ್ಕ ನೀಡಿ ಮೀಟರ್ ಅಳವಡಿಸಲಾಗುವುದು. ಶೆಡ್ಗಳಲ್ಲಿ ಗಾಳಿ ಬೆಳಕು ಬರಲು ಒಂದು ಕಿಟಕಿಯನ್ನು ನಿರ್ಮಿಸಲಾಗಿದೆ. ಕೆಳಭಾಗದಲ್ಲಿ ಕಡಪ ಕಲ್ಲಿನ ಬಂಡೆಗಳನ್ನು ಹಾಸಿದ್ದು, ಮಳೆ ಹಾಗೂ ಗಾಳಿಯಿಂದ ರಕ್ಷಣೆ ನೀಡಲಾಗಿದೆ.
ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ, ಇಒ ಈಶ್ವರಪ್ರಸಾದ್, ಬೆಸ್ಕಾಂ ಇಂಜಿನಿಯರ್ ಜಿ.ಶಿವಪ್ರಸಾದ್, ನಗರಸಭಾ ಸದಸ್ಯರಾದ ಬಿ.ಟಿ.ರಮೇಶ್ಗೌಡ, ಟಿ.ಮಲ್ಲಿಕಾರ್ಜುನ, ಎಂ.ಜೆ.ರಾಘವೇಂದ್ರ, ವೈ.ಪ್ರಕಾಶ್, ತಾಲ್ಲೂಕು ಪಂಚಾಯಿತಿ ಸದಸ್ಯ ಜಿ.ವೀರೇಶ್, ಆರ್.ಪ್ರಸನ್ನಕುಮಾರ್, ಕೃಷ್ಣ, ಪಾಲಯ್ಯ, ಸಹಾಯಕ ಇಂಜಿನಿಯರ್ ಲೋಕೇಶ್, ಜೆಡಿಎಸ್ ಮುಖಂಡ ಎತ್ತಿನಹಟ್ಟಿಗೌಡ(ತಿಪ್ಪೇಸ್ವಾಮಿ), ರೆಡ್ಡಿಹಳ್ಳಿ ಶಿವಣ್ಣ, ಭೀಮನಕೆರೆ ಶಿವಮೂರ್ತಿ, ಹೊನ್ನೂರುಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








